ಹೊನ್ನಾಳಿ: ತುಮ್ಮಿನಕಟ್ಟೆ ಚರಂಡಿ ಕಾಮಗಾರಿ ಕಳಪೆ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Dec 22, 2025, 01:30 AM IST
ಹೊನ್ನಾಳಿ ಫೋಟೋ 21ಎಚ್.ಎಲ್.ಐ3. ಪಟ್ಟಣದ ಮ್ಮಿನಕಟ್ಟೆ ರಸ್ತೆಯಲ್ಲಿರುವ ಖಬರಸ್ತಾನದ ಬಳಿ ರಸ್ತೆ ಮಧ್ಯದಿಂದ ಕಡಿಮೆ ಜಾಗ ಬಳಸಿಕೊಂಡು ನಿರ್ಮಿಸುತ್ತಿರುವ ಚರಂಡಿಗೆ ಬಳಸಿದ ಸಿಮೆಂಟ್ ಉದುರುತ್ತಿದೆ. ಕಳಪೆಗುಣಮಟ್ಟದ ಜಲ್ಲಿಕಲ್ಲುಗಳನ್ನು ಬಳಸಲಾಗಿದೆ. ಚರಂಡಿ ಮಗ್ಗುಲಿಗೆ ಗ್ರಾವೆಲ್ ಮಣ್ಣು ಬಳಸಿಲ್ಲ ಎಂದು ರೇಣುಕಾಚಾರ್ಯ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ  ಆರೋಪಿಸಿದರು.   | Kannada Prabha

ಸಾರಾಂಶ

ತಾಲೂಕಿನ ಗಡಿಭಾಗದಿಂದ ಆರಂಭವಾಗುವ ತುಮ್ಮಿನಕಟ್ಟೆ ರಸ್ತೆಯಲ್ಲಿ ಬರುವ ಖಬರಸ್ಥಾನದಿಂದ ಸಂಗೊಳ್ಳಿ ರಾಯಣ್ಣವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಳಪೆಯಿಂದ ಕೂಡಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಗಡಿಭಾಗದಿಂದ ಆರಂಭವಾಗುವ ತುಮ್ಮಿನಕಟ್ಟೆ ರಸ್ತೆಯಲ್ಲಿ ಬರುವ ಖಬರಸ್ಥಾನದಿಂದ ಸಂಗೊಳ್ಳಿ ರಾಯಣ್ಣವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಳಪೆಯಿಂದ ಕೂಡಿದೆ. ಇದನ್ನು ಕೂಡಲೇ ಸರಿಪಡಿಸದಿದ್ದರೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನಲ್ಲಿ ಭಾನುವಾರ ಖಬರಸ್ತಾನದ ಬಳಿ ನಡೆಯುತ್ತಿರುವ ಚರಂಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಗದಗದಿಂದ ಹೊನ್ನಾಳಿವರೆಗಿನ ರಸ್ತೆ ವಿಸ್ತೀರ್ಣ 138 ಕಿ.ಮೀ ಹೊಂದಿದೆ. ಅದಕ್ಕಾಗಿ 902 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ರಸ್ತೆಯನ್ನು ಚುತುಷ್ಪಥ ರಸ್ತೆಯನ್ನಾಗಿ ಮಾಡುವಂತೆ ನಾನು ಕೆ -ಶಿಪ್ ಅಧಿಕಾರಿಗಳೊಂದಿಗೆ 2 ಬಾರಿ ಸಭೆ ನಡೆಸಿದ ಬಳಿಕ ಈ ಕಾಮಗಾರಿ ಸೇರ್ಪಡೆ ಮಾಡಿಸಿದ್ದೆ ಎಂದರು.

ತುಮ್ಮಿನಕಟ್ಟೆ ರಸ್ತೆ ವಿಸ್ತೀರ್ಣ ಮಧ್ಯ ರಸ್ತೆಯಿಂದ 11.5 ಮೀಟರ್ ನಂತೆ ಒಟ್ಟು 23 ಮೀಟರ್ ಅಗಲವಿರಬೇಕು. ಆದರೆ ತುಮ್ಮಿನಕಟ್ಟೆ ರಸ್ತೆ ಎಡಭಾಗದಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳಲಾಗಿದೆ. ಬಲಭಾಗದಲ್ಲಿ ಹೆಚ್ಚು ಜಾಗವನ್ನು ಕ್ರಮಿಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ. ಪಟ್ಟಣದೊಳಗೆ ಅಂಕುಡೊಂಕಾಗಿ ಚರಂಡಿ ನಿರ್ಮಿಸಲಾಗಿದೆ ಎಂದರು.

ಖಬರಸ್ಥಾನದ ಬಳಿ ನಡೆಯುತ್ತಿರುವ ಚರಂಡಿಗೆ ಬಳಸಿದ ಸಿಮೆಂಟ್ ಉದುರುತ್ತಿದೆ, ಚರಂಡಿ ಪಕ್ಕಕ್ಕೆ ಗ್ರಾವೆಲ್ ಬಳಸದೇ ರಸ್ತೆಯಲ್ಲಿಯೇ ಸಿಕ್ಕ ಹೊಳೆಮಣ್ಣು ಬಳಸಲಾಗಿದೆ. ಚರಂಡಿ ಕಾಮಗಾರಿಯಲ್ಲಿ ಗುಣಮಟ್ಟದ ಜಲ್ಲಿಕಲ್ಲುಗಳನ್ನು ಬಳಸಿಲ್ಲ, ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ ಎಂದರು.

ಈ ಕಾಮಗಾರಿ ಎಸ್ಟೀಮೇಟ್ ಪ್ರಕಾರ ನಡೆಯಬೇಕು, ಈಗಾಗಲೇ ಆಗಿರುವ ಕಾಮಗಾರಿಯ ಬಿಲ್ ತಡೆ ಹಿಡಿಯಬೇಕು, ಕಾಮಗಾರಿ ಸರಿಪಡಿಸುವವರೆಗೂ ಬಿಲ್ ಮಾಡಬಾರದು, ಜಾಗ ಕಳೆದುಕೊಂಡ ಮಾಲೀಕರು ಎಲ್ಲರೂ ಅದರ ಮೌಲ್ಯಕ್ಕನುಗುಣವಾಗಿ ಪರಿಹಾರ ಪಡೆದುಕೊಂಡಿದ್ದಾರೆ. ಯಾರಿಗೂ ಜಾಗ ಬಿಟ್ಟುಕೊಡುವ ಅಗತ್ಯವಿಲ್ಲ ಎಂದರು.

ನಿಮ್ಮದೇ ಸರ್ಕಾರ ತನಿಖೆ ಮಾಡಿಸಿ:

25 ಕೋಟಿ ರು. ವೆಚ್ಚದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿ ನನ್ನ ಅವಧಿಯಲ್ಲಿ ಮಾಡಿಸಿದ್ದು, ಕಾಮಗಾರಿ ಕಳಪೆಯಾಗಿಲ್ಲ, ಆದರೆ ಅದು ಪೂರ್ಣಗೊಂಡಿಲ್ಲ ಅಷ್ಟೇ, ನಾನು ಸೋತು ಎರಡೂವರೆ ವರ್ಷ ಆಗಿದೆ. ಗುತ್ತಿಗೆದಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಈ ಗುತ್ತಿಗೆದಾರ ಸಿಎಂ ಪಕ್ಕದಲ್ಲಿಯೇ ಇರುತ್ತಾನೆ. ಅವನನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ತನಿಖೆ ಮಾಡಿಸಲಿ, ನಿಮ್ಮದೇ ಸರ್ಕಾರ ಇದೆಯಲ್ಲ, ತನಿಖೆಗೆ ನಾನೇನು ಅಡ್ಡಬಂದಿಲ್ಲ ಎಂದರು.

ತಾ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ಶ್ರೀಧರ್, ಬಾಬು, ಮುಖಂಡರಾದ ಎಂ.ಎಸ್. ಫಾಲಾಕ್ಷಪ್ಪ, ಎಸ್.ಎಸ್. ಬೀರಪ್ಪ, ಪೇಟೆ ಪ್ರಶಾಂತ್, ರಾಘವೇಂದ್ರ, ನೆಲಹೊನ್ನೆ ಮಂಜುನಾಥ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ