ಮುಂದಿನ ಎರಡು ವರ್ಷಗಳಲ್ಲಿ ಅರ್ಹರಿಗೆ ವಸತಿ ಸೌಲಭ್ಯ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Feb 07, 2024, 01:48 AM IST
ಫೋಟೊ:೫ಎಚ್‌ಎನ್‌ಎಲ್೪ | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ೨ ವರ್ಷಗಳ ಅವಧಿಯಲ್ಲಿ ನಿವೇಶನ ಮತ್ತು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ.

ನಗರ ಆಶ್ರಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ೨ ವರ್ಷಗಳ ಅವಧಿಯಲ್ಲಿ ನಿವೇಶನ ಮತ್ತು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಳಕಳಿಯಿಂದ ಕೆಲಸ ಮಾಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಸೂಚನೆ ನೀಡಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಕಷ್ಟು ನಿವೇಶನಗಳು ಅತಿಕ್ರಮಣಗೊಂಡಿವೆ. ಅವೆಲ್ಲವನ್ನೂ ತೆರವುಗೊಳಿಸಿ. ನಿವೇಶನ ಹಂಚಿಕೆ ಮಾಡಿದ್ದರೂ ಹಲವರು ಮನೆ ನಿರ್ಮಿಸಿಕೊಳ್ಳದೇ ಹಾಗೆಯೇ ಬಿಟ್ಟಿದ್ದಾರೆ. ಅವೆಲ್ಲವನ್ನೂ ಸೇರಿಸಿ ಲಭ್ಯವಿರುವ ಒಟ್ಟು ನಿವೇಶನಗಳನ್ನು ಪಟ್ಟಿ ಮಾಡಿ. ಮಾರ್ಚ್ ಮೊದಲ ವಾರ ಮತ್ತೆ ಸೇರೋಣ. ಆ ಸಭೆಯಲ್ಲಿ ಲಭ್ಯ ನಿವೇಶನಗಳ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.

ಈಗಾಗಲೇ ಸ್ಲಂ ಬೋರ್ಡ್‌ನಿಂದ ಸಾವಿರ, ವಸತಿ ಯೋಜನೆಯಡಿ ಸಾವಿರ ಮನೆಗಳು ಮಂಜೂರಾಗಿವೆ. ವಸತಿ ಯೋಜನೆಯಡಿ ಇದುವರೆಗೂ ಕೇವಲ ೪೦೫ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಉಳಿದಿರುವ ಅರ್ಹರನ್ನೂ ಗುರುತಿಸಿ ಮನೆ ನಿರ್ಮಿಸಿಕೊಡುವ ಅಗತ್ಯವಿದೆ ಎಂದು ಶಾಸಕ ಮಾನೆ ಹೇಳಿದರು.

ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳು ಮುಂದೆ ಬರುತ್ತಿಲ್ಲ. ಯೋಜನೆಯಡಿ ಕೇವಲ ರಾಜ್ಯ ಸರ್ಕಾರದ ಪಾಲಿನ ಸಹಾಯಧನ ಮಾತ್ರ ಬಿಡುಗಡೆಯಾಗುತ್ತಿದ್ದು, ಕೇಂದ್ರ ಸರ್ಕಾರದ ಸಹಾಯಧನ ಇದುವರೆಗೂ ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗುತ್ತಿಲ್ಲ. ಈ ಕುರಿತು ಸಂಸದರು ಧ್ವನಿ ಎತ್ತಿ ವಸತಿ ಯೋಜನೆಯ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಸಭೆಯಲ್ಲಿ ನಗರ ಆಶ್ರಯ ಸಮಿತಿ ಸದಸ್ಯ ಮಾಲತೇಶ ಕಾಳೇರ ಒತ್ತಾಯಿಸಿದರು.

ತಹಸೀಲ್ದಾರ್ ರೇಣುಕಾ ಎಸ್., ಮುಖ್ಯಾಧಿಕಾರಿ ಜಗದೀಶ ವೈ.ಕೆ., ನಗರ ಆಶ್ರಯ ಸಮಿತಿ ಸದಸ್ಯರಾದ ವಿನಾಯಕ ಬಂಕನಾಳ, ನಿಯಾಜ್‌ಅಹ್ಮದ್ ಸರ್ವಿಕೇರಿ, ಮೇಘಾ ಸುಲಾಖೆ ಭಾಗವಹಿಸಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ