ಬ್ಯಾಡಗಿ: ವಸತಿ ಸಚಿವ ಜಮೀರ ಅಹಮದ್ ಅವರು ಬಿಜೆಪಿ ಅವಧಿಯಲ್ಲಿ ಒಂದೇ ಒಂದು ನಿವೇಶನ ಹಾಗೂ ಮನೆ ನೀಡಿಲ್ಲ ಎಂದು ಸುಳ್ಳು ಭಾಷಣ ಮಾಡುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ದಾಖಲೆಗಳನ್ನು ಪರಿಶೀಲಿಸಿ ಹೇಳಬಹುದಿತ್ತು. ಆದರೆ ಚಪ್ಪಾಳೆ ಗಿಟ್ಟಿಸುವ ಭರದಲ್ಲಿ ಇಂತಹ ಸುಳ್ಳುಗಳನ್ನು ರಾಜ್ಯದೆಲ್ಲೆಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ. 3ರಂದು ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಸಚಿವ ಜಮೀರ ಅಹಮದ್ ಯಾವುದೇ ಸೂಕ್ತ ಮಾಹಿತಿ ಪಡೆದುಕೊಳ್ಳದೇ ಪಟ್ಟಣದಲ್ಲಿ ನಿವೇಶನ ಹಂಚಿಕೆ ಸಮಯದಲ್ಲಿ ಸುಳ್ಳು ಹೇಳಿದ್ದು ಖಂಡನೀಯ ಎಂದರು.2009ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬ್ಯಾಡಗಿಯಲ್ಲಿ ನಿವೇಶನಗಳನ್ನು ಹಂಚಿದ್ದು ಸುಳ್ಳಾಯಿತೇ? ಅಂದಿನಿಂದ ಇಂದಿನವರೆಗೆ 2013ರಿಂದ 2018ರ ವರೆಗೆ ಅವರದ್ದೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಮನೆಗಳನ್ನು ಯಾಕೆ ಹಂಚಲಿಲ್ಲ ಎಂದು ಪ್ರಶ್ನಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿ ಮೂಲಕ (ಸ್ಲಂ ಬೋರ್ಡ್) ಮೂಲಕ ಬ್ಯಾಡಗಿಯಲ್ಲಿ ಸುಮಾರು ತಲಾ ₹7 ಲಕ್ಷಗಳಂತೆ 500 ಮನೆಗಳನ್ನು, ರಾಜೀವ ಗಾಂಧಿ ವಸತಿ ನಿಗಮ ಯೋಜನೆಯಡಿಯಲ್ಲಿ 74 ಮನೆ, ಅತೀವೃಷ್ಟಿಯಿಂದ ಹಾನಿಗೊಳಗಾದ 140 ಮನೆಗಳಿಗೆ ₹5 ಲಕ್ಷ ಪರಿಹಾರ, ಇದರಲ್ಲಿಯೇ ಸಿ ವರ್ಗದ ಒಟ್ಟು 214 ಮನೆಗಳಿಗೆ ₹50 ಸಾವಿರ ಪರಿಹಾರ ಕೊಟ್ಟಿದ್ದೇವೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹45 ಕೋಟಿಗೂ ಅಧಿಕ ಮೊತ್ತದ ಮನೆಗಳನ್ನು ನಿಜವಾದ ಬಡವರಿಗೆ ನೀಡಿದ್ದೇವೆ. ಈ ಕುರಿತು ದಾಖಲೆ ಸಮೇತ ಚರ್ಚಿಸಲು ಸಿದ್ಧನಾಗಿದ್ದೇನೆ ಎಂದರು.ಮುಖ್ಯಾಧಿಕಾರಿ ವರ್ಗಾಯಿಸಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಮಾಜಿ ಶಾಸಕರು ಆಯ್ಕೆ ಪಟ್ಟಿ ಕೇಳಿದರೆ ಅದನ್ನು ಒದಗಿಸದೇ ಪುರಸಭೆ ಮುಖ್ಯಾಧಿಕಾರಿ ಉದ್ಧಟತನ ತೋರಿದ್ದಾರೆ. ಅವರು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಆಯ್ಕೆಯಲ್ಲಿ ಸದಸ್ಯರ ಕಡೆಗಣನೆ: ಪುರಸಭೆ ಸದಸ್ಯ ಹನುಮಂತ ಮ್ಯಾಗೇರಿ ಮಾತನಾಡಿ, ಆಶ್ರಯ ಸಮಿತಿಯ ಪದಾಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತ, ಅರ್ಹ ಬಡವರಿಗೆ ನಿವೇಶನ ನೀಡದೆ ಅನ್ಯಾಯವೆಸಗಿದ್ದಾರೆ. ಪುರಸಭೆಯ ಎಲ್ಲ ಸದಸ್ಯರನ್ನು ಆಯ್ಕೆಯಿಂದ ಹೊರಗಿಟ್ಟು ಫಲಾನುಭವಿಗಳ ಯಾದಿಯನ್ನು ರಹಸ್ಯವಾಗಿಟ್ಟು ಹಂಚಿಕೆ ಮಾಡಿರುವ ಹಿಂದಿನ ಉದ್ದೇಶ ಇದೀಗ ಜನರಿಗೆ ಅರ್ಥವಾಗುತ್ತಿದೆ ಎಂದು ಹೇಳಿದರು.ಸಮಿತಿ ರದ್ದು ಮಾಡಿ: ವಿಜಯ ಮಾಳಗಿ ಮಾತನಾಡಿ, ಕೂಡಲೇ ಸಮಿತಿ ರದ್ದು ಮಾಡಿ ಶಾಸಕರ ನೇತೃತ್ವದಲ್ಲಿ ಹೊಸದಾಗಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ಪುರಸಭೆ ಸದಸ್ಯ ಶಿವರಾಜ ಅಂಗಡಿ, ವಿನಯ ಹಿರೇಮಠ ಪ್ರದೀಪ ಜಾಧವ, ವಿಷ್ಣುಕಾಂತ ಬೆನ್ನೂರ ಭಾಗವಹಿಸಿದ್ದರು.