ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ, ಕರ್ನಾಟಕ ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ 2022ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಕಿತ್ತಳೆನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ. ಹಂಝತುಲ್ಲಾ ಅವರನ್ನು ಕೆ.ಎಂ.ಎ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ, ತಮ್ಮ ದೂರದೃಷ್ಟಿತದಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ ನನ್ನು 1978ರಲ್ಲೇ ಹುಟ್ಟು ಹಾಕಿ ಕಳೆದ 46 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆಯಲ್ಲಿ ತೊಡಗಿಸಿಕೊಂಡು ಇಂದಿಗೂ ಸಂಸ್ಥೆಯ ಉನ್ನತಿಗಾಗಿ ಅಗತ್ಯ ಮಾರ್ಗದರ್ಶನ ನೀಡುತ್ತಿರುವ ಹಿರಿಯರಾದ ಕುವೇಂಡ ವೈ. ಹಂಝತುಲ್ಲಾ ಅವರನ್ನು ಸಮಾರಂಭದಲ್ಲಿ ಕೊಡವ ಮುಸ್ಲಿಂ ಸಮುದಾಯದ ಪರವಾಗಿ ವಿಶೇಷವಾಗಿ ಆಧರಿಸಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದ ಕೊಡವ ಮುಸ್ಲಿಂ ಸಮುದಾಯಕ್ಕೆ ಒಂದು ಅಸ್ತಿತ್ವ ಕಲ್ಪಿಸುವಲ್ಲಿ ಇವರು ಪಟ್ಟ ಶ್ರಮಕ್ಕೆ ಬೆಲೆಕಟ್ಟಲಾಗದು. ಕೊಡಗಿನ ಅಪ್ಪಟ ಮೂಲ ನಿವಾಸಿಗರಾಗಿರುವ ಕೊಡವ ಮುಸ್ಲಿಂ ಬಾಂಧವರು ಒಂದು ಸಮುದಾಯವಾಗಿ ಇಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದರೆ ಅದರ ಬಹುಪಾಲು ಶ್ರೇಯಸ್ಸು ಹಂಝತುಲ್ಲಾ ಅವರಿಗೆ ಸಲ್ಲಲೇಬೇಕು. ಅಂದಿನ ತೀರಾ ಕಷ್ಟಕರದ ಕಾಲಘಟ್ಟದಲ್ಲೂ ಕೂಡ ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಕೊಡವ ಮುಸ್ಲಿಂ ಅಸೋಸಿಯೇಷನ್ ಗೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಗುಣಗಾನಗೈದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ, ನಿವೃತ್ತ ಐ.ಪಿ.ಎಸ್. ಅಧಿಕಾರಿ ಯು. ನಿಸಾರ್ ಅಹಮದ್, ನಿವೃತ್ತ ಎಡಿಜಿಪಿ ಜಿ.ಎಂ. ಹಯಾತ್, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್ ಉತ್ತಯ್ಯ, ಕೆ.ಎಂ. ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸನ್ಮಾನಿತರ ಪರಿಚಯ ಭಾಷಣ ಮಾಡಿದರು. ಕರತೊರೆರ ಶರ್ಫುದ್ದೀನ್, ಮುಸ್ಕಾನ್ ಸೂಫಿ, ಅಕ್ಕಳತಂಡ ಫಿದಾ ಸಾನಿಯಾ ಕಾರ್ಯಕ್ರಮ ನಿರ್ವಹಿಸಿದರು.