ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಐದು ವರ್ಷಗಳಲ್ಲಿ ಐದಲ್ಲ 50 ಯೋಜನೆಗಳಿಗೂ ಹೆಚ್ಚು ಜಾರಿ ಮಾಡಿ ಜನಪರವಾಗಿ ಕೆಲಸ ಮಾಡಿರುವುದರಿಂದ ಜನ ಮೆಚ್ಚುಗೆ ಪಾತ್ರವಾಗಲು ಸಾಧ್ಯವಾಗಿದೆ ಎಂದು ಸಂಸದ ಹಾಗೂ ಬಿಕಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.ಗಂಜ್ ಸಮಿತಿ ಆಶ್ರಯದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿ, ಡಾ.ಉಮೇಶ್ ಜಾಧವ್ ಐದು ಯೋಜನೆಗಳ ಜಾರಿ ಮಾಡಿದ್ದನ್ನು ಹೇಳಲಿ ಎಂದು ಟೀಕಿಸಿದ ಕಾಂಗ್ರೆಸ್ಸಿಗೆ ಖಾರವಾಗಿ ಉತ್ತರಿಸಿ ಐದಲ್ಲ 50 ಯೋಜನೆ ಜಾರಿ ಮಾಡಿರೋದಾಗಿ ಹೇಳಿದರು.
ಗಂಜ್ ಸಮಿತಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಾರ್ಗದರ್ಶನ ಮತ್ತು ನಿಯೋಗದೊಂದಿಗೆ ದೆಹಲಿಗೆ ತೆರಳಿ ಕಲಬುರಗಿಯಿಂದ ರಾತ್ರಿ ವಿಮಾನ ಸೇವೆ, ಬೆಂಗಳೂರಿಗೆ ನೂತನ ರೈಲುಗಳ ಆರಂಭ, ಮೆಗಾ ಜವಳಿ ಪಾರ್ಕ್, ಭಾರತ್ ಮಾಲಾ ರಸ್ತೆ ಸೇರಿ ನೂರಾರು ಯೋಜನೆಗಳನ್ನು ಜಾರಿ ಮಾಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಲಾಗಿದೆ. ಮೋದಿಯವರ ಆಡಳಿತದಿಂದ ಪ್ರಗತಿಗೆ ವೇಗ ಹೆಚ್ಚಿದೆ. ಇದಕ್ಕೆ ಪ್ರಜ್ಞಾವಂತ ಮತದಾರರು ಈ ಬಾರಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಮತ ನೀಡಿ ಹರಸಲಿದ್ದಾರೆಂದು ಜಾಧವ್ ಹೇಳಿದರು.ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ, ಕಮಲದ ಗುರುತಿಗೆ ಓಟು ಹಾಕುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದರ ಜೊತೆಗೆ ಮೋದಿಯವರ ಸಂಪುಟದಲ್ಲಿ ಡಾ. ಜಾಧವ್ ಅವರನ್ನು ಸಚಿವರನ್ನಾಗಿ ಮಾಡಿರೆಂದರು.
ಎಂಎಲ್‌ಸಿ ಡಾ. ಬಿ.ಜಿ ಪಾಟೀಲ್, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಚಂದು ಪಾಟೀಲ್, ಶಾಸಕರಾದ ಬಸವರಾಜ್ ಮತ್ತಿಮಡು, ಬಸವರಾಜ ಪ್ಯಾಟಿ ಮಾತನಾಡಿದರು. ವರದಾ ಶಂಕರ ಶೆಟ್ಟಿ, ಬಸವರಾಜ್ ಪ್ಯಾಟಿ, ಶಶಿಕಾಂತ್ ಪಾಟೀಲ್, ಶ್ರೀಮಂತ ಉದನೂರು ಚಂದ್ರಶೇಖರ್ ಕೋಬಾಳ್ ಸಂಗಮೇಶ್ ಕಲ್ಯಾಣಿ ಸೇರಿ ಹಲವರಿದ್ದರು.