ಭೀಕರ ಅಗ್ನಿ ದುರಂತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ

KannadaprabhaNewsNetwork |  
Published : Sep 16, 2026, 02:45 AM IST
ಅಗ್ನಿ ದುರಂತದಲ್ಲಿ ಮೃತಪಟ್ಟವರು | Kannada Prabha

ಸಾರಾಂಶ

ಗಣೇಶನನ್ನು ಮನೆಗೆ ಬರಮಾಡಿಕೊಂಡು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರ ಬದುಕನ್ನೇ ಬೆಂಕಿಯ ಕೆನ್ನಾಲಿಗೆ ನುಂಗಿಹಾಕಿದೆ. ಗಣೇಶ ಚತುರ್ಥಿಯ ಸಡಗರದ ನಡುವೆಯೇ ನಗರದ ಚವ್ಹಾಟಗಲ್ಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಣೇಶನನ್ನು ಮನೆಗೆ ಬರಮಾಡಿಕೊಂಡು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರ ಬದುಕನ್ನೇ ಬೆಂಕಿಯ ಕೆನ್ನಾಲಿಗೆ ನುಂಗಿಹಾಕಿದೆ. ಗಣೇಶ ಚತುರ್ಥಿಯ ಸಡಗರದ ನಡುವೆಯೇ ನಗರದ ಚವ್ಹಾಟಗಲ್ಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಾರದಾ ಗಜಾನನ ಧಮೋನೆ (45), ಭಾರತಿ ರಾಜಾರಾಮ ಧಮೋನೆ (50), ಪ್ರಿಯಾ ಗಜಾನನ ಧಮೋನೆ(28) ಹಾಗೂ ಗಂಗಾ ಗಜಾನನ ಧಮೋನೆ (25) ಮೃತಪಟ್ಟವರು. ಗಜಾನನ ರಾಜಾರಾಮ ಧಮೋನೆ ಹಾಗೂ ರೋಷನ್ ಗಜಾನನ ಧಮೋನೆ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫ್ರಿಡ್ಜ್‌ನಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂಬುವುದು ಪ್ರಾಥಮಿಕ ಶಂಕೆಯಾಗಿದ್ದು, ನಿಖರ ಕಾರಣ ತನಿಖೆಯಿಂದ ದೃಢಪಡಬೇಕಿದೆ. ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಆಗಿದ್ದೇನು?:

ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಕುಟುಂಬಸ್ಥರೆಲ್ಲರೂ ಹಬ್ಬದೂಟ ಸವಿದು ಸಂಭ್ರಮಿಸಿದ್ದರು. ಆ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ತಡರಾತ್ರಿ ಎಲ್ಲರೂ ನಿದ್ರೆಗೆ ಜಾರಿದ್ದ ವೇಳೆ ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ತಡಗಿನ ಶೆಡ್‌ ಆಗಿದ್ದ ಮನೆಗೆ ಕ್ಷಣಾರ್ಧದಲ್ಲೇ ಬೆಂಕಿ ಆವರಿಸಿದೆ. ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗದೇ ನಾಲ್ವರು ಬೆಂಕಿಗೆ ಆಹುತಿಯಾಗಿದ್ದಾರೆ. ಮನೆಯಲ್ಲಿದ್ದ ಬೆಕ್ಕು ಕೂಡ ಸುಟ್ಟು ಮೃತಪಟ್ಟಿದೆ.ಮನೆಯಲ್ಲಿ ಸಾವಿನ ಆಕ್ರಂದನ ಮೊಳಗಿದ್ದು, ಇಡೀ ಪ್ರದೇಶದಲ್ಲಿ ನೀರವ ಮೌನ ಆವರಿಸಿತು. ಮಾಹಿತಿ ತಿಳಿಯುತ್ತಿದ್ದಂತೆ ಮಾರ್ಕೆಟ್ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಬೆಂಕಿಯಲ್ಲಿ ಸಿಲುಕಿದ್ದ ಗಜಾನನ ಹಾಗೂ ಪುತ್ರ ರೋಷನ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಶಾಸಕ ಆಸೀಫ್ ಸೇಠ್ ಹಾಗೂ ಡಿಸಿಪಿ ನಾರಾಯಣ ಬರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಬೆಂಕಿಯ ತೀವ್ರತೆಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಫ್ರಿಡ್ಜ್‌, ಪಾತ್ರೆ, ಪಗಡೆ, ತಿಜೋರಿ, ದಾಖಲೆ ಪತ್ರಗಳು ಹಾಗೂ ಚಿನ್ನಾಭರಣ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಮನೆಯಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಿಸದಿದ್ದರಿಂದ ಅಕ್ಕಪಕ್ಕದ ಮನೆಗಳಿಗೆ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಬಡ ಕುಟುಂಬವೊಂದು ಛಿದ್ರ:

ಮನೆ ಯಜಮಾನ ಗಜಾನನ ಧಮೋನೆ ಕಾರುಗಳ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಪುತ್ರ ರೋಷನ್ ಉದ್ಯಮಬಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಶಾರದಾ ಗೌಂಡಿ ಕೆಲಸ ಮಾಡುತ್ತಿದ್ದರೆ, ಪುತ್ರಿಯರಾದ ಗಂಗಾ ಮತ್ತು ಪ್ರಿಯಾ ಝೆರಾಕ್ಸ್ ಅಂಗಡಿಯಲ್ಲಿ ದುಡಿಯುತ್ತಿದ್ದರು. ಸಹೋದರಿ ಭಾರತಿ ಟೇಲರಿಂಗ್ ವೃತ್ತಿ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಕೂಲಿ ಹಾಗೂ ಸಣ್ಣಪುಟ್ಟ ಉದ್ಯೋಗವನ್ನೇ ನೆಚ್ಚಿಕೊಂಡಿದ್ದ ಕುಟುಂಬದ ಬದುಕು ಒಂದೇ ರಾತ್ರಿ ಛಿದ್ರವಾಗಿದೆ.

ನಿನ್ನೆ ಎಲ್ಲರೂ ಗಣೇಶ ಚತುರ್ಥಿ ಆಚರಿಸಿ, ಊಟ ಮಾಡಿ ಮಲಗಿದ್ದೆವು. ಏಕಾಏಕಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ನನ್ನ ಮೈದುನನ ಪತ್ನಿ, ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅತ್ತಿಗೆ ಮೃತಪಟ್ಟಿದ್ದಾರೆ. ಮೈದುನ ಮತ್ತು ಮಗ ಗಂಭೀರವಾಗಿದ್ದಾರೆ. ಹಬ್ಬದ ಖುಷಿಯಲ್ಲಿದ್ದಾಗ ಇಂತಹ ದೊಡ್ಡ ಆಘಾತ ಸಂಭವಿಸಿರುವುದು ಬಹಳ ದುಃಖ ತಂದಿದೆ.

-ಗೋದಾವರಿ ಧಮೋನೆ,
ಗಜಾನನ ಧಮೋನೆ ಅತ್ತಿಗೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಘೋಷಣೆಗೆ ಆಗ್ರಹಿಸಿ ೨೧ರಂದು ತಾಳಿಕೋಟೆ ಬಂದ್‌
ಯತ್ನಾಳ್ ಮೆದುಳಿಗೆ ನಾಲಿಗೆ ಕನೆಕ್ಷನ್ ತಪ್ಪಿದೆ!