ಕಟೀಲು: ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌ಗೆ 60ರ ಅಭಿನಂದನೆ

KannadaprabhaNewsNetwork |  
Published : Sep 29, 2024, 01:48 AM IST
11 | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತಿ ಸದನದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಸನ್ಮಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಆಟಕೂಟಗಳ ಮೂಲಕ ಪ್ರಸ್ತುತ ಯಕ್ಷಗಾನದ ನಂಬರ್ ಒನ್ ಕಲಾವಿದ ಎಂದು ಗುರುತಿಸಬಹುದಾದ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ನಯವಿನಯತೆಯಿಂದ ಎಲ್ಲರನ್ನೂ ಗೌರವಿಸುತ್ತ ಬೆಳೆಯುತ್ತ ಬಂದವರು. ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ಮಾಡುತ್ತ ಶ್ರೇಷ್ಠರಾಗಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗದ ಟಿ. ಶ್ಯಾಮ್ ಭಟ್ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತಿ ಸದನದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದರು.

ವಿದ್ವಾಂಸ ಉಮಾಕಾಂತ ಭಟ್‌ ಮಾತನಾಡಿ, ನಿರ್ವಹಣೆಯನ್ನು ಆಟ ಕೂಟಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ, ಪ್ರಸಂಗವನ್ನು ಪ್ರಸಂಗದ ಜೊತೆಗೆ ಪಾತ್ರವನ್ನು ಮೆರೆಸುವ ಕಲಾವಿದರಲ್ಲಿ ಅದ್ವಿತೀಯನಾದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಕಲೆಯೊಳಗೆ ಸಕಲರಾದವರು. ಪ್ರತಿಭೆ ಮತ್ತು ಪಾಂಡಿತ್ಯ ಸಮವಾಗಿ ಒದಗಿಸಿಕೊಂಡ ಸುಣ್ಣಂಬಳರು ಕೇವಲ ಕಲಾವಿದರಲ್ಲ ಕಲಾಮಂದಿರವಾಗಿದ್ದಾರೆ. ಯಕ್ಷಗಾನ ಕಲೆಯ ವಿಶ್ವವಿದ್ಯಾಲಯ ಆಗಿದ್ದಾರೆ ಎಂದು ಶ್ಲಾಘಿಸಿದರು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬಿಪಿನ್ ಚಂದ್ರಶೆಟ್ಟಿ, ಪ್ರವೀಣ್ ಭಂಡಾರಿ, ಡಾ. ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು.

ಶ್ರೀ ದುರ್ಗಾಮಕ್ಕಳ ಮೇಳದ ಕಲಾವಿದರು ಅರವತ್ತು ಹರಿವಾಣಗಳಲ್ಲಿ ಫಲವಸ್ತುಗಳನ್ನು ಸಮರ್ಪಿಸಿದರು. ರವೀಂದ್ರ ಅತ್ತೂರು, ಸುದರ್ಶನ ಆಚಾರ್ ಷಷ್ಟಿಪೂರ್ತಿಯ ಸಲುವಾಗಿ ಸುಣ್ಣಂಬಳರನ್ನು ಮಂತ್ರೋಕ್ತದ ಮೂಲಕ ಹಾರೈಸಲಾಯಿತು. ಅನೇಕ ಅಭಿಮಾನಿಗಳು, ಕಟೀಲು ಮೇಳದ ಕಲಾವಿದರು ಕಿರೀಟ ಛಾಯಾಚಿತ್ರ ಹಾರ ವಸ್ತ್ರ, ಬಂಗಾರದ ಸರ, ಹಾರ ಇತ್ಯಾದಿಗಳ ಮೂಲಕ ಸುಣ್ಣಂಬಳ ದಂಪತಿಗಳನ್ನು ಗೌರವಿಸಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಮಧೂರು ವಾಸುದೇವ ರಂಗಾ ಭಟ್ ನಿರೂಪಿಸಿದರು. ವಾಸುದೇವ ಶೆಣೈ ವಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ತನ್ನ ಬೆಳವಣಿಗೆಯಲ್ಲಿ ಕಲ್ಲಾಡಿ ವಿಠಲ ಶೆಟ್ಟರಿಂದ ಆದಿಯಾಗಿ ಧರ್ಮಸ್ಥಳ ಕೇಂದ್ರದಲ್ಲಿ ಸಿಕ್ಕ ಗುರುಗಳು, ಕಟೀಲು ಮೇಳದಲ್ಲಿ ಬಲಿಪರು. ಹಿರಿಯ ಕಲಾವಿದರು ಹೀಗೆ ಅನೇಕರು ಬೆಳೆಸಿದ್ದಾರೆ. ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಗುಣ ಕಲಾವಿದರಲ್ಲಿ ಬೇಕು. ಯಕ್ಷಗಾನ ಏನು ಕೊಟ್ಟಿದೆ ಎಂದು ಕೇಳಬಹುದು. ಆರೋಗ್ಯಪೂರ್ಣವಾಗಿ ತಿನ್ನುವವನಿಗೆ ಯಕ್ಷಗಾನ ಎಲ್ಲವನ್ನೂ ಕೊಡುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ