ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮೈಸೂರು ಆಕಾಶವಾಣಿ ಹಾಗೂ ಕರ್ನಾಟಕ ಜಾನಪದ ಅಕಾಡಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗೌರಮ್ಮರಿಗೆ ಶಾಲು ಹೊದಿಸಿ ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಗಡಿಜಿಲ್ಲೆ ಚಾಮರಾಜನಗರ ಸಾಕಷ್ಟು ಅರಣ್ಯ ಪ್ರದೇಶಗಳಿಂದ ಕೂಡಿರುವ ಸಂಪದ್ಬರಿತ, ಸುಂದರ ಜಿಲ್ಲೆಯಾಗಿದೆ. ಜಾನಪದ ಕಲೆಗಳ ತವರೂರು ಸಹ ಚಾಮರಾಜನಗರವೇ ಆಗಿದೆ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡಮಿ ಜಿಲ್ಲೆಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಜಾನಪದ ಕಲೆಗಳು, ಹಾಡುಗಳು ಇನ್ನಷ್ಟು ಪಸರಿಸಿ ಬೆಳಕಿಗೆ ಬರಬೇಕು. ಆಕಾಶವಾಣಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಅದರಲ್ಲೂ ಮದುವೆ, ಉತ್ಸವಗಳಂತಹ ಶುಭ ಸಮಾರಂಭಗಳಲ್ಲಿ ಹಾಡುವ ಸೋಬಾನೆ ಪದಗಳನ್ನು ಸಂಗ್ರಹಿಸಿ (ಡಾಕುಮೆಂಟೇಶನ್) ದಾಖಲೀಕರಣ ಮಾಡಲು ಮುಂದಾಗಬೇಕು. ಹೊನ್ನೂರು ಗೌರಮ್ಮ ಇನ್ನಷ್ಟು ಕಾಲ ಜೀವಿಸಿ ಮತ್ತಷ್ಟು ಮದುವೆಗಳನ್ನು ಮಾಡಿಸಲಿ ಎಂದು ಹಾರೈಸಿದರು.
ಅಕಾಡಮಿಯ ಸದಸ್ಯರು ಹಾಗೂ ಮೈಸೂರು ಆಕಾಶವಾಣಿಯ ಡಾ.ಉಮೇಶ್ ಮಾತನಾಡಿ, ಇಂದಿನ ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾನಪದ ಕಲೆಗಳು, ಹಾಡುಗಳು ತಮ್ಮ ಜೀವಂತಿಕೆ ಕಂಡುಕೊಂಡಿವೆ. ಸೋಬಾನೆ ಪದಗಳು ಕೇವಲ ರಂಜನೀಯವಲ್ಲ. ಅವು ಮದುವೆಯಾಗುವ ಹೊಸ ಜೋಡಿಗಳಿಗೆ ಮುಂದಿನ ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ಮಾರ್ಗದರ್ಶಿಗಳಾಗಿವೆ ಎಂದರು. ಹೊನ್ನೂರು ಗೌರಮ್ಮ ಕೆಲ ಸೋಬಾನೆ ಪದಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಕರ್ನಾಟಕ ಜಾನಪದ ಅಕಾಡಮಿ ರಿಜಿಸ್ಟಾರ್ ನಮ್ರತಾ, ಜನಪದ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ ಇತರರು ಕಾರ್ಯಕ್ರಮದಲ್ಲಿ ಇದ್ದರು.