ಕನ್ನಡಪ್ರಭ ವಾರ್ತೆ ಮೈಸೂರುಬೆಂಗಳೂರಿನ ರಾಜಾಜಿನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಗೌರವ ಅಧ್ಯಕ್ಷ, ಖ್ಯಾತ ಶಿಕ್ಷಣ ತಜ್ಞ ದ್ವಾರಕಾನಾಥ್ ಅವರು ಶುಕ್ರವಾರ ಅಲ್ಲಿನ ರಾಷ್ಟ್ರೋತ್ಥಾನ ಆಸ್ಪತ್ರೆ ನಿಧನರಾದರು.ಯುವ ವಿಜ್ಞಾನ ಶಿಕ್ಷಕರಾಗಿ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟ ದ್ವಾರಕನಾಥ್ ಅವರು, ತಮ್ಮ ಶ್ರೀಮಂತ ಬೋಧನಾ ಶೈಲಿ, ಶಿಷ್ಯರೆಡೆಗಿನ ಅಪಾರ ಪ್ರೀತಿ, ತಮ್ಮ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಉತ್ತಮ ಶಿಕ್ಷಕರಾಗಿ ರೂಪುಗೊಂಡ ಇವರು, ಕೆಲವೇ ವರ್ಷಗಳಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಮನ್ನಣೆ ಪಡೆದರು. ವಿದ್ಯಾವರ್ಧಕ ಸಂಘದೊಂದಿಗೆ ಸುಮಾರು 65 ವರ್ಷಗಳ ಸುದೀರ್ಘ ಬಾಂಧವ್ಯ ಹೊಂದಿದ್ದರು. ಸ್ಕೌಟ್ಸ್ ನ ಶಿಸ್ತಿನ ರೋವರ್ ಆಗಿ ಕಾರ್ಯ ನಿರ್ವಹಿಸಿದ್ದರು.ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಆಸಕ್ತಿ ನಿರಂತರ ಒದಿನೆಡೆಗೆ ಅಪಾರ ಆಸಕ್ತಿ ಹೊಂದಿದ್ದ ಬಹುಮುಖ ಪ್ರತಿಭೆ, ಇವರ ಅತ್ಯುತ್ತಮ ಬೋಧನಾ ಶೈಲಿ, ಸೃಜನಾತ್ಮಕ ಚಟುವಟಿಕೆಗಳು ಮತ್ತು ಸಂಘಟನಾ ಚತುರತೆಗೆ ಧ್ಯೋತಕವಾಗಿ ರಾಷ್ಟ್ರಮಟ್ಟದ ಅತ್ಯುತ್ತಮಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು.ತಮ್ಮ ನೇರನುಡಿ, ನಿಸ್ವಾರ್ಥ ಸೇವೆ, ವಿವಿಎಸ್ ವಿದ್ಯಾಸಂಸ್ಥೆ ಬಗೆಗಿನ ಅಪಾರ ನಿಷ್ಠೆ ಗುರುತಿಸಲ್ಪಟ್ಟು ಸಂಘದ ಜಂಟಿ ಕಾರ್ಯದರ್ಶಿಯಾಗಿ, ನಂತರದ ವರ್ಷಗಳಲ್ಲಿ ಗೌರವ ಕಾರ್ಯದಶಿಯ ಹುದ್ದೆಯನ್ನು ಅಲಂಕರಿಸಿದರು. ವಿವಿಎಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಉನ್ನತಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದರು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಶಿಕ್ಷಕರ ಬೋಧನಾ ಕೌಶಲ್ಯ ಹೆಚ್ಚಿಸಲು ನಿರಂತರ ತರಬೇತಿಗಳನ್ನು ಹಮ್ಮಿಕೊಂಡರು.ಶಿಕ್ಷಣದ ಗುಣಮಟ್ಟದಲ್ಲಿ ರಾಜಿಯಾಗದ ಇವರು ನಿತ್ಯ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಕರ್ನಾಟಕ ಸರ್ಕಾರದ ಮೌಲ್ಯ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದರು. ಬೆಂಗಳೂರಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಮಿತಿಯಲ್ಲಿ ಮುಖ್ಯಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ಪ್ರಶ್ನೆಪತ್ರಿಕೆಗಳ ಗುಣಮಟ್ಟ ಹಾಗೂ ಪರೀಕ್ಷಾ ನಿರ್ವಹಣೆಯ ಗುಣಮಟ್ಟದ ಹೆಚ್ಚಳಕ್ಕೆ ಕಾರಣಕರ್ತರಾಗಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಾ.ಸಿ.ಎನ್. ಮಂಜುನಾಥ್, ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ, ನಟರಾದ ಸಿಹಿಕಹಿ ಚಂದ್ರು, ಮಾಸ್ಟರ್ ಆನಂದ್, ಸಂಗೀತ ಕಟ್ಟಿ ಮೊದಲಾದ ಖ್ಯಾತನಾಮರು ಇವರ ಶಿಷ್ಯ ಪಡೆ ಎಂಬ ಹೆಗ್ಗಳಿಕೆ.ಮೈಸೂರಿನ ಕುವೆಂಪುನಗದಲ್ಲಿ ವಿವಿಎಸ್ ಬಿಎಂಶ್ರೀ ಶಿಕ್ಷಣ ಸಂಸ್ಥೆ (ಸಿಬಿಎಸ್‌ಇ) ಹಾಗೂ ಮೈಸೂರಿನ ವಿಜಯನಗರದ ವಿವಿಎಸ್ ಸಪ್ತರ್ಷಿ ಪಬ್ಲಿಕ್ ಸ್ಕೂಲ್ ಸಂಸ್ಥೆಗಳ ಪ್ರಾರಂಭದಿಂದ ಹಿಡಿದು ಅದರ ಸಂಪೂರ್ಣ ಬೆಳವಣಿಗೆಯ ಹಿಂದೆ ಇರುವ ದೊಡ್ಡ ಪ್ರೇರಕ ಶಕ್ತಿ, ಹಲವು ಸಂಘ ಸಂಸ್ಥೆಗಳಿಗೆ ಆರ್ಥಿಕ ಸಹಾಯ, ಕರ್ನಾಟಕ ಕ್ಯಾನ್ಸರ್ ಸೊಸೈಟಿಗೆ ಕ್ಯಾನ್ಸರ್ ಪತ್ತೆ ಯಂತ್ರೋಪಕರಣ ನೀಡಿಕೆ, ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಯಂತ್ರೋಪಕರಣ, ಕೊಡುಗೆ, ಜಯದೇವ ಹೃದ್ರೋಗ ಸಂಸ್ಥೆಗೆ ಆರ್ಥಿಕ ನೆರವು, ಎಚ್.ಡಿ. ಕೋಟೆ ಸರಗೂರಿನ ಶ್ರೀ ವಿವೇಕಾನಂದ ಸಂಸ್ಥೆಯ ಆಸ್ಪತ್ರೆಗೆ ಯಂತ್ರೋಪಕರಣ ಕೊಡುಗೆ -ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನ ಅರ್ಪಿಸಿಕೊಂಡವರು. ಸದಾ ನಗುಮೊಗದಿಂದ ಎಲ್ಲರೊಡನೆ ಸಮಾನವಾಗಿ ಬೇರೆಯುತ್ತಿದ್ದ ಪರಿ ಅನನ್ಯ.ವಿವಿಎಸ್ ವಿದ್ಯಾಸಂಸ್ಥೆಗಳ ಸರ್ವಾಂಗೀಣ ಏಳಿಗೆಯ ಪ್ರಮುಖ ಶಕ್ತಿ. ಆರೋಗ್ಯ ಧಾಮ, (ಚಿಕಿತ್ಸಾ ವಿಭಾಗ), ಪುಣ್ಯಧಾಮ (ದೇವಸ್ಥಾನ, ಧಾರ್ಮಿಕ ಕಾರ್ಯಗಳು), ಮೊದಲಾದ ಸಂಘದ ಕಾರ್ಯ ಕ್ಷೇತ್ರಗಳ ವಿಶಾಲತೆಗೆ ಇವರ ಕೊಡುಗೆ ಅಪಾರ. ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಇವರ ಸಾಧನೆ ಗುರುತಿಸಿದ ಸರ್ಕಾರ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಸರಳ ವ್ಯಕ್ತಿತ್ವದ, ಸೌಜನ್ಯದ ಮೂರ್ತಿಯಾಗಿದ್ದ ಇವರು ಸದಾ ವಿದ್ಯಾರ್ಥಿಗಳ,ತಮ್ಮ ಸಂಸ್ಥೆಯ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಹಂಬಲಿಸಿ, ಆರೋಗ್ಯವಿಮೆ, ಜೀವವಿಮೆ, ನಿವೃತ್ತಿ ವೇತನ ಮೊದಲಾದ ಕ್ರಿಯಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದರು. ಕಳೆದ ವರ್ಷ ಸಂಘದ ಗೌರವಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಗೌರವಾನ್ವಿತರು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಶಿಕ್ಷಕರಲ್ಲಿ ಕೌಶಲ್ಯಾಭಿವೃದ್ಧಿಗೆ ಹೊಸ ಹೊಸ ಆಯಾಮಗಳನ್ನು ಯೋಜಿಸಿ, ಅನೇಕ ಸಂಘ ಸಂಸ್ಥೆಗಳ ಜೊತೆ ಕೈ ಜೋಡಿಸಿದರು.ಪರಿಸರ ಕಾಳಜಿ ಅಶಕ್ತರಿಗೆ ಸಹಾಯಹಸ್ತ ನೀಡಿಕೆ ಶ್ರೀಯುತರ ವ್ಯಕ್ತಿತ್ವದ ವಿಶೇಷತೆಗಳು. ಶಿಕ್ಷಣ ತಜ್ಞರು,ಸಮಾಜ ಸೇವಕರು. ನಿಸ್ವಾರ್ಥ ರಾಜಕಾರಣಿಗಳ ಜೊತೆ ಸೌಜನ್ಯಪೂರಿತ ಬಾಂಧವ್ಯ ಹೊಂದಿದ್ದರು.ಅವರ ಅಗಲಿಕೆ ಅಪಾರ ಶಿಷ್ಯ ವೃಂದ, ಸಂಸ್ಥೆಯ ಶಿಕ್ಷಕ ಬಂಧುಗಳನ್ನು ಅಪಾರ ದುಃಖಕ್ಕೆ ಈಡುಮಾಡಿದೆ. ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ಬಹು ದೊಡ್ಡ ನಷ್ಟವಾಗಿದೆ ಎಂದು ಮೈಸೂರಿನ ಸಂಸ್ಥೆಯ ಸಿಬ್ಬಂದಿ ಶೋಕ ವ್ಯಕ್ತಪಡಿಸಿದ್ದಾರೆ.