ಹಾವು ಕಡಿತಕ್ಕೆ ಆಸ್ಪತ್ರೆ ಮೊದಲ ಆಯ್ಕೆಯಾಗಿರಲಿ

KannadaprabhaNewsNetwork |  
Published : Oct 04, 2026, 02:45 AM IST
ಫೋಟೋವಿವರ- (28ಎಚ್‌ಪಿಟಿ5) ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುತ್ತಿರುವ ಮರಣ ಪ್ರಕರಣಗಳ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು | Kannada Prabha

ಸಾರಾಂಶ

ಹಾವು ಕಡಿತ ಪ್ರಕರಣ ನಿಭಾಯಿಸುವ ಕುರಿತು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು

ಹೊಸಪೇಟೆ: ಹಾವು ಕಡಿತದಂತಹ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ವಿಳಂಬವಾಗದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಆಂಟಿ ಸ್ನೇಕ್ ವೆನಮ್ ಔಷಧಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು.ದಾಸ್ತಾನು ಇಲ್ಲ ಎಂಬ ಕಾರಣ ನೀಡಿ ರೋಗಿಗೆ ಚಿಕಿತ್ಸೆ ವಿಳಂಬಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುತ್ತಿರುವ ಮರಣ ಪ್ರಕರಣಗಳ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2026ರ ಜನವರಿಯಿಂದ ಈವರೆಗೆ ಜಿಲ್ಲೆಯಾದ್ಯಂತ 10 ಮಂದಿ ಹಾವು ಕಡಿತದಿಂದ ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಹಾವು ಕಡಿತದ ಚಿಕಿತ್ಸೆಗೆ ಅಗತ್ಯವಿರುವ ಆಂಟಿ ಸ್ನೇಕ್ ವೆನಮ್ ದಾಸ್ತಾನು ಇರುವಂತೆ ಸೂಚನೆ ನೀಡಿದೆ.ಆದರೂ ಕೆಲವೆಡೆ ದಾಸ್ತಾನು ಇಲ್ಲ,ಇನ್ನು ಕೆಲವೆಡೆ ದಾಸ್ತಾನಿದ್ದರೂ ನಿಯಮಾನುಸಾರ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬುದು ದುರಂತ. ಯಾವುದೇ ಕಾರಣಕ್ಕೂ ಇಂತಹ ಸಬೂಬು ಹೇಳುವಂತಿಲ್ಲ. ಅಗತ್ಯ ಪ್ರಮಾಣದ ಔಷಧಿ ದಾಸ್ತಾನು ಇರಬೇಕು ಮತ್ತು ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದರು.

ಹಾವು ಕಡಿತ ಪ್ರಕರಣ ನಿಭಾಯಿಸುವ ಕುರಿತು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು. ಹಾವು ಕಡಿತದ ಲಕ್ಷಣ ಗುರುತಿಸುವುದು, ರೋಗಿಯ ಸ್ಥಿತಿ ಪರಿಶೀಲನೆ, ಅಗತ್ಯ ಪರೀಕ್ಷೆ, ಆಂಟಿವೆನಮ್ ನೀಡುವ ವಿಧಾನ, ಪ್ರತಿಕೂಲ ಪರಿಣಾಮಗಳ ನಿರ್ವಹಣೆ ಹಾಗೂ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗೆ ತ್ವರಿತವಾಗಿ ರೆಫರ್ ಮಾಡುವ ಕುರಿತು ತರಬೇತಿ ನೀಡುವಂತೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಮಾತನಾಡಿ, ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರದಲ್ಲಿ ದಾಸ್ತಾನು ಕಡಿಮೆಯಾಗುವ ಮುನ್ನವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಪೂರೈಕೆ ಮಾಡಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ಜೀವ ಉಳಿಸುವ ಅವಕಾಶ ನಮ್ಮ ಕೈಯಲ್ಲಿದ್ದಾಗ ಔಷಧಿ ದಾಸ್ತಾನು ಇಲ್ಲ ಎಂಬ ಕಾರಣ ಹೇಳಿ ಚಿಕಿತ್ಸೆ ವಿಳಂಬವಾಗಬಾರದು. ಸಾರ್ವಜನಿಕರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಭವಿಷ್ಯಕ್ಕೆ ಪ್ರಕೃತಿ ಸಂರಕ್ಷಣೆ ಅಗತ್ಯ: ಬಾಗಡೆ
ಬೆಳೆ ವಿಮೆ ಪರಿಹಾರ ಪರಿಶೀಲಿಸಿ ಪರಿಷ್ಕರಣೆಗೆ ಪ್ರಭು ಒತ್ತಾಯ