- ಸಿವಿಲ್ ಎಂಜಿನಿಯರ್ ಡಾ.ರೇಣುಕಾಪ್ರಸಾದ್ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಾಧಕರಿಗೆ ಸನ್ಮಾನಿಸಿದರೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಇನ್ನಷ್ಟು ಸ್ಫೂರ್ತಿ ದೊರೆಯುತ್ತದೆ. ಸನ್ಮಾನ, ಪುರಸ್ಕಾರಗಳ ಮೂಲಕ ಸಾಧನೆ ಇತರರಿಗೂ ಪ್ರೇರಣೆಯಾಗುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಹಿರೇಕಲ್ಮಠದಲ್ಲಿ ಸೋಮವಾರ ಅನ್ನದಾನಯ್ಯಶಾಸ್ತ್ರಿ ಅವರ ಪುತ್ರ, ಸಿವಿಲ್ ಎಂಜಿನಿಯರ್ ಡಾ. ಎ.ಎಚ್.ಎಂ. ರೇಣುಕಾಪ್ರಸಾದ್ ಅವರ ಸಾಧನೆ ಪರಿಗಣಿಸಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಬಹು ದೊಡ್ಡ ಕನಸನ್ನು ಹೊಂದಿರುತ್ತಾರೆ. ಕನಸನ್ನು ನನಸಾಗಿ ಮಾಡುವ ಕೈಂಕರ್ಯ ಮುಖ್ಯವಾಗುತ್ತದೆ. ಸತತ ಶ್ರಮ ಹಾಗೂ ಪರಿಶ್ರಮ ಎಂಬುದು ವ್ಯಕ್ತಿಯ ಜೀವನವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ವ್ಯಕ್ತಿಯಲ್ಲಿ ಸಾಧಿಸುವ ಛಲ ಹುದುಗಿರಬೇಕು. ಪೋಷಕರ ಸಹಕಾರ ಹಾಗೂ ಹಿತೈಷಿಗಳ ಹಾರೈಕೆ ಮೇಳೈಸಿದರೆ ಏನೇ ಕಷ್ಟಗಳು ಬಂದರೂ ದಾಖಲೆ ಸೃಷ್ಟಿಸುವ ಕೆಲಸಗಳು ಪೂರೈಸುತ್ತವೆ ಎಂದು ತಿಳಿಸಿದರು.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಗರಿಷ್ಠ 208 ಆನ್‌ಲೈನ್ ಕೋರ್ಸ್ ಪ್ರಮಾಣ ಪತ್ರಗಳನ್ನು ಸಂಪಾದಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಿಸಿರುವ ಸಿವಿಲ್ ಎಂಜಿನಿಯರ್ ಡಾ. ಎ.ಎಚ್.ಎಂ. ರೇಣುಕಾಪ್ರಸಾದ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ ಅವರ ಶುಭ ಆಶೀರ್ವಾದ ಹಾಗೂ ಪೋಷಕರ ಸಹಕಾರ ನನ್ನ ಸಾಧನೆಗೆ ಪ್ರೇರಣೆಯಾಗಿದೆ ಎಂದರು.ಸಮಾರಂಭದಲ್ಲಿ ಜಕ್ಕಲಿ, ಬಿದರಗಡ್ಡೆ, ಹಾರನಹಳ್ಳಿ ಮಠಗಳ ಪೀಠಾಧ್ಯಕ್ಷರಾದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ.ಪಿ.ಎಂ. ವಿಜಯಾನಂದ ಸ್ವಾಮಿ, ಎಚ್.ಆರ್. ಬಸವರಾಜಪ್ಪ, ಮಠದ ವ್ಯವಸ್ಥಾಪಕ ಚನ್ನಬಸಯ್ಯ, ನಿವೃತ್ತ ಗ್ರಂಥಪಾಲಕ ಡಾ.ಕೊಟ್ರೇಶ್ ಉತ್ತಂಗಿ, ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಪ್ರಾಂಶುಪಾಲ ಶ್ರೀಶೈಲ ಹಿರೇಮಠ ಮಾತನಾಡಿದರು.
ಸಮಾರಂಭದಲ್ಲಿ ರೇಣುಕಾಪ್ರಸಾದ ಅವರನ್ನು ಸನ್ಮಾಸಲಾಯಿತು. ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಸೇರಿದಂತೆ ಇತರರು ಹಾಜರಿದ್ದರು. ವೇದಮೂರ್ತಿ ಅನ್ನದಾನ್ಯಶಾಸ್ತ್ರಿ, ಎಸ್.ವಿ.ನಾಗರತ್ನ, ಎ.ಎಚ್.ಎಂ.ಚಂದ್ರಶೇಖರಸ್ವಾಮಿ ಹಾಗೂ ಇತರರು ಇದ್ದರು. ಸಂಗಮೇಶ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.- - -
(ಕೋಟ್) ಮಗು ಜನಿಸಿದಾಗ ಉಸಿರಿರುತ್ತದೆ, ಹೆಸರಿರುವುದಿಲ್ಲ. ಸತ್ತಾಗ ಉಸಿರು ಇರುವುದಿಲ್ಲ, ಆದರೆ ಹೆಸರು ಉಳಿಯುತ್ತದೆ. ಜೀವಿತ ಕಾಲದಲ್ಲಿ ಉತ್ತಮ ಕೆಲಸ ಮಾಡಿ, ಹೆಸರು ಶಾಶ್ವತವಾಗಿ ಇರುವಂತಾಗಲು ಎಲ್ಲರೂ ಪ್ರಯತ್ನ ಮಾಡಬೇಕು.- ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗೌರಿ ಮಠ, ಕರಜಗಿ. ಹಾವೇರಿ ಜಿಲ್ಲೆ
- - --10ಎಚ್.ಎಲ್.ಐ1:
ಸಿವಿಲ್ ಎಂಜಿನಿಯರ್ ಡಾ. ಎ.ಎಚ್.ಎಂ. ರೇಣುಕಾಪ್ರಸಾದ್ ಅಭಿನಂದನಾ ಸಮಾರಂಭದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.