ಕನ್ನಡಪ್ರಭ ವಾರ್ತೆ, ತುಮಕೂರು ಸಾಹಿತಿ ಹಂಪನಾ, ಪತ್ರಕರ್ತ ಎಸ್. ನಾಗಣ್ಣ, ಉದ್ಯಮಿ ದಿಲೀಪ್ ಜಿ. ಸುರಾನ ಅವರಿಗೆ ತುಮಕೂರು ವಿವಿ ಗೌರವ ಡಾಕ್ಟರೇಟ್ ಲಭಿಸಿದೆ.ತುಮಕೂರು ವಿವಿ ಕುಲಪತಿ ವೆಂಕಟೇಶ್ವರಲು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಈ ಮೂರು ಮಂದಿಗೆ ಇದೇ ತಿಂಗಳ 8 ರಂದು ನಡೆಯಲಿರುವ ತುಮಕೂರು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದರು. ತುಮಕೂರು ವಿಶ್ವವಿದ್ಯಾನಿಲಯದ 18ನೇ ವಾರ್ಷಿಕ ಘಟಿಕೋತ್ಸವವು ಇದೇ ತಿಂಗಳ 8 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ಜರುಗಲಿದೆ.
ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಟಿ. ಜಿ. ಸೀತಾರಾಮ್, ಅಧ್ಯಕ್ಷರು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ), ನವದೆಹಲಿ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ನೆರವೇರಿಸಲಿರುವರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರಭಾರ ಕುಲಸಚಿವರಾದ ಪ್ರೊ. ಎಂ. ಕೊಟ್ರೇಶ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಸತೀಶ್ ಗೌಡ ಎನ್. ಉಪಸ್ಥಿತರಿರುವರು.ಈ ಬಾರಿಯ ಘಟಿಕೋತ್ಸವದಲ್ಲಿ 2 ಅಭ್ಯರ್ಥಿಗಳು ಡಿ.ಲಿಟ್ ಪದವಿ, 59 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 1911 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 9,438 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ ವಿಶ್ವವಿದ್ಯಾನಿಲಯವು ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂವಕುಗಳನ್ನು, ಬಿಎ/ಬಿಎಸ್‌ಡಬ್ಲ್ಯೂ/ಬಿಎಸ್‌ಸಿ/ಬಿಕಾಂ/ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ್ಯಾಂ ಕುಗಳನ್ನು, ಬಿಎಫ್‌ಎ, ಬಿವಿಎ ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‌ಗೆ ತಲಾ ಒಂದು ರ್ಯಾಂಕ್ ಘೋಷಿಸಿದೆ. ಒಟ್ಟು 76 ವಿದ್ಯಾರ್ಥಿಗಳಿಗೆ 106 ಚಿನ್ನದ ಪದಕಗಳನ್ನು, ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ಆರು ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ.