ವಿಜಯಪುರ : ಕುಟುಂಬಸ್ಥರ ಬಳಿ ಜಮೀನು ಮಾರಿದ ಹಣವಿರುವುದರ ಮಾಹಿತಿ ತಿಳಿದು ಹಣ ಲಪಟಾಯಿಸಲು ಸಂಚು ರೂಪಿಸಿ ಯುವಕನನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ, ಕಿಡ್ನಾಪ್ ಮಾಡಿ ₹12 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 8 ಜನ ಆರೋಪಿಗಳನ್ನು ಗಾಂಧಿಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ ಗೋಪಾಲ ಮಾದರ, ದಶರಥ ಮಾದರ, ಶಿವಾನಂದ ನಂದಿಕೋಲಮಠ, ಸುನೀಲ ನಾವಿ, ಶಿವಕುಮಾರ ಹೊಸಟ್ಟಿ, ನಿಂಗಪ್ಪ ನಾವದಗಿ, ಮಹಮ್ಮದರಫೀಕ್ ನದಾಫ್, ವಿಜಯಲಕ್ಷ್ಮಿ ತೊನಶ್ಯಾಳ ಬಂಧಿತರು. ನನ್ನ ಮಗ ಸಾಹಿಲ್ ಚಪ್ಪರಬಂದನನ್ನು ಯಾರೋ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಜೂನ್ 19ರಂದು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ನಗರದ ಕಸ್ತೂರಿ ಕಾಲೋನಿ ನಿವಾಸಿ ಮಮ್ತಾಜ್ ಚಪ್ಪರಬಂದ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಗಾಗಿ ಗಾಂಧಿಚೌಕ ಠಾಣೆ ಪಿಐ ಪ್ರದೀಪ ತಳಕೇರಿ, ಪಿಎಸ್‌ಐ ಸುಷ್ಮಾ ನಂದಿಗೋಣ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಮೊಬೈಲ್ ಕರೆಗಳನ್ನು ಆಧರಿಸಿ ತನಿಖಾ ತಂಡ ಬೆಳಗಾವಿ ಜಿಲ್ಲೆಯ ಘಟಪ್ರಭಾ ಬಳಿ ಅಪಹರಣಕಾರರ ತಂಡದ 6 ಜನ ಆರೋಪಿಗಳನ್ನು ಬಂಧಿಸಿದ್ದು, ಅಪಹರಣಕ್ಕೊಳಗಾಗಿದ್ದ ಸಾಹಿಲ್ ಚಪ್ಪರಬಂದನನ್ನು ಜೂನ್ 21ರಂದು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸಾಹಿಲ್ ಚಪ್ಪರಬಂದ ಹಾಗೂ ಆರೋಪಿ ಮಹ್ಮಮದರಫೀಕ್ ನದಾಫ್ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಸಾಹಿಲ್ ಕುಟುಂಬಸ್ಥರು 2 ತಿಂಗಳ ಹಿಂದೆ 2 ಎಕರೆ ಜಮೀನನ್ನು ₹ 26 ಲಕ್ಷಕ್ಕೆ ಮಾರಾಟ ಮಾಡಿದ್ದರು. ಈ ವಿಷಯವನ್ನು ಸಾಹಿಲ್ ಜೊತೆಗಿದ್ದ ಆರೋಪಿ ಮಹ್ಮಮದರಫೀಕ್‌ನಿಗೆ ಹೇಳಿದ್ದ. ಹೇಗಾದರೂ ಮಾಡಿ ಸಾಹಿಲ್ ನಿಂದ ಹಣ ಸುಲಿಗೆ ಮಾಡಬೇಕೆಂದು ನಿರ್ಧರಿಸಿ ತನ್ನ ಸಹಚರರೊಂದಿಗೆ ಸಂಚು ರೂಪಿಸಿ ಸಾಹಿಲ್ ನಿಗೆ ಹನಿಟ್ರ್ಯಾಪ್ ಬಲೆಗೆ ಕೆಡವಿ ಮೂಲಕ ಅಪಹರಣ ಮಾಡಿ ಹಣ ಲಪಟಾಯಿಸುವ ಯೋಜನೆ ರೂಪಿಸಿದ್ದ.
ಇದಕ್ಕಾಗಿ ನಗರದ ಶಿವಾಜಿ ಸರ್ಕಲ್‌ದಲ್ಲಿ ಪಿಜಿ ಮ್ಯಾನೇಜರ್ ಆಗಿದ್ದ ನಿಂಗಪ್ಪ ನಾವದಗಿಗೆ ವಿಷಯ ತಿಳಿಸಿ ಪಿಜಿಯಲ್ಲಿ ವಾಸಿಸುತ್ತಿದ್ದ ವಿಜಯಲಕ್ಷ್ಮೀ ಎಂಬ ಮಹಿಳೆಗೆ ಒಳಸಂಚಿನ ವಿಷಯ ತಿಳಿಸಿ ಅವಳ ಮೂಲಕ ಸಾಹಿಲ್ ನನ್ನು ಬಲೆಗೆ ಕೆಡವಿದ್ದಾರೆ. ಜೂನ್ 18ರಂದು ಆರೋಪಿ ವಿಜಯಲಕ್ಷ್ಮೀ ಮೂಲಕ ಸಾಹೀಲ್‌ನಿಗೆ ಪೋನ್ ಮಾಡಿ ರಾತ್ರಿ 8 ಗಂಟೆ ಸುಮಾರಿಗೆ ವಿಜಯಪುರ ನಗರದ ಸರ್ಕಾರಿ ಆಸ್ಪತ್ರೆ ಹಿಂದುಗಡೆ ಇರುವ ಖಾಲಿ ಜಾಗದಲ್ಲಿ ಭೇಟಿಯಾಗಲು ತಿಳಿಸಿದ್ದಾಳೆ. ಸಾಹೀಲ್ ಭೇಟಿಯಾಗಲು ಹೋದ ಸಂದರ್ಭದಲ್ಲಿ ಆರೋಪಿಗಳು ಸ್ಕಾರ್ಪಿಯೋ (ನಂ. ಎಂಎಚ್.06 ಎಡಬ್ಲು 7474) ದಲ್ಲಿ ಸಾಹೀಲ್ ನನ್ನು ಅಪಹರಿಸಿಕೊಂಡು ಹೋಗಿ ಹಣ ಬೇಡಿಕೆ ಇಟ್ಟಿದ್ದರು.
ಹನಿಟ್ರ್ಯಾಪ್ ಹಾಗೂ ಅಪಹರಣ ಪ್ರಕರಣವನ್ನು ಕೇವಲ 2 ದಿನಗಳಲ್ಲೇ ಭೇದಿಸಿದ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.