ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಾಗೂ ಚಾಮರಾಜನಗರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೆ.ಮೂರ್ತಿ ಮುಡಿಗುಂಡ ಅವರಿಗೆ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ನೆರವೇರಿಸಿದರು.ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಈಶ್ವರಿ ಸೋಷಿಯಲ್ ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡಿದ ಅವರು, ಜೆ. ಮೂರ್ತಿ ಮುಡಿಗುಂಡ ಚಿತ್ರಕಲೆಗಾರರು, ಗಾಯಕರು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು ಆಗಿದ್ದಾರೆ. ಇವರು ಮಕ್ಕಳಿಗಾಗಿ ಅನೇಕ ಚಿತ್ರಕಲಾ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಅದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವುದರಲ್ಲೂ ಮುಂದಾಗಿದ್ದಾರೆ. ಇವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಾಗೂ ಚಾಮರಾಜನಗರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಷಯ, ಮುಂದೆ ಇವರಿಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತಾಗಲಿ ಎಂದು ಹಾರೈಸಿದರು.
ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ. ವೆಂಕಟೇಶ್ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರು ಆಗಿದ್ದು ಇಲ್ಲಿ ಅನೇಕ ಪ್ರತಿಭಾವಂತ ಹಿರಿಯ ಗಾಯಕರು, ರಂಗಭೂಮಿ ಕಲಾವಿದರು, ಸಂಗೀತಗಾರರು, ಹಿರಿಯ ಚಿತ್ರನಟರು, ಕಿರುತೆರೆ ಕಲಾವಿದರು, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಸಂಕಲನಕಾರರು, ಚರ್ಮವಾದಕರು ಇದ್ದಾರೆ. ಅವರಿಗೆ ಸಲ್ಲಬೇಕಾದ ಪ್ರಶಸ್ತಿ ಗೌರವಗಳು ಸಂದಿಲ್ಲ. ಹಾಗಾಗಿ ಅವರನ್ನು ಗುರುತಿಸಿ ಸೂಕ್ತ ಪ್ರಶಸ್ತಿ ಪುರಸ್ಕಾರಗಳನ್ನು ಮುಂದಿನ ದಿನಗಳಲ್ಲಿ ನೀಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್‌ನ ಪದಾಧಿಕಾರಿಗಳಾದ ಜಯಲಕ್ಷ್ಮಿ, ರಾಜೇಶ್, ಮಹೇಂದ್ರ, ದೀಪಿಕಾ, ಸಿ.ಎಂ. ಬಂಗಾರು ಇದ್ದರು.