ಕನ್ನಡಪ್ರಭ ವಾರ್ತೆ ಬೆಂಗಳೂರು
2024ರ ಫೆ.7ರಂದು ಹುಕ್ಕಾ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಆರ್.ಭರತ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಹುಕ್ಕಾ ಸಿಗರೇಟಿಗಿಂತ ಕಡಿಮೆ ಹಾನಿಕಾರಕ. ಹರ್ಬಲ್ ಹುಕ್ಕಾ ಬಳಸಲಾಗುತ್ತದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ, ಅಧ್ಯಯನಗಳ ಪ್ರಕಾರ ಹುಕ್ಕಾ ಸೇವನೆದಾರರು ನಿಕೋಟಿನ್ ಸೇವಿಸುತ್ತಾರೆ. ಅದು ಚಟಕಾರಿ ರಾಸಾಯನಿಕವಾಗಿದೆ. ಹುಕ್ಕಾದಲ್ಲಿ ಸಿಗರೇಟಿಗಿಂತ ಅಧಿಕ ಪ್ರಮಾಣದ ಅರ್ಸೆನಿಕ್, ಲಿಡ್, ನಿಕಲ್ ಮತ್ತು 15 ಪಟ್ಟು ಹೆಚ್ಚು ಕಾರ್ಬನ್ ಮೊನಾಕ್ಸೈಡ್ ಇದೆ ಎಂದು ಹೇಳಲಾಗುತ್ತಿದೆ. ಹುಕ್ಕಾವನ್ನು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಒಂದೇ ಕೊಳವೆಯನ್ನು ಹಲವು ಬಾಯಿಯಲ್ಲಿಟ್ಟುಕೊಂಡು ಸೇವನೆ ಮಾಡುತ್ತಾರೆ. ಅದರಿಂದ ಹರ್ಪಿಸ್, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಅಪಾಯವಿದೆ ಎಂದು ಆದೇಶದಲ್ಲಿ ಹೇಳಿದೆ.ಸಿಗರೇಟು ಸೇದುವುದಕ್ಕಿಂತ ಹುಕ್ಕಾ ಸೇವನೆ ಕಡಿಮೆ ಅಪಾಯಕಾರಿ ಎನ್ನುವುದು ಕೇವಲ ಸತ್ಯವಲ್ಲ. ಹುಕ್ಕಾ ತಯಾರಿಕೆಯಲ್ಲಿ ಬಳಸುವ ಮೊಲಾಸಿಸ್ ನಿಷೇಧಿತ ಉತ್ಪನ್ನ. ಆದರೆ ಅದನ್ನು ಮುಕ್ತವಾಗಿ ಮಾರಲಾಗುತ್ತಿದೆ. ಹುಕ್ಕಾವನ್ನು ಸಾಮಾನ್ಯವಾಗಿ ಸುಮಾರು ಒಂದು ಗಂಟೆಯವರೆಗೆ ಸರಾಸರಿ 100 ಪಫ್ ಸೇದಲಾಗುತ್ತದೆ. ಅಂದರೆ ಒಂದು ಹುಕ್ಕಾ 100 ಸಿಗರೇಟು ಸೇದುವುದಕ್ಕೆ ಸಮವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.