
ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹ
ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಭೂತನಕಾಡು ಕಲ್ಲುಬಂಡೆ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆ ಹರಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಗೃಹಿಣಿಯರು ಖಾಲಿ ಕೊಡಗಳೊಂದಿಗೆ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು.ಗ್ರಾಮದ ವಯೋವೃದ್ಧೆ ನಬಿಸಾ ಮಾತನಾಡಿ ಕಳೆದ 10- 20 ದಿನಗಳಿಂದ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ. ಹಣ ನೀಡಿ ಕುಡಿಯುವ ನೀರು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಪ್ರತಿ ಮನೆಗೆ ಒಂದರಿಂದ ಎರಡು ಬ್ಯಾರೆಲ್ ನೀರು ಮಾತ್ರ ಸಿಗುತ್ತಿದೆ. ಇದು ಕುಟುಂಬದ ಅಗತ್ಯಕ್ಕೆ ಸಾಕಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗೃಹಿಣಿಯರಾದ ಹಬೀಬಾ, ಜುಬೇದ, ಗಿರಿಜಾ ಹಾಗೂ ಪದ್ಮ ಮಾತನಾಡಿ ಕುಡಿಯುವ ನೀರು ಪೂರೈಸುವ ಬಾವಿಯ ಮೋಟಾರ್ ಮತ್ತು ಸ್ವಿಚ್ ಹಾಳಾಗಿವೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಮತ್ತೊಂದೆಡೆ ಬಾವಿ ಯಲ್ಲಿ ಕೆಸರು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು, ಇದನ್ನು ಬಳಸುವುದರಿಂದ ಮನೆಯಲ್ಲಿರುವ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಎದುರಾಗಿದೆ ಎಂದು ದೂರಿದರು.ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುವಪ್ಪ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸುವಂತೆ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಶಾಶ್ವತ ಪರಿಹಾರ ಕಲ್ಪಿಸಲು ಸುಮಾರು ₹4 ಲಕ್ಷ ಅನುದಾನದ ಅಗತ್ಯವಿದೆ. ಈ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ಬಳಿಕ ಪಂಚಾಯಿತಿಯಿಂದ ಬಾವಿಯ ಮೋಟಾರ್ ಮತ್ತು ಸ್ವಿಚ್ ದುರಸ್ತಿ ಮಾಡ ಲಾಗಿತ್ತು. ಆದರೆ ಮತ್ತೆ ಅದೇ ಸಮಸ್ಯೆ ಎದುರಾಗಿದೆ. ಟ್ಯಾಂಕರ್ ಮೂಲಕ ಪೂರೈಸುವ ನೀರು ಸಾಕಾಗುತ್ತಿಲ್ಲ. ಅಧಿಕಾರಿ ಗಳು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಿನೋದ್ ರಾಜ್, ಇಲಾರಿ ಮೇಸ್ತ್ರಿ ಇದ್ದರು.ಈ ಕುರಿತು ಪಂಚಾಯಿತಿ ಪಿಡಿಒ ಸುರಯ್ಯ ಬಾನು ಪ್ರತಿಕ್ರಿಯಿಸಿ, ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಪತ್ರ ವ್ಯವಹಾರ ನಡೆಸಿ ಮನವಿ ಸಲ್ಲಿಸಲಾಗಿದೆ. ಬಾವಿ ಮೋಟಾರ್ ಮತ್ತು ಸ್ವಿಚ್ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ಮಾತನಾಡಿ ಬಾವಿಯ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಗ್ರಾಮಕ್ಕೆ ತುರ್ತಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.