ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಆಟೋ ನಿಲ್ದಾಣಕ್ಕೆ ಅನುಮತಿ

KannadaprabhaNewsNetwork |  
Published : Jun 11, 2025, 11:59 AM IST
10ಡಿಡಬ್ಲೂಡಿ1ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಹಾಗೂ ಜಿಲ್ಲಾ ರಸ್ತೆ  ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು.  | Kannada Prabha

ಸಾರಾಂಶ

ಸಮಿತಿಯವರು ವಿವಿಧ ಆಟೋರಿಕ್ಷಾಗಳ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮೀಟರ್ ದರ ನಿಗದಿ ಕುರಿತು ಅಭಿಪ್ರಾಯ ಸಂಗ್ರಹಿಸಿ ಪಕ್ಕದ ಜಿಲ್ಲೆಗಳಲ್ಲಿ ವಿಧಿಸಲಾಗುತ್ತಿರುವ ದರಗಳೊಂದಿಗೆ ಹೋಲಿಕೆ ಮಾಡಿ ಒಂದು ತಿಂಗಳೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಧಾರವಾಡ: ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ಎಂ.ಟಿ. ಮಿಲ್ ಹತ್ತಿರ ಹಾಗೂ ಧಾರವಾಡದ ಗ್ರಾಮೀಣ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದ ಹತ್ತಿರ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಟೋರಿಕ್ಷಾ ನಿಲ್ದಾಣ ನಿರ್ಮಾಣಕ್ಕಾಗಿ ಅನುಮತಿಸಿದ ಸ್ಥಳಗಳಲ್ಲಿ ಜಾಗೆಯನ್ನು ಗುರುತಿಸುವಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಇವರುಗಳನ್ನೊಳಗೊಂಡ ಉಪ ಸಮಿತಿಯನ್ನು ರಚಿಸಲಾಗಿದ್ದು, ಈ ಕುರಿತು ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಹುಬ್ಬಳ್ಳಿ- ಧಾರವಾಡದ ವಿವಿಧ ಆಟೋರಿಕ್ಷಾಗಳ ಸಂಘಗಳವರು ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಕುರಿತು ಚರ್ಚಿಸಿದ ಅವರು ಮೀಟರ್ ಅಳವಡಿಕೆ, ದುರಸ್ತಿ ಹಾಗೂ ಕ್ಯಾಲಿಬ್ರೇಷನ್, ಪರ್ಮಿಟ್ ರದ್ದಾದ ಹಳೇ ಆಟೋರಿಕ್ಷಾಗಳಿಗೆ ರಹದಾರಿ ನೀಡಿಕೆ, ರಹದಾರಿ ನವೀಕರಣ, ದಂಡ ವಿನಾಯಿತಿ ಹಾಗೂ ಆನ್ ಲೈನ್ ಆ್ಯಪ್ ಮೂಲಕ ವಾಹನಗಳನ್ನು ಅನುಮತಿಯಿಲ್ಲದೇ ಬಾಡಿಗೆಗೆ ನಡೆಸುತ್ತಿರುವುದರ ವಿರುದ್ಧ ಕ್ರಮ ಜರುಗಿಸುವ ಕುರಿತು ಹಾಗೂ ಇತ್ಯಾದಿ ಬೇಡಿಕೆಗಳ ಕುರಿತಂತೆ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಸಭೆಯೊಳಗಾಗಿ ವರದಿ ನೀಡಲು ಹುಬ್ಬಳ್ಳಿ ಧಾರವಾಡ ಡಿ.ಸಿ.ಪಿ ರವೀಶ್ ನೇತೃತ್ವದಲ್ಲಿ ಆರ್.ಟಿ.ಓ, ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಹಾಗೂ ಉಪ-ವಿಭಾಗಾಧಿಕಾರಿಗಳು ಅಥವಾ ತಹಶೀಲ್ದಾರರನ್ನೊಳಗೊಂಡ ಉಪ ಸಮಿತಿಯನ್ನು ರಚಿಸಲಾಯಿತು.

ಸಮಿತಿಯವರು ವಿವಿಧ ಆಟೋರಿಕ್ಷಾಗಳ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮೀಟರ್ ದರ ನಿಗದಿ ಕುರಿತು ಅಭಿಪ್ರಾಯ ಸಂಗ್ರಹಿಸಿ ಪಕ್ಕದ ಜಿಲ್ಲೆಗಳಲ್ಲಿ ವಿಧಿಸಲಾಗುತ್ತಿರುವ ದರಗಳೊಂದಿಗೆ ಹೋಲಿಕೆ ಮಾಡಿ ಒಂದು ತಿಂಗಳೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹುಬ್ಬಳ್ಳಿಯ ವಾಯುವ್ಯ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂಗವಿಕಲ ಪ್ರಯಾಣಿಕರಿಗೆ ನಿಲ್ದಾಣಗಳ ಕುರಿತು ಸೂಕ್ತ ಮಾಹಿತಿಯನ್ನು ನೀಡುವ ಕುರಿತಂತೆ ಬಸ್ಸುಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿಕೊಳ್ಳಲು ಉಚ್ಛನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಕ್ರಮ ವಹಿಸಬೇಕು. ತಪ್ಪಿದಲ್ಲಿ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಪೂರ್ಣ ವಿವರಗಳನ್ನು ಪ್ರತಿ ಸಭೆಯಲ್ಲೂ ಮಂಡಿಸುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸುವಿಕೆಯನ್ನು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯವರು ಮಾಡುಬೇಕು. ಪದೇ ಪದೇ ರಸ್ತೆ ಅಪಘಾತಗಳಾಗುವ ಸ್ಥಳಗಳನ್ನು ವೈಜ್ಞಾನಿಕವಾಗಿ ಗುರ್ತಿಸಿ, ಅಂತಹ ಸ್ಥಳಗಳನ್ನು ಸರಿಪಡಿಸುವ ಹೊಣೆ ಸಂಬಂಧಿಸಿದ ಇಲಾಖೆಗಳಾಗಿದ್ದು, ಇಂತಹ ವಿವರಗಳನ್ನು ಪಡೆದ ವರದಿ ಪಡೆದು ಸಲ್ಲಿಸುವಂತೆ ಸೂಚಿಸಿದರು.

ಪೊಲೀಸ್ ಇಲಾಖೆಯವರು ಕಟ್ಟು ನಿಟ್ಟಿನ ಪ್ರವರ್ತನ ಕಾರ್ಯಗಳನ್ನು ಜರುಗಿಸಿ, ಅಪಘಾತಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು, ಸಾರಿಗೆ ಇಲಾಖೆಯವರು ರಸ್ತೆ ಅಪಘಾತಗಳ ಕುರಿತು ಸಾರ್ವಜನಿಕರಿಗೆ ಸುರಕ್ಷತಾ ಸಪ್ತಾಹಗಳಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಉಪ-ವಿಭಾಗ, ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಲೋಪದೋಷ ಇರುವ ರಸ್ತೆಗಳ ದುರಸ್ತಿಗಳನ್ನು ಕಾಲಕಾಲಕ್ಕೆ ವಿಳಂಭಿಸದೇ ಸರಿಪಡಿಸಲು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್. ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿಕೊಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌