ಹೊಸಪೇಟೆ ನಗರಸಭೆ: 5.39 ಲಕ್ಷ ರು. ಉಳಿತಾಯ ಬಜೆಟ್

KannadaprabhaNewsNetwork |  
Published : Mar 27, 2026, 02:30 AM IST
ಫೋಟೋವಿವರ- (26ಎಚ್‌ಪಿಟಿ4) ಹೊಸಪೇಟೆ ನಗರಸಭೆಯ 2026-27ನೇ ಸಾಲಿನ ಬಜೆಟ್‌ನ್ನು ನಗರಸಭಾ ಅಧ್ಯಕ್ಷ ಎನ್. ರೂಪೇಶ್‌ ಕುಮಾರ್‌ ಗುರುವಾರ ಮಂಡಿಸಿದರು | Kannada Prabha

ಸಾರಾಂಶ

ನಗರಸಭೆಯ ಬಜೆಟ್‌ ಗಾತ್ರ 122 ಕೋಟಿ ರು. ಆಗಿದ್ದು, ₹5.39 ಲಕ್ಷ ಉಳಿತಾಯ ಬಜೆಟ್ ನ್ನು ಮಂಡಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರಸಭೆಯ 2026-27ನೇ ಸಾಲಿನ ಬಜೆಟ್‌ನ್ನು ನಗರಸಭಾಧ್ಯಕ್ಷ ಎನ್.ರೂಪೇಶಕುಮಾರ್‌ ಗುರುವಾರ ಮಂಡಿಸಿದ್ದು, ನಗರಸಭೆಯ ಬಜೆಟ್‌ ಗಾತ್ರ 122 ಕೋಟಿ ರು. ಆಗಿದ್ದು, ₹5.39 ಲಕ್ಷ ಉಳಿತಾಯ ಬಜೆಟ್ ನ್ನು ಮಂಡಿಸಿದರು.ಸರ್ಕಾರದ ಅನುದಾನ ಮೊತ್ತ ₹78.99 ಕೊಟಿ, ನಗರಸಭೆಯ ನಿಧಿ ₹34.87 ಕೋಟಿ ಹಾಗೂ ಸರ್ಕಾರಕ್ಕೆ ಇತರೆ ಇಲಾಖೆಗಳಿಂದ ಪಾವತಿಸಬೇಕಾದ ಅಸಾಮಾನ್ಯ ಆದಾಯ ₹9.10 ಕೋಟಿ ಅಂದಾಜಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎನ್‌. ರೂಪೇಶಕುಮಾರ್‌ ಹೇಳಿದರು.

ಕೇಂದ್ರ ಸರ್ಕಾರದ 16ನೇ ಹಣಕಾಸು ಯೋಜನೆ ಅಡಿಯಲ್ಲಿ ರಾಜ್ಯದಿಂದ ₹23.55 ಕೋಟಿ ಅನುದಾನ ಹಂಚಿಕೆಯಾಗಿದೆ. ಇದಕ್ಕೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುತ್ತದೆ. 15ನೇ ಹಣಕಾಸು ಯೋಜನೆಯ ಎನ್‌ಎಂಪಿಸಿ ಅಡಿಯಲ್ಲಿ ರಾಜ್ಯದಿಂದ ₹18.12 ಕೋಟಿ ಅನುದಾನ ಹಂಚಿಕೆಯಾಗಿದೆ. ರಾಜ್ಯ ಹಣಕಾಸು ಆಯೋಗದಿಂದ ₹56 ಲಕ್ಷ ಮುಕ್ತನಿಧಿ ಅನುದಾನ ಹಂಚಿಕೆಯಾಗಿದ್ದು, ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ನಗರದ 6ನೇ ವಾರ್ಡಿನಲ್ಲಿ ಅಧುನಿಕ ಅನಿಲ, ವಿದ್ಯುತ್‌ ಚಿತಗಾರ ನಿರ್ಮಾಣಕ್ಕೆ ₹4 ಕೋಟಿ ಅನುದಾನ ಮಂಜೂರಾಗಿದೆ. ನೌಕರರ ವೇತನ ಪಾವತಿಗೆ ₹13.98 ಕೋಟಿ, ಬೀದಿದೀಪ ವಿದ್ಯುತ್‌ ಬಿಲ್‌ ಪಾವತಿಗೆ ₹5.74 ಕೋಟಿ, ನೀರು ಸರಬರಾಜು ಸ್ಥಾವರಗಳ ವಿದ್ಯುತ್‌ ಬಿಲ್‌ಗಾಗಿ ₹8.7 ಕೋಟಿ ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ಅಡಿಯಲ್ಲಿ ಅನುದಾನ ಹಂಚಿಕೆಯಾಗಿದೆ ಎಂದು ಅವರು ವಿವರಿಸಿದರು.

ಪೌರಕಾರ್ಮಿಕರ ಆರೋಗ್ಯ-ವಿಶ್ರಾಂತಿಗಾಗಿ ನಗರಸಭೆ ಹತ್ತಿರ ವಿಶ್ರಾಂತಿ ಗೃಹ ನಿರ್ಮಾಣವಾಗುತ್ತಿದೆ. ಶಾಸಕರ ನೇೃತೃತ್ವದಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ 10 ಕೋಟಿ ಕಾಮಗಾರಿಗಳು ಮಂಜೂರಾಗಿವೆ. 2.70 ಕೋಟಿ ನಗರಸಭೆಗೆ ಅನುದಾನ ಬಿಡುಗಡೆಯಾಗಿದೆ. ನಗರದ 4 ಇಂದಿರಾ ಕ್ಯಾಂಟೀನ್‌ ಗಳಿಗೆ ಆಹಾರ ಪೂರೈಕೆಗೆ 20 ಲಕ್ಷ ಸಹಾಯಧನ ನೀಡಲಾಗುತ್ತಿದೆ ಎಂದರು.

ವ್ಯಾಪಾರ ಪರವಾನಗಿ ಶುಲ್ಕ ₹80 ಲಕ್ಷ, ವಾಣಿಜ್ಯ ಮಳಿಗೆಗಳ ಬಾಡಿಗೆ ₹75 ಲಕ್ಷ, ನೀರು ಸರಬರಾಜು ಶುಲ್ಕ ₹1.80 ಕೋಟಿ ವಾರ್ಷಿಕ ಆದಾಯ ಅಂದಾಜಿಲಾಗಿತ್ತು. ಡಿಸೆಂಬರ್‌ ಅಂತ್ಯಕ್ಕೆ ವ್ಯಾಪಾರ ಶುಲ್ಕಗಳು ₹36.54 ಲಕ್ಷ, ಮಳಿಗೆಗಳಿಂದ ಬಾಡಿಗೆ ₹22.45 ಲಕ್ಷ ಸಂಗ್ರಹವಾಗಿದೆ. ನೀರು ಸರಬರಾಜು ಶುಲ್ಕ ₹59.04 ಲಕ್ಷ ಮಾತ್ರ ಸಂಗ್ರಹವಾಗಿದೆ ಎಂದು ಅವರು ಹೇಳಿದರು.

ಸಭೆ ಆರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶರವಣ ಅವರು ಬಜೆಟ್‌ ಪ್ರತಿಯನ್ನು ಅಧ್ಯಕ್ಷ ಎನ್‌. ರೂಪೇಶ್‌ ಕುಮಾರ್‌ ಅವರಿಗೆ ಓದಲು ಹಸ್ತಾಂತರಿಸಿದರು. ನಂತರ ಅಧ್ಯಕ್ಷ ರೂಪೇಶ್‌ ಕುಮಾರ್‌ ಬಜೆಟ್‌ ಓದಿದರು. ಉಪಾಧ್ಯಕ್ಷ ಜೀವರತ್ನಂ, ಪೌರಾಯುಕ್ತ ಎರಗುಡಿ ಶಿವಕುಮಾರ್ ಸೇರಿದಂತೆ ನಗರಸಭೆಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಾಕ್ಸ್‌:

ಡಾ.ಅಂಬೇಡ್ಕರ್‌ ವೃತ್ತದಲ್ಲಿ ಹೈಡ್ರಾಲಿಕ್‌ ಅಳವಡಿಕೆ ಹಾಗೂ ಅಭಿವೃದ್ಧಿಗೆ ₹18.50 ಲಕ್ಷ ನೀಡಿದ್ದನ್ನು ಹಾಗೂ ಮದಕರಿ ನಾಯಕ ವೃತ್ತ ಸೇರಿದಂತೆ ವಿವಿಧ ವೃತ್ತಗಳ ದುರಸ್ತಿಗಾಗಿ ಕೇವಲ ₹8 ಲಕ್ಷ ಮೀಸಲಿಟ್ಟಿದ್ದನ್ನು ಸದಸ್ಯ ಹನುಮಂತಪ್ಪ ಬುಜ್ಜಿ ಪ್ರಶ್ನಿಸಿದರು. ಈ ತಾರತಮ್ಯ ಸರಿಯಲ್ಲ. ಎರಡು ವರ್ಷದ ಹಿಂದೆಯೇ ಮದಕರಿ ನಾಯಕ ವೃತ್ತ ಅಭಿವೃದ್ಧಿಗೆ ₹44 ಲಕ್ಷದ ಅಂದಾಜು ಸಿದ್ಧಪಡಿಸಿ ನಗರಸಭೆಯ ಒಪ್ಪಿಗೆ ಪಡೆಯಲಾಗಿತ್ತು. ಕಳೆದ ವರ್ಷವೇ ಕ್ರಿಯಾಯೋಜನೆಗೆ ಅನುಮತಿ ದೊರೆತಿದೆ. ಆದರೆ ಈ ಬಜೆಟ್‌ನಲ್ಲಿ ಮದಕರಿ ನಾಯಕ ವೃತ್ತಕ್ಕೆ ಕಡಿಮೆ ಹಣ ಘೋಷಣೆ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ರಾಘವೇಂದ್ರ, ತಾರಿಹಳ್ಳಿ ಜಂಬುನಾಥ ದನಿಗೂಡಿಸಿ ಪ್ರಶ್ನಿಸಿದರು. ಸಭೆಯಲ್ಲಿ ಸ್ವಲ್ಪಮಟ್ಟಿಗೆ ಮಾತಿನ ಗದ್ದಲ ಉಂಟಾಗಿ ಕೊನೆಗೆ ರಸ್ತೆ ದುರಸ್ತಿಗೆ ಮೀಸಲಿಟ್ಟ ಅನುದಾನದಲ್ಲೇ ₹44 ಲಕ್ಷವನ್ನು ಮದಕರಿ ನಾಯಕ ವೃತ್ತದ ಅಭಿವೃದ್ದಿಗೆ ತೆಗೆದಿರಿಸಲು ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸಿ: ಅಶೋಕ ಸಂಗಪ್ಪ
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ: ವೀಣಾ ಅಠವಾಲೆ