ಕುಮಟಾದಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿ: ಗಣಪತಿ ನಾಯ್ಕ

KannadaprabhaNewsNetwork |  
Published : Sep 04, 2026, 02:45 AM IST
ಎವಿಪಿ ಸಂಸ್ಥೆಯ ಕಚೇರಿಯಲ್ಲಿ ತೆಂಗು ದಿನ ಆಚರಿಸಿದರು. ಡಾ. ಸುಭಾಷಚಂದ್ರನ್, ಗಣಪತಿ ನಾಯ್ಕ, ಜಿ.ಡಿ. ಭಟ್ ಇತರರು ಇದ್ದರು. | Kannada Prabha

ಸಾರಾಂಶ

ಕಾರ್ಯಕ್ರಮ ಉದ್ಘಾಟಿಸಿದ ಐಐಎಸ್‌ಸಿ ವಿಜ್ಞಾನಿ ಡಾ. ಸುಭಾಷಚಂದ್ರನ್ ಮಾತನಾಡಿ, ನೈರುತ್ಯ ದಿಕ್ಕಿನಿಂದ ಬೀಸುವ ತೇವಾಂಶ ಭರಿತ ಗಾಳಿಯಿಂದ ಹವಾಮಾನ ಬದಲಾವಣೆಯಾಗಿ ಮಳೆಯಲ್ಲೂ ಬದಲಾವಣೆಯಾಗುತ್ತಿದೆ ಎಂದರು.

ಕುಮಟಾ: ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ತೋಟಗಾರ ರೈತರು ಹಲವು ದಶಕಗಳಿಂದ ವಿವಿಧ ರೋಗ- ಕೀಟ ಬಾಧೆ, ಹವಾಮಾನ ವೈಪರೀತ್ಯ ಹಾಗೂ ಇಳುವರಿ ಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಕುಮಟಾದಲ್ಲಿ ಸ್ಥಾಪಿಸಬೇಕು ಎಂದು ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

ಪಟ್ಟಣದ ಎವಿಪಿ ರೈತ ಉತ್ಪಾದಕ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ ಬಳಕೆಯಾಗದೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರೆ, ಜಿಲ್ಲೆಯ ರೈತರಿಗೆ ಅನುಗುಣವಾಗಿ ಹೆಚ್ಚಿನ ಇಳುವರಿ ನೀಡುವ ತಳಿಗಳ ಆಯ್ಕೆ, ಸಮಗ್ರ ರೋಗ- ಕೀಟ ನಿರ್ವಹಣೆ, ಪೋಷಕಾಂಶ ನಿರ್ವಹಣೆ ಮತ್ತು ಆಧುನಿಕ ತೋಟಗಾರಿಕಾ ತಂತ್ರಜ್ಞಾನಗಳ ಕುರಿತು ಸಂಶೋಧನೆ ಹಾಗೂ ರೈತರಿಗೆ ತರಬೇತಿ ನೀಡಲು ತೆಂಗು ಸಂಶೋಧನಾ ಕೇಂದ್ರ ಸಹಕಾರಿಯಾಗಲಿದೆ.

ಹಾಲಿ ರೈತರು ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗಗಳ ಪರಿಹಾರಕ್ಕಾಗಿ ದೂರದ ಸಂಶೋಧನಾ ಕೇಂದ್ರಗಳು ಹಾಗೂ ಖಾಸಗಿ ಸಲಹೆಗಾರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಸ್ಥಳೀಯವಾಗಿ ಸಂಶೋಧನಾ ಕೇಂದ್ರ ಸ್ಥಾಪನೆಯಾದರೆ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಪರಿಹಾರ ನೀಡುವುದರ ಜತೆಗೆ ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಇಳುವರಿ ಮತ್ತು ಆದಾಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಐಐಎಸ್‌ಸಿ ವಿಜ್ಞಾನಿ ಡಾ. ಸುಭಾಷಚಂದ್ರನ್ ಮಾತನಾಡಿ, ನೈರುತ್ಯ ದಿಕ್ಕಿನಿಂದ ಬೀಸುವ ತೇವಾಂಶ ಭರಿತ ಗಾಳಿಯಿಂದ ಹವಾಮಾನ ಬದಲಾವಣೆಯಾಗಿ ಮಳೆಯಲ್ಲೂ ಬದಲಾವಣೆಯಾಗುತ್ತಿದೆ. ತೆಂಗು ಬೆಳೆಯಲ್ಲಿ ಕಾಳು ಮೆಣಸು, ಗಡ್ಡೆ-ಗೆಣಸು, ಜಾಯಿ ಕಾಯಿ ಅಂತರ ಬೆಳೆಯನ್ನು ರೈತರು ಬೆಳೆಯಬೇಕು ಎಂದರು.

ಸಹಾಯಕ ತೋಟಗಾರಿಕಾ ನಿರ್ದೇಶಕ ಲಿಂಗರಾಜ್ ಇತ್ನಾಳ್, ತೆಂಗು ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ಧತಿ, ವೈಜ್ಞಾನಿಕ ನಾಟಿ ಮತ್ತು ಅಂತರ ಸಮಗ್ರ ಪೋಷಕಾಂಶ ನಿರ್ವಹಣೆ, ನೀರು ಮತ್ತು ತೇವಾಂಶ ನಿರ್ವಹಣೆ, ಕೀಟಬಾಧೆಗಳ ಸಮಗ್ರ ನಿರ್ವಹಣೆ ಕುರಿತು ವಿಸ್ತ್ರತ ಉಪನ್ಯಾಸ ಮಾಡಿದರು.

ಅತಿಥಿ ಜಿ.ಡಿ. ಭಟ್ ಅವರು, ರೈತರು ಮಾರಾಟ ಮಾಡುವ ತೆಂಗಿನ ಕಾಯಿಯನ್ನು ತೆಂಗು ಪ್ರೊಕ್ಯೂರ್ಮೆಂಟ್ ಸೆಂಟರ್ ನಲ್ಲಿ ಮಾರಾಟ ಮಾಡುವುದರಿಂದ ಯೋಗ್ಯ ಬೆಲೆಯನ್ನು ಪಡೆಯಬಹುದಾಗಿದೆ ಎಂದರು.

ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಚಂದ್ರು ಪಟಗಾರ, ಪ್ರವೀಣ ನಾಯ್ಕ, ಎವಿಪಿ ಸಂಸ್ಥೆಯ ನಿರ್ದೇಶಕರಾದ ಕೃಷ್ಣ ನಾಯ್ಕ, ಈಶ್ವರ ಕೋಡಿಯ, ಪ್ರತಿಭಾ, ವೀಣಾ ಭಟ್ಟ, ಡಿ.ಕೆ. ಹೆಗಡೆ, ಗೋಪಾಲ ಕೃಷ್ಣ ಶಾನಭಾಗ, ನಾರಾಯಣ, ರತ್ನಾಕರ ನಾಯ್ಕ ಇದ್ದರು. ಜ್ಯೋತಿ ಮತ್ತು ಅಂಬಿಕಾ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ವಂಚನೆ: ಇಬ್ಬರಿಗೆ ಶಿಕ್ಷೆ
ಮನುಷ್ಯನಿಗೆ ಅರಿವಿನ ಬದುಕು ಅಗತ್ಯ: ರಾಘವೇಶ್ವರ ಭಾರತೀ ಶ್ರೀ