ಸೌದೆಒಲೆ ಹಾಕಲು ಮುಂದಾದ ಹೋಟೆಲ್‌ ಮಾಲೀಕರು

KannadaprabhaNewsNetwork |  
Published : Mar 23, 2026, 01:45 AM IST
22ಎಚ್ಎಸ್ಎನ್17: ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ಮಾಡಲು ಸೌದೆ ಒಲೆಗೆ ಕಟ್ಟಿಗೆಗಳನ್ನು ಅಣಿಗೊಳಿಸುತ್ತಿರುವ ಹೋಟೆಲ್ ನೌಕರರು . | Kannada Prabha

ಸಾರಾಂಶ

ಕಳೆದ 22 ದಿನಗಳಿಂದ ನಡೆಯುತ್ತಿರುವ ಕೊಲ್ಲಿ ಯುದ್ಧದ ಪರಿಣಾಮ ಅಡುಗೆ ಅನಿಲ ಕೊರತೆ ಉಂಟಾಗಿ ತಾಲೂಕಿನಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ತಲ್ಲಣಗೊಂಡಿದೆ. ಹೋಟೆಲ್ ನಡೆಸಲು ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಲೇಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಸ್ವಂತ ಕಟ್ಟಡ ಹೊಂದಿರುವವರು ಸೌದೆ ಒಲೆಗಳನ್ನು ಹಾಕಿಕೊಳ್ಳುತ್ತಿದ್ದರೆ, ಬಾಡಿಗೆ ಕಟ್ಟಡದಲ್ಲಿರುವವರು ಮಾಲೀಕರು ಅಪ್ಪಣೆ ಕೊಟ್ಟರಷ್ಟೇ ಹಾಗೂ ಅಲ್ಲಿ ಸ್ಥಳಾವಕಾಶವಿದ್ದರೆ ಮಾತ್ರ ಸೌದೆ ಒಲೆಗಳನ್ನು ಹಾಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಕಳೆದ 22 ದಿನಗಳಿಂದ ನಡೆಯುತ್ತಿರುವ ಕೊಲ್ಲಿ ಯುದ್ಧದ ಪರಿಣಾಮ ಅಡುಗೆ ಅನಿಲ ಕೊರತೆ ಉಂಟಾಗಿ ತಾಲೂಕಿನಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ತಲ್ಲಣಗೊಂಡಿದೆ.ಮಧ್ಯ ಪ್ರಾಚ್ಯ ಬಿಕ್ಕಟ್ಟು ಸ್ಥಳೀಯ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಹೋಟೆಲ್, ಮೆಸ್, ಕ್ಯಾಂಟೀನ್ ಮಾಲೀಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೆರಡು ವಾರಗಳಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾರದೆ, ಸಿಕ್ಕ 5 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಬಳಸಿ, ಹೆಚ್ಚು ಗ್ಯಾಸ್ ಬಳಕೆಯಾಗುವಂತಹ ತಿಂಡಿ ತಿನಿಸುಗಳನ್ನು ಕೈ ಬಿಟ್ಟು ಕೆಲವೇ ಪದಾರ್ಥಗಳನ್ನು ಮಾತ್ರ ಮಾಡಿಕೊಂಡು ಹಾಗೂ ಹೇಗೋ ಹೋಟೆಲ್ ನಡೆಸಿಕೊಂಡು ಬರುತ್ತಿದ್ದ ಹೋಟೆಲ್ ಮಾಲೀಕರು, ಯುದ್ಧದ ಪರಿಣಾಮದಿಂದಾಗಿ ಅರ್ಧಕ್ಕರ್ಧ ವ್ಯಾಪಾರವನ್ನು ಕಳೆದುಕೊಂಡಿದ್ದರು. ಆದರೆ ಈಗ ಅನಿಲ ಸಿಲಿಂಡರ್ ಕೊರತೆ ತೀವ್ರಗೊಂಡ ಪರಿಣಾಮ, ಹೋಟೆಲ್ ನಡೆಸಲು ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಲೇಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಸ್ವಂತ ಕಟ್ಟಡ ಹೊಂದಿರುವವರು ಸೌದೆ ಒಲೆಗಳನ್ನು ಹಾಕಿಕೊಳ್ಳುತ್ತಿದ್ದರೆ, ಬಾಡಿಗೆ ಕಟ್ಟಡದಲ್ಲಿರುವವರು ಮಾಲೀಕರು ಅಪ್ಪಣೆ ಕೊಟ್ಟರಷ್ಟೇ ಹಾಗೂ ಅಲ್ಲಿ ಸ್ಥಳಾವಕಾಶವಿದ್ದರೆ ಮಾತ್ರ ಸೌದೆ ಒಲೆಗಳನ್ನು ಹಾಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.ಇನ್ನೂ ಕೆಲವು ಹೋಟೆಲ್ ಮಾಲೀಕರು ಗ್ಯಾಸ್ ಇಲ್ಲವೆಂದು ಹೋಟೆಲ್ ರಜೆ ಮಾಡಿದರೆ, ಪುನಃ ಹೋಟೆಲ್ ಆರಂಭಗೊಂಡಾಗ ಪ್ರಮುಖವಾಗಿ ಅಡುಗೆ ಭಟ್ಟರು ಸೇರಿದಂತೆ, ಇತರೆ ನೌಕರರು ಪುನಃ ಬರುವ ಗ್ಯಾರಂಟಿ ಇಲ್ಲದ ಕಾರಣ, ವಿಧಿ ಇಲ್ಲದೆ ನಷ್ಟವಾದರೂ ಪರವಾಗಿಲ್ಲ ನೌಕರರನ್ನು ಬಿಡಬಾರದೆಂದು ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ. ಊಟ ತಿಂಡಿಗಾಗಿ ಹೋಟೆಲ್‌ಗಳನ್ನೇ ಅವಲಂಬಿಸಿರುವವರ ಪರಿಸ್ಥಿತಿಯಂತೂ ಹೇಳುತ್ತಿರದಂತಾಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಸರ್ಕಾರಿ ಹಾಗೂ ಖಾಸಗಿ ನೌಕರರು ಹೆಚ್ಚುಭಾಗ ಹಾಸನ ನಗರದಲ್ಲಿ ವಾಸವಿದ್ದು, ಮಧ್ಯಾಹ್ನದ ಊಟಕ್ಕೆ ಇಲ್ಲಿಯ ಹೋಟೆಲ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಬಿಪಿ ಶುಗರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವವರು, ಊಟಕ್ಕೆ ಚಪಾತಿ, ಮುದ್ದೆ ದೊರೆಯುವಂತಹ ಹೋಟೆಲ್‌ಗಳ ಕಾಯಂ ಗಿರಾಕಿಗಳಾಗಿದ್ದು, ಅವರು ಸಹ ಸರಿಯಾದ ಊಟ ದೊರೆಯದೆ ತೊಂದರೆ ಅನುಭವಿಸುವಂತಾಗಿದೆ.ಇನ್ನು ದಿನನಿತ್ಯ ಬೆಳಿಗ್ಗೆ ಬೇಗನೆ ಕೆಲಸಕ್ಕೆ ಹೋಗುವ ಶೇಕಡ 75ರಷ್ಟು ಕಾರ್ಮಿಕರಿಗೆ ಹೋಟೆಲ್‌ಗೆ ಆಹಾರಕ್ಕೆ ಆಧಾರವಾಗಿದ್ದು, ಮಧ್ಯ ಪ್ರಾಚ್ಯ ಬಿಕ್ಕಟ್ಟು ಇವರನ್ನು ಬಿಟ್ಟಿಲ್ಲ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟಕ್ಕೆ ಇವರು ಸಹ ಪರದಾಡುವಂತಾಗಿದೆ. ಮೊದಲೆಲ್ಲಾ ಸಂಜೆ ವೇಳೆಯಲ್ಲಿ ದೊರೆಯುತ್ತಿದ್ದ ಪಾನಿಪುರಿ, ಗೋಬಿ ಮಂಚೂರಿ ಅಂತಹ ವ್ಯಾಪಾರಿಗಳು ಇತ್ತೀಚೆಗೆ ಬೆಳಗ್ಗೆಯಿಂದಲೇ ತಮ್ಮ ವ್ಯಾಪಾರ ಆರಂಭಿಸುತ್ತಿದ್ದು ಈಗ ವಿಧಿ ಇಲ್ಲದೆ ಪುನಃ ಸಂಜೆಯ ವೇಳೆಯಿಂದ ಮೊದಲಿನಂತೆ ತಮ್ಮ ವ್ಯಾಪಾರ ನಡೆಸಲು ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ಗೃಹಬಳಕೆ ಸಿಲಿಂಡರ್‌ಗಳನ್ನು ಇಲ್ಲಿಯ ವಿತರಕರು ಸೂಕ್ತ ರೀತಿಯಲ್ಲಿ ಮಾಡುತ್ತಿರುವ ಪರಿಣಾಮ ಗೃಹಣಿಯರು ನಿರಾಳವಾಗಿದ್ದಾರೆ.ಒಟ್ಟಾರೆ ಯುದ್ಧ ಸದ್ಯಕ್ಕೆ ನಿಲ್ಲುವ ಸ್ಥಿತಿ ಕಾಣದಾಗಿದ್ದು, ಸಾರ್ವಜನಿಕರು ಎಲ್ಲಾ ರೀತಿಯ ಅನಿಲಗಳನ್ನು ಆದಷ್ಟು ಕಡಿಮೆ ಬಳಸುವ ಮೂಲಕ ಯುದ್ಧ ನಿಲ್ಲುವವರೆಗೂ ತಾವುಗಳು ಸಹ ಜೀವನ ಸಂಘರ್ಷದಲ್ಲಿ ಹೋರಾಟ ನಡೆಸಲೇಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವೆ ಎಂದ ಅರ್ಪಿತಾ ಪಟೇಲ್‌
ಪಡಗೂರು ಅಡವಿ ಮಠದಲ್ಲಿ ವಚನ ಕಲ್ಯಾಣ