ಭಟ್ಕಳ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆ ಮನೆಗಳು ಕುಸಿದಿವೆ.
ಬೇಂಗ್ರೆ ಸಣ್ಭಾವಿಯ ಜುವಾಂವ ಜೂಜೆ ಲೂವಿಸ್ ಅವರ ವಾಸ್ತವ್ಯದ ಪಕ್ಕಾ ಮನೆ ಮೇಲೆ ತೆಂಗಿನ ಮರಬಿದ್ದು ಭಾಗಶಃ ಹಾನಿಯಾಗಿದೆ. ಸೋಮವಾರ ಬೆಳಗಿನ ಜಾವ ಪಟ್ಟಣದ ರಂಗೀನಕಟ್ಟೆಯ ಅಖೀಲಾ ನಾಯ್ತೆ ಅವರ ಮನೆಯ ಚಾವಣಿ ಮತ್ತು ಮನೆ ಮುಂದಿನ ತಗಡಿನ ಶೀಟ್ ಭಾರೀ ಗಾಳಿಗೆ ಮಳೆಗೆ ಹಾರಿ ಹೋಗಿ ಸುಮಾರು ₹2 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ರಂಗಿನಕಕಟ್ಟೆಯಲ್ಲಿ ಹಾರಿ ಹೋದ ತಗಡು ಶೀಟ್ ಪಕ್ಕದ ಮನೆಯ ವಿಠಲ್ ಪ್ರಭು ಅವರ ಮನೆಯ ತಗಡಿನ ಶೀಟ್ ಮೇಲೆ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಹಾಗೂ 4 ತೆಂಗಿನ ಮರ, 2 ಮಾವಿನ ಮರ, 2 ಅಮ್ಟೆ ಮರ, ಎರಡು ವಿದ್ಯುತ್ ಕಂಬಗಳು ಉರುಳಿವೆ. ಮುಠ್ಠಳ್ಳಿಯ ಬಿಳಲಕಂಡ ಗ್ರಾಮದ ಫಾತಿಮಾ ಪರ್ವಿನ್ ಅವರ ಮನೆ ಚಾವಣಿ ಹಾನಿಯಾದರೆ, ಕಾಯ್ಕಿಣಿಯ ಮಠದಹಿತ್ಲು ನಾರಾಯಣ ದುರ್ಗಪ್ಪ ನಾಯ್ಕ ಇವರ ಮನೆ ಮಳೆಗಾಳಿಗೆ ಪೂರ್ಣ ಕುಸಿದಿದೆ.ಹಡಿನ ಗ್ರಾಮದ ಬಾಳೆಹಿತ್ಲು ಮಜರೆಯಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ತೊಂದರೆ ಉಂಟಾಯಿತು. ಬಿಳಲಖಂಡ ಗ್ರಾಮದ ಮಹಬುಬಿ ಬಡಿಗೇರ ಅವರ ಮನೆ ಮೇಲೆ ಮರ ಬಿದ್ದಿದೆ. ಮಾವಳ್ಳಿ 2 ಗ್ರಾಮದ ಆಚಾರಿಕೇರಿ ಮಜರೆ ನಿವಾಸಿ ಮಂಜುನಾಥ ಮಾದೇವ ಆಚಾರಿ ಅವರ ಮನೆಯ ಸನಿಹದ ಕೊಠಡಿಯ ಮರದ ಕೊಂಬೆ ಬಿದ್ದು ಹಾನಿಯಾಗಿದೆ.
ಯಲ್ವಡಿಕಾವೂರು ಗ್ರಾಮದ ರಾಜು ನಾಯ್ಕ ಅವರ ಮನೆ ಹಾನಿಯಾದರೆ, ತಲಾನ ಗ್ರಾಮದ ಲಕ್ಷ್ಮಿ ದುರ್ಗಪ್ಪ ನಾಯ್ಕ ಅವರ ಮನೆ ಗೋಡೆ ಕುಸಿದಿದೆ. ಶಿರಾಲಿಯ ಪಾರ್ವತಿ ದುರ್ಗಪ್ಪ ನಾಯ್ಕ ಅವರ ಮನೆಯ ಚಾವಣಿ ಬಿದ್ದಿದೆ. ಬೇಂಗ್ರೆಯ ಪರಮೇಶ್ವರ ಚೌಡಾ ದೇವಡಿಗ ಎಂಬವರ ಆಟೋ ಮೇಲೆ ತೆಂಗಿನಮರ ಬಿದ್ದು ಜಖಂಗೊಂಡಿದೆ.