ಸತತ ಅಧ್ಯಯನ ಪ್ರಗತಿಗೆ ದಾರಿದೀಪ ಉಪನ್ಯಾಸಕ ಶೇಖಬಾಬು ಶಿವಪುರ

KannadaprabhaNewsNetwork | Published : Feb 7, 2024 1:48 AM

ಸಾರಾಂಶ

ವಿದ್ಯಾರ್ಥಿಗಳು ಓದಿನ ಜತೆಗೆ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಸ್ವಾವಲಂಬಿ ಜೀವನ ಸಾಗಿಸಲು ಸಹಕಾರಿ ಆಗುತ್ತದೆ

ಕುಕನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಬೇಕಾದರೆ ಪ್ರತಿಯೊಬ್ಬರೂ ಸತತ ಅಧ್ಯಯನದ ಮೂಲಕ ತಮ್ಮಲ್ಲಿ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕೆಂದು ಬೇವೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶೇಖಬಾಬು ಶಿವಪುರ ಹೇಳಿದರು.

ಪಟ್ಟಣದ ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಏನಾದರೂ ಆಗು ಮಾನವರಾಗಿ, ಪ್ರತಿಯೊಬ್ಬರೂ ತಮ್ಮಲ್ಲಿ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಹೆತ್ತ ತಂದೆ-ತಾಯಿಗಳು, ವಿದ್ಯೆ ನೀಡಿದ ಗುರುಗಳನ್ನು ಸಹಾಯ ಮಾಡಿದ ಪ್ರತಿಯೊಬ್ಬರನ್ನು ಜ್ಞಾಪಿಸಿಕೊಂಡು ಮುಂದೆ ಸಾಗಿದರೆ ತಮ್ಮ ಭವಿಷ್ಯ ಉಜ್ವಲಗೊಳ್ಳವುದಲ್ಲದೇ, ಭವಿಷ್ಯದಲ್ಲಿ ಈ ನಾಡಿನ ಪ್ರಜೆಯಾಗಿ ಹೊರಹೊಮ್ಮಬೇಕು ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಶರಣಪ್ಪ ಹೊಸಮನಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನ್ಮ ತಾಳಿದ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆ ೧೦೦ ವಸಂತಗಳನ್ನು ಕಂಡಿದೆ. ಇಡೀ ನೂರು ವರ್ಷದುದ್ದಕ್ಕೂ ಈ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಸುಜ್ಞಾನ ನೀಡುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳೇ ಸಂಸ್ಥೆಯ ಆಸ್ತಿ ಎಂದರು.

ಡಾ. ಜಿ.ಎಸ್. ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಗುರುರಾಜ್ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಸ್ವಾವಲಂಬಿ ಜೀವನ ಸಾಗಿಸಲು ಸಹಕಾರಿ ಆಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್. ಪಾಂಡುರಂಗ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ಜಹಗೀರದಾರ, ಡಾ. ಜಿ.ಎಸ್. ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕ ಶೇಖ್‌ಮೆಹಬೂಬ, ಇಟಗಿ ಕಾಲೇಜಿನ ಉಪನ್ಯಾಸಕ ಗಂಗಾಧರ ಅವಟೇರ, ಹಿರಿಯ ಉಪನ್ಯಾಸಕ ನಜೀರ್‌ಅಹ್ಮದ್ ತಳಕಲ್, ಐ.ಟಿ. ಬಡಿಗೇರ, ಸಂಸ್ಥೆಯ ಶ್ರೀನಿವಾಸ ದೇಸಾಯಿ, ಸುರೇಶ ಹಳ್ಳಿಗುಡಿ, ರಾಮಣ್ಣ ಎಸ್. ಹನುಮಂತರಾವ್, ಸುಭಾಷ ಭಜಂತ್ರಿ, ಕೆ.ಹರಿಪ್ರಿಯಾ, ಬಸಮ್ಮ ಹಾಳಕೇರಿ, ವೀರಮ್ಮ ಇಟಗಿ ಮತ್ತಿತರರು ಇದ್ದರು.

ಉಪನ್ಯಾಸಕ ಆರ್.ಕೆ. ಪಾಟೀಲ ಸ್ವಾಗತಿಸಿದರು. ಬಸವರಾಜ ಬಂಗಿ ನಿರೂಪಿಸಿದರು. ತದ ನಂತರ ವಿದ್ಯಾರ್ಥಿಗಳಿಂದ ಮನರಂಜನ ಕಾರ್ಯಕ್ರಮ ಜರುಗಿದವು.

Share this article