ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಬಳ್ಳಾರಿಯಲ್ಲಿ ಮುಸ್ಲಿಮರಿಂದ ಪ್ರತಿಭಟನೆ

KannadaprabhaNewsNetwork | Published : Apr 22, 2025 1:48 AM

ಸಾರಾಂಶ

ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಸಾವಿರಾರು ಮುಸ್ಲಿಂ ಸಮುದಾಯದವರು ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳ್ಳಾರಿ: ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಸಾವಿರಾರು ಮುಸ್ಲಿಂ ಸಮುದಾಯದವರು ನಗರದ ಮೋತಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ಹೊರ ಹಾಕಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ತಿದ್ದುಪಡಿ ನೀತಿ ಅತ್ಯಂತ ಅವೈಜ್ಞಾನಿಕ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಹತ್ತಿಕ್ಕುವ ಷಡ್ಯಂತ್ರ್ಯವಾಗಿದೆ. ಕೇಂದ್ರದ ಹುನ್ನಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಪ್ರಜಾಸತ್ತಾತ್ಮಕ ಹಾಗೂ ಧಾರ್ಮಿಕ ಹಕ್ಕುಗಳಿಗಾಗಿ ನಾವು ಹೋರಾಟ ಮಾಡುತ್ತೇವೆ. ನ್ಯಾಯಾಂಗ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಕಾಂಗ್ರೆಸ್ ಸಂಸದ ತುಕಾರಾಂ, ಶಾಸಕ ಬಿ. ನಾಗೇಂದ್ರ, ನಾರಾ ಭರತ್ ರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನು ಬೆಂಬಲಿಸಿ ಪಾಲ್ಗೊಂಡರಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ವರೆಗೂ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ. ನಿಮಗೆ ತಾಕತ್ತು ನೀಡಲೆಂದೇ ನಾವು ಬಂದಿದ್ದೇವೆ ಎಂದು ಮುಸ್ಲಿಂ ಸಮಾಜಕ್ಕೆ ಧೈರ್ಯ ತುಂಬಿದರಲ್ಲದೆ, ಕೇಂದ್ರ ಸರ್ಕಾರ ತಿದ್ದುಪಡಿ ನೀತಿಯಿಂದ ಕೂಡಲೇ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರ ತಂಟೆಗೆ ಬಂದ್ರೆ ಸುಮ್ಮನಿರಲ್ಲ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ. ನಾಗೇಂದ್ರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮುಸ್ಲಿಂ ಸಮಾಜವನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರ್ಕಾರ ಅನೇಕ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಆದರೆ, ರಾಜ್ಯದಲ್ಲಿ ಈ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಅನುಷ್ಠಾನಕ್ಕೆ ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ. ಈ ನಾಡಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದವರು ಸಹೋದರರಂತೆ ಸೌಹಾರ್ದತೆಯುತ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಮಾಜವನ್ನು ಮೂಲೆಗುಂಪು ಮಾಡುವ ಹುನ್ನಾರಕ್ಕೆ ಮುಂದಾಗಿದೆ. ಕೇಂದ್ರದ ಷಡ್ಯಂತ್ರಕ್ಕೆ ರಾಜ್ಯದ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ. ಮುಸ್ಲಿಮರ ತಂಟೆಗೆ ಬಂದ್ರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು. ಉರ್ದುವಿನಲ್ಲಿ ಭಾಷಣ ಮಾಡುವ ಮೂಲಕ ಶಾಸಕ ನಾಗೇಂದ್ರ ಸಮುದಾಯದ ಗಮನ ಸೆಳೆದರು.

ನಿಮಗಾಗಿ ನಾವು ಪ್ರಾಣ ಕೊಡ್ತೀವಿ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ, ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಕೇಂದ್ರದ ಬಿಜೆಪಿ ಸರ್ಕಾರ, ಹಿಟ್ಲರ್ ನೀತಿ ಅನುಸರಿಸುತ್ತಿದೆ. ಪ್ರಧಾನಿ ಮೋದಿ ಅವರು ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಆದರೆ, ಮುಸ್ಲಿಂ ಸಮಾಜದ ಹಕ್ಕುಗಳಿಗಾಗಿ ನಾವು ಹೋರಾಟ ಮಾಡುತ್ತೇವೆ. ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಸಮಾಜದವರು ಪ್ರಾಣ ಕೊಟ್ಟಿದ್ದು, ಈಗ ನಿಮಗಾಗಿ ಹಿಂದೂಗಳಾದ ನಾವು ಪ್ರಾಣ ಕೊಡಲು ಸಿದ್ಧರಿದ್ದೇವೆ. ನಿಮ್ಮ ಪ್ರಾಣ ಕಿತ್ತಿಕೊಂಡ್ರೆ ನಮ್ಮ ಪ್ರಾಣ ನೀಡಿ ನಿಮ್ಮನ್ನು ಕಾಪಾಡುತ್ತೇವೆ ಎಂದು ವಿಶ್ವಾಸ ತುಂಬಿದರು.

ವಕ್ಫ್‌ ನಿಮ್ಮ ಆಸ್ತಿ. ನಿಮ್ಮ ಪೂರ್ವಜರು ನೀಡಿದ ಆಸ್ತಿಯಾಗಿದ್ದು, ಇದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮನ್ನು ಮುಟ್ಟಲು ಸಹ ಸಾಧ್ಯವಿಲ್ಲ. ನಮ್ಮನ್ನುಮುಟ್ಟಿದ ಬಳಿಕವೇ ನಿಮ್ಮನ್ನು ಮುಟ್ಟಬೇಕಾಗುತ್ತದೆ ಎಂದು ಶಾಸಕ ಭರತ್ ರೆಡ್ಡಿ ಗುಡುಗಿದರು.

ಹತ್ತು ಮೋದಿಗಳು ಬಂದ್ರೂ ಏನೂ ಮಾಡಕ್ಕಾಗಲ್ಲ: ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಮಾತನಾಡಿ, ವಕ್ಫ್ ಬೋರ್ಡ್‌ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ನಮಾಜ್ ಮಾಡುವ ಸ್ಥಳವನ್ನು ವಕ್ಫ್ ಆಸ್ತಿ ಎಂದು ಸುಳ್ಳು ಹೇಳುತ್ತಿದೆ. ಈ ದೇಶದಲ್ಲಿ ನೂರಾರು ಜನ ರಾಜಮಹಾರಾಜರು ಆಡಳಿತ ಮಾಡಿ ಹೋಗಿದ್ದಾರೆ. ಎಲ್ಲ ಕಾಲದಲ್ಲೂ ಮಸೀದಿಗಳಿದ್ದವು. ಆದರೆ, ಬಿಜೆಪಿ ಮಸೀದಿಗಳ ಇರುವಿಕೆ ಕುರಿತು ದಾಖಲೆ ಕೇಳುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರದ ಬಿಜೆಪಿ ನಾಯಕರು ಮುಸ್ಲಿಂ ಸಮಾಜವನ್ನು ವಿಲನ್‌ನಂತೆ ಬಿಂಬಿಸುತ್ತಿದ್ದಾರೆ. ದೇಶದಲ್ಲಿ ಹತ್ತಾರು ಸಮಸ್ಯೆಗಳು ಇವೆ. ಆದರೆ, ವಕ್ಫ್‌ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಹೊಸ ವಿಷಯ ಹೊರತಂದು ಬಿಜೆಪಿಗರು ಜನರ ಭಾವನೆಗಳ ಮೇಲೆ ಆಟವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮೋದಿ, ಅಮಿತ್‌ ಶಾಗಳಿಗೆ ನಾವು ಹೆದರೋದಿಲ್ಲ ಎಂದು ಹೇಳಿದರು. ಸಂಸದ ಈ. ತುಕಾರಾಂ ಮಾತನಾಡಿ, ಬಿಜೆಪಿಯವರು ಜನಾದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹೀಗಾಗಿ ಮುಸ್ಲಿಂ ಸಮಾಜದ ಹೆದರುವ ಅಗತ್ಯವಿಲ್ಲ ಎಂದರು.

ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಕಳುಹಿಸಿಕೊಟ್ಟರು. ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎಸ್‌ಪಿ ಡಾ. ಶೋಭಾರಾಣಿ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿದರು. ಮೇಯರ್ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಮುಖಂಡರಾದ ಎ. ಮಾನಯ್ಯ, ಮುಂಡ್ರಗಿ ನಾಗರಾಜ್, ಹುಮಾಯೂನ್ ಖಾನ್, ಅಲ್ಲಂ ಪ್ರಶಾಂತ್, ರಾಜೇಶ್ವರಿ ಭಾಗವಹಿಸಿ, ಹೋರಾಟವನ್ನು ಬೆಂಬಲಿಸಿದರು.

Share this article