ಮುರಳೀಧರ್ ಶಾಂತಳ್ಳಿ
ಕಳೆದ ವರ್ಷ ಹತ್ತನೇ ತರಗತಿ ಫಲಿತಾಂಶ ಬಂದ ಕೆಲವೇ ಹೊತ್ತಿನಲ್ಲಿ ಪ್ರಿಯಕರನಿಂದ ಭೀಕರ ಹತ್ಯೆಗೊಳಗಾದ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ವಿದ್ಯಾರ್ಥಿನಿ ಮೀನಾ (೧೬) ಕುಟುಂಬಕ್ಕೆ ಅಂದು ನೀಡಿದ ವಾಗ್ದಾನದಂತೆ ಅಂದಾಜು 8.5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನುಡಿದಂತೆ ನಡೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕುಗ್ರಾಮವಾದ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಮತ್ತು ಜಾನಕಿ ದಂಪತಿ ಪುತ್ರಿ ಮೀನಾ, ಕಳೆದ ವರ್ಷ ಮೇ ೧೦ರಂದು ಹತ್ತನೇ ತರಗತಿಯಲ್ಲಿ ಉತ್ತೀರ್ಣಳಾಗಿ ಭವಿಷ್ಯ ರೂಪಿಸುವ ಕನಸನ್ನು ಹೊಂದಿದ್ದ ವಿದ್ಯಾರ್ಥಿನಿ. ಆದರೆ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂಬಾತನೊಂದಿಗೆ ಅದೇ ದಿನ ಮೀನಾಳೊಂದಿಗೆ ನಿಶ್ಚಿತಾರ್ಥ ಆಗಿತ್ತು. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದುವ ಹಂಬಲವಿದ್ದ ಮೀನಾ, ಈಗಲೇ ಮದುವೆ ಬೇಡ ಎಂದು ಕುಟುಂದವರೊಂದಿಗೆ ಹೇಳಿದ್ದರಿಂದ ಅದೇ ದಿನ ಸಂಜೆ ಅಂದರೆ ಮೇ ೧೦ರಂದು ಮಚ್ಚಿನಿಂದ ರುಂಡವನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ನಂತರ ಪೊಲೀಸರ ಬಲೆಗೆ ಬಿದ್ದಿದ್ದ.ಆ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಮೃತೆ ಮೀನಾಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭ, ತಮಗೆ ವಾಸಿಸಸಲು ಸ್ವಂತ ಮನೆಯಿಲ್ಲ, ಸಹಾಯ ಮಾಡಿ ಎಂದು ಮನೆಯವರು ಮನವಿ ಮಾಡಿದ್ದರು. ಮಾನವೀಯತೆ ಮೆರೆದ ಶಾಸಕರು ಮನೆ ಜಾಗಕ್ಕೆ ಯಾವುದೇ ದಾಖಲೆಯಿಲ್ಲದಿರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು, ತಮ್ಮ ಹಾಗೂ ಹಿತೈಷಿಗಳ ನೆರವಿನೊಂದಿಗೆ ಅಂದಾಜು 8.5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಒಂದು ವರ್ಷದೊಳಗೆ ನಿರ್ಮಿಸಿ ಜೂ.೯ರಂದು ಮನೆಯನ್ನು ಹಸ್ತಾಂತರಿಸುತ್ತಿದ್ದಾರೆ.
ಮೃತೆ ಮೀನಾಳ ಮನೆಗೆ ಭೇಟಿ ನೀಡಿದ ಸಂದರ್ಭ ತಮಗೆ ವಾಸಿಸಲು ಉತ್ತಮವಾದ ಮನೆಯಿಲ್ಲ. ಮಳೆಗಾಲ ಬಂತೆಂದರೆ ಹೆದರಿಕೆಯಾಗುತ್ತೆ. ಈ ಮೊದಲು ಭೂಕುಸಿತ ಸಂಭವಿಸಿದಾಗ ಅನುಭವಿಸಿಯಾಗಿದೆ. ಆದ್ದರಿಂದ ಮನೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದ್ದರು. ಆ ಸಂದರ್ಭ ನೀಡಿದ ಭರವಸೆಯಂತೆ ನಾನು ಹಾಗೂ ಹಿತೈಷಿಗಳೂ ಸೇರಿ ಮನೆ ನಿರ್ಮಿಸಿಕೊಟ್ಟಿದ್ದೇವೆ.
ಸುಮಾರು ೮ ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಇದೇ ರೀತಿಯ ಸಮಾಜ ಸೇವೆಯನ್ನು ಮುಂದುವರಿಸಲು ದೇವರು ಶಾಸಕ ಮಂತರ್ ಗೌಡ ಅವರಿಗೆ ಆಶೀರ್ವಾದ ನೀಡಲಿ. ಮೃತೆ ಮೀನಾಳ ಕುಟುಂಬಕ್ಕೆ ಒಳ್ಳೆಯದಾಗಲಿ.
ಇಂದು ಮೀನಾ ಪೋಷಕರಿಗೆ ಮನೆ ಹಸ್ತಾಂತರ
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನ ಭೀಕರವಾಗಿ ಹತ್ಯೆಯಾಗಿದ್ದ ವಿದ್ಯಾರ್ಥಿನಿ ಮೀನಾ ಅವರ ಪೋಷಕರಿಗೆ ಸಾಂತ್ವನದ ಭಾಗವಾಗಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಮಂತರ್ ಗೌಡ ನೀಡಿದ್ದು, ಇದೀಗ ಮನೆ ನಿರ್ಮಾಣಗೊಂಡಿದೆ. ಮನೆಯನ್ನು ಸೋಮವಾರ ಬೆಳಗ್ಗೆ 11.30ಕ್ಕೆ ಮುಟ್ಲು ಗ್ರಾಮದಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.