ಕನ್ನಡಪ್ರಭ ವಾರ್ತೆ ಮಡಿಕೇರಿ
ಸಂತ್ರಸ್ತ ಫಲಾನುಭವಿಗಳಿಗೆ ಮನೆ ಹಂಚಿಕ ಮಾಡಬೇಕಿರುವುದರಿಂದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಸಂಬಂಧ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಡಿ.31 ರೊಳಗೆ ಅಪರ ಜಿಲ್ಲಾಧಿಕಾರಿ (ಪುನರ್ವಸತಿ) ಹಾಗೂ ಉಪ ವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ, ಮಡಿಕೇರಿ ಅವರ ಕಚೇರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ತಿಳಿಸಿದ್ದಾರೆ.ಮತ್ತಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ 2018 ರ ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಭಾರಿ ಮಳೆ ಹಾಗೂ ಭೂಕುಸಿತದಿಂದ ಮನೆ, ಕಟ್ಟಡ, ಗದ್ದೆ, ಕಾಫಿ ತೋಟ, ರಸ್ತೆ, ಸೇತುವೆಗಳು ಹಾಗೂ ಇತರೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಜೀವ ಹಾನಿಯುಂಟಾಗಿದ್ದಲ್ಲದೇ ಅನೇಕ ಜನರು ಮನೆ ಕಳೆದುಕೊಂಡು ಸಂತ್ರಸ್ತರಾಗಿರುತ್ತಾರೆ.
ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳನ್ನು ಮೊದಲ ಹಂತದಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಪರಿವೀಕ್ಷಕರು ಹಾಗೂ ತಹಸೀಲ್ದಾರರಿಂದ ಸ್ಥಳ ಪರಿಶೀಲನಾ ವರದಿ ಪಡೆಯಲಾಯಿತು. ನಂತರ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ಈ ಅಧಿಕಾರಿಗಳು ಫಲಾನುಭವಿಗಳ ಮನೆಗಳನ್ನು ಖುದ್ದು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ಬಗ್ಗೆ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಸಲ್ಲಿಸಿರುತ್ತಾರೆ.ಪುನರ್ವಸತಿ ಪಡೆಯಲು ಅರ್ಹರಿರುವ ಸಂತ್ರಸ್ತರ ಪಟ್ಟಿ ಸಿದ್ದಪಡಿಸಲಾಗಿದ್ದು, ಮೊದಲನೇ ಆದ್ಯತಾ ಪಟ್ಟಿಯಲ್ಲಿ 445, ಎರಡನೇ ಆದ್ಯತಾ ಪಟ್ಟಿಯಲ್ಲಿ 421 ಒಟ್ಟು 866 ಫಲಾನುಭವಿಗಳು.
ಸರ್ಕಾರದ ಆದೇಶದಂತೆ 840 ಪುನರ್ವಸತಿ ಮನೆಗಳನ್ನು ನಿರ್ಮಿಸಲು ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ ಅವರಿಗೆ ಒಂದು ಮನೆಗೆ 9.85 ಲಕ್ಷ ರು.ಗಳಂತೆ ಒಟ್ಟು 8274 ಲಕ್ಷ ರು. ಗಳನ್ನು ಹಂತ ಹಂತವಾಗಿ ನೀಡಲಾಗಿದೆ.ಹೆಚ್ಚುವರಿಯಾಗಿ ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಜಂಬೂರು ಗ್ರಾಮದಲ್ಲಿ 200 ಮನೆಗಳನ್ನು ನಿರ್ಮಿಸುತ್ತಿದ್ದು ಮನೆ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಹಾಗೂ ಇತರೆ ಕಾಮಗಾರಿಗಳು ಪೂರ್ಣಗೊಳ್ಳಲು ಬಾಕಿ ಇದೆ. ಈ ಪ್ರದೇಶದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ ವ್ಯವಸ್ಥೆ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಕಾಮಗಾರಿ ಪೂರ್ಣಗೊಂಡ ನಂತರ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಫಲಾನುಭವಿಗಳಿಗೆ ಸರ್ಕಾರ ವತಿಯಿಂದ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡುವ ಸಂಬಂಧ ಸಂತ್ರಸ್ತ ಫಲಾನುಭವಿಗಳಿಂದ ಸ್ಥಳ ಆಯ್ಕೆ ಮಾಡುವ ಸಂಬಂಧ ಆಯ್ಕೆ ಪತ್ರ ಸ್ವೀಕರಿಸಲಾಗಿದ್ದು, ಈ ಆಯ್ಕೆ ಪತ್ರದಲ್ಲಿ ಪ್ರಥಮ ಆದ್ಯತೆ ಹಾಗೂ ದ್ವಿತೀಯ ಆದ್ಯತೆ ಎಂದು ಫಲಾನುಭವಿಗಳು ಆಯ್ಕೆ ಪತ್ರ ನೀಡಿದ್ದು, ಈ ಆಯ್ಕೆ ಪತ್ರದನ್ವಯ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ.ಮದೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಿರ್ಮಿಸಿರುವ 80 ಮನೆಗಳಿಗೆ 80 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಈ ಪಟ್ಟಿಯಲ್ಲಿದ್ದ 4 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಆಕ್ಷೇಪಣೆ ಸ್ವೀಕೃತವಾಗಿರುವುದರಿಂದ 76 ಪುನರ್ವಸತಿ ಮನೆಗಳು ಹಂಚಿಕೆಯಾಗಿದೆ.
ಕೆ.ನಿಡುಗಣೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಿರ್ಮಿಸಿರುವ 76 ಮನೆಗಳಿಗೆ 75 ಫಲಾನುಭವಿಗಳು ಪುನರ್ವಸತಿ ಮನೆ ಪಡೆಯಲು ಒಪ್ಪಿಗೆ ನೀಡಿದ್ದು, ಅದರಂತೆ 75 ಫಲಾನುಭವಿಗಳು ಆಯ್ಕೆಯಾಗಿದ್ದು, ಈ ಪಟ್ಟಿಯಲ್ಲಿದ್ದ 1 ಫಲಾನುಭವಿಗೆ ಮನೆ ಹಂಚಿಕೆ ಮಾಡಲು ಆಕ್ಷೇಪಣೆ ಸ್ವೀಕೃತವಾಗಿರುವುದರಿಂದ 74 ಪುನರ್ವಸತಿ ಮನೆಗಳು ಹಂಚಿಕೆಯಾಗಿರುತ್ತದೆ.ಗಾಳಿಬೀಡು ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಿರ್ಮಿಸಿರುವ 140 ಮನೆಗಳಿಗೆ 100 ಫಲಾನುಭವಿಗಳು ಪುನರ್ವಸತಿ ಮನೆ ಪಡೆಯಲು ಒಪ್ಪಿಗೆ ನೀಡಿದ್ದು, ಅದರಂತೆ 84 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದು, 16 ಫಲಾನುಭವಿಗಳಿಗೆ ಮನೆ ಸಂಖ್ಯೆ ನೀಡಲಾಗಿದೆ. 40 ಮನೆಗಳು ಹಂಚಿಕೆ ಮಾಡಲು ಬಾಕಿ ಇದ್ದು, ಈ ಗ್ರಾಮದಲ್ಲಿ ಫಲಾನುಭವಿಗಳು ಪುನರ್ವಸತಿ ಮನೆ ಪಡೆಯಲು ಒಪ್ಪಿಗೆ ನೀಡಿದ್ದಲ್ಲಿ ಮನೆ ಹಂಚಿಕೆ ಮಾಡಲಾಗುವುದು.
ಜಂಬೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಿರ್ಮಿಸಿರುವ 383 ಮನೆಗಳಿಗೆ 383 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, 379 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗಿದ್ದು, 4 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಆಕ್ಷೇಪಣೆ ಸ್ವೀಕೃತವಾಗಿದೆ ಎಂದು ಉಪ ವಿಭಾಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.