ಡಂಬಳ: ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಅವರು ಬದುಕು ಕಟ್ಟಿಕೊಡಲು ಶ್ರಮಿಸುತ್ತಿರುವ ಮುಂಡರಗಿ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹಮ್ಮದರಫಿ ಎಂ. ತಾಂಬೋಟಿ ಅವರು ಅನುಪಮ ಸೇವೆಗಾಗಿ ಗದಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏ. 29ರಂದು ಗದುಗಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಜಿಲ್ಲಾಡಳಿತದಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ.2007ರಲ್ಲಿ ಗದಗ ತಾಲೂಕು ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ 3 ವರ್ಷಗಳ ಸೇವೆ ಸಲ್ಲಿಸಿದರು. ಬಳಿಕ ಬೀದರ್ ಜಿಲ್ಲೆಯ ಔರಾದದಲ್ಲಿ 3 ವರ್ಷ ಸೇವೆ ಸಲ್ಲಿಸಿ ರೈತರ ಪ್ರೀತಿಗೆ ಪಾತ್ರರಾದರು. 2013ರಿಂದ 2015ರ ವರೆಗೆ ರೋಣದಲ್ಲಿ, ಪದನ್ನೋತಿ ಪಡೆದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಬೀದರ್ ಜಿಲ್ಲೆಯ ಹುಮನಾಬಾದದಲ್ಲಿ 1 ವರ್ಷ, ಗದಗ ಜಲಾನಯನ ಇಲಾಖೆಯಲ್ಲಿ 1 ವರ್ಷ, ಆನಂತರ 2017ರಿಂದ 2021ರ ವರೆಗೆ ರೋಣ, 2021ರಿಂದ 2023ರ ವರೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಸೇವೆ, 2023ರಿಂದ ಮುಂಡರಗಿ ತಾಲೂಕಿನಲ್ಲಿ ಸೇವೆ ಮೂಲಕ ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ.
ಈ ಬಾರಿ ಮುಂಗಡಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಡಂಬಳಕ್ಕೆ ತೋಟಗಾರಿಕಾ ಕಾಲೇಜು ಘೋಷಣೆ ಬೆನ್ನಲ್ಲೇ ಈ ಭಾಗದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಯಂತೆ ಆ ದಿಸೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಡಂಬಳ ಭಾಗದಲ್ಲಿ ಉತ್ತಮ ತೋಟಗಾರಿಕಾ ಬೆಳೆಗಳ ಬೆಳೆದು ರೈತರ ಆರ್ಥಿಕ ಶಕ್ತಿ ಹೆಚ್ಚಿಸಬೇಕು ಎನ್ನುವ ನಿಟ್ಟಿನಲ್ಲಿ ಮುಂಡರಗಿ ತಾಲೂಕಿನಾದ್ಯಂತೆ ದೇಶಿಯ ಮಾದರಿಯನ್ನು ಬಳಸಿಕೊಂಡು ಉತ್ತಮ ಹಣ್ಣು, ತರಕಾರಿಗಳ ಬೆಳೆಯಲು ನಿರಂತರವಾಗಿ ರೈತರಿಗೆ ಉತ್ತಮ ಸಲಹೆ ನೀಡುತ್ತಿದ್ದಾರೆ. ರೈತರು ವಿವಿಧ ಬಗೆಯ ತರಕಾರಿ, ಈರುಳ್ಳಿ, ಬಾಳೆ 535 ಹೆಕ್ಟೇರ್, ಡ್ರ್ಯಾಗನ್ 100 ಎಕರೆ, ಅಡಕೆ 200 ಹೆಕ್ಟೇರ್, ದ್ರಾಕ್ಷಿ 150 ಹೆಕ್ಟೇರ್, ದಾಳಿಂಬೆ 300 ಹೆಕ್ಟೇರ್, ಮಾವು 250 ಎಕರೆ, ಪೇರಲ 150 ಹೆಕ್ಟೇರ್, ಬಾರೆ, ಲೀಚಿ, ಪಪ್ಪಾಯಿ ಹಣ್ಣುಗಳು ನೂರಾರು ಹೆಕ್ಟೇರ್‌ನಲ್ಲಿ ಬೆಳೆಯುವಂತೆ ಮಾಡಿದ ಶ್ರೇಯಸ್ಸು ಇವರದು. ಇವರ ಸಲಹೆಯಂತೆ ನರೇಗಾದಡಿ ತೋಟಗಾರಿಕೆಯ ಬೆಳೆಯ ಮೂಲಕ ಮಹಿಳೆ ನೀಲಮ್ಮ ಶಿರುಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನರೇಗಾ ಯೋಜನೆಯಡಿ ಸಹಾಯಧನ ಪಡೆದು 14 ಎಕರೆ ದಾಳಿಂಬೆ ಬೆಳೆಯ ಮೂಲಕ ವಿಜಯಕುಮಾರ ಶಿರುಂದ 1 ಕೋಟಿಗೂ ಹೆಚ್ಚು ಆದಾಯ ಪಡೆದು ತಾಲೂಕಿನ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಬಾಗೇವಾಡಿ ಗ್ರಾಮದ ನಾಗರಾಜ ಯಳವತ್ತಿ 1 ಹೆಕ್ಟೇರ್ ಬಾಳೆ, ಮೈಲಾರಪ್ಪ ಚೋಳಮ್ಮನವರ ಡ್ರ್ಯಾಗನ್ ಬೆಳೆ ಮೂಲಕ ಲಕ್ಷಾಂತರ ರು. ಪಡೆದು ಮಾದರಿಯಾಗಿದ್ದಾರೆ.ನಾನು 14 ಎಕರೆ ದಾಳಿಂಬೆ ಬೆಳೆದಿದ್ದಾರೆ. ತಾಂಬೋಟಿಯವರು ಸರಿಯಾದ ಸಮಯದಲ್ಲಿ ಇಲಾಖೆ ಸೌಲಭ್ಯಗಳನ್ನು ನೀಡಿ ಮಾರ್ಗದರ್ಶನ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಅವರಿಗೆ ಪ್ರಶಸ್ತಿ ಬಂದಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಜಂತ್ಲಿ ಶಿರೂರು ರೈತ ವಿಜಯಕುಮಾರ ಶಿರುಂದ ಹೇಳಿದರು.ಅಧಿಕಾರಿಗಳ ಸಲಹೆ, ಸಹಕಾರದಿಂದ ರೈತರು ನೂರಾರು ಹೆಕ್ಟೇರ್ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ. ಕೆರೆಗಳ ನೀರು ಪೋಲಾಗದಂತೆ ಉತ್ತಮ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಮುಂಡರಗಿ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಮಹಮ್ಮದರಫಿ ಎಂ. ತಾಂಬೋಟಿ ಹೇಳಿದರು.