ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಿದ್ದು, ಅದಕ್ಕಾಗಿಯೇ ದೇಶದ ಪ್ರಧಾನಿಗೆ ರಾಜಕೀಯ ಪುಡಾರಿ ಎನ್ನುವ ಶಬ್ದ ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಕಿಡಿಕಾರಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಂತಹ ಹಿರಿಯರು ಈ ರೀತಿ ಮಾತನಾಡುವುದು ಹೊಸದಲ್ಲ. ಆದರೆ ಈ ಬಾರಿ ಅವರು ತೀರಾ ಹತಾಶರಾದಂತೆ ಕಾಣುತ್ತದೆ ಎಂದರು.ರಾಜ್ಯದ ಜನತೆಗೆ ಪೊಳ್ಳು ಭರವಸೆ ನೀಡಿ ಸಿದ್ದರಾಮಯ್ಯ ನೇತೃತ್ವದಲ್ಲಿ 136 ಸೀಟಿನ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಕೊಟ್ಟ ಗ್ಯಾರಂಟಿ ಎಷ್ಟರ ಮಟ್ಟಿಗೆ ಜನರಿಗೆ ಮುಟ್ಟಿದೆ ಎನ್ನುವ ಬಗ್ಗೆಯೇ ವಿಮರ್ಶೆಯಾಗಬೇಕಿದೆ. ಗ್ಯಾರಂಟಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಇನ್ನು ಗ್ಯಾರಂಟಿ ಅನುಷ್ಠಾನಕ್ಕೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷರ ನೇಮಕ, ಅವರಿಗೆ ಸಂಭಾವನೆ ಕೊಡುತ್ತಾರಂತೆ, ರಾಜ್ಯದ ಬೊಕ್ಕಸ ಲೂಟಿ ಮಾಡಲು ಏನೆಲ್ಲ ವ್ಯವಸ್ಥೆ ಬೇಕೋ ಅದನ್ನು ಮಾಡುತ್ತಿದೆ ಈ ಸರ್ಕಾರ ಎಂದರು.
ಸಿದ್ದು ಮೊದಲಿನಂತಿಲ್ಲ: ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಪಾರ್ಟ್-1 ಇದ್ದಾಗಿನ ಸಿದ್ದರಾಮಯ್ಯ, ಪಾರ್ಟ್-2ನಲ್ಲಿ ಇಲ್ಲ. ಅವರು ಸಾಕಷ್ಟು ಬದಲಾಗಿದ್ದಾರೆ. ಆಡಳಿತದಲ್ಲಿ ಬಿಗಿ ಇಲ್ಲ, ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವ ಬಗ್ಗೆ ರಾಜ್ಯದ ಜನತೆಯೇ ಮಾತನಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಯಾವೊಬ್ಬ ಸಚಿವರು ಇರುವುದಿಲ್ಲ, ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.ಅರ್ಪಣೆ: ಕರ್ನಾಟಕದಲ್ಲಿನ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೇ ಬೇಸರ ವ್ಯಕ್ತಪಡಿಸಿದ್ದು, ಯೋಜನೆಗಳನ್ನು ಘೋಷಣೆ ಮಾಡುವ ಪೂರ್ವದಲ್ಲಿ ಹಣಕಾಸಿನ ಸ್ಥಿತಿಗತಿ ನೋಡಬೇಕು, ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ರಸ್ತೆ ಮೇಲೆ ಒಂದು ಹಿಡಿ ಮಣ್ಣು ಹಾಕಲು ಆಗುತ್ತಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ಬಜೆಟ್ ನೋಡಿಕೊಂಡು ಗ್ಯಾರಂಟಿ ಘೋಷಣೆ ಮಾಡಿ ಅಂದಿದ್ದಾರೆ. ಇದು ರಾಜ್ಯ ಸರ್ಕಾರದ 2 ವರ್ಷದ ಸಾಧನೆಗೆ ಎಐಸಿಸಿ ಅಧ್ಯಕ್ಷರು ಕೊಟ್ಟಿರುವ ಸರ್ಟಿಫಿಕೇಟ್, ಈ ಸರ್ಟಿಫಿಕೇಟನ್ನು ಮುದ್ರಿಸಿ ಮುಂಬರುವ ಚಳಿಗಾಲ ಅಧಿವೇಶದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ ಆಡಳಿತ ವೈಫಲ್ಯ ತಿರುಚಲು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.
ಮುಸ್ಲಿಮರ ಓಲೈಕೆ: ರಾಜ್ಯದಲ್ಲಿ ಜನರು ನಿಮ್ಮನ್ನು 136 ಸ್ಥಾನಗಳಲ್ಲಿ ಗೆಲ್ಲಿಸಿ ಸ್ಪಷ್ಟ ಬಹುಮತ ಕೊಟ್ಟಿರುವುದು ಕೇವಲ ಮುಸ್ಲಿಮರ ಓಲೈಕೆ ಮಾಡಲು ಅಲ್ಲ, ನೀವು ಕೇವಲ ಮುಸ್ಲಿಂ ಮತಗಳನ್ನು ಮಾತ್ರ ಪಡೆದು ಆಯ್ಕೆಯಾಗಿಲ್ಲ. ಇದನ್ನು ಕಾಂಗ್ರೆಸ್ ನಾಯಕರು ಮನಗಾಣಬೇಕು. ಬೇಕಾದ ಆಸ್ತಿ, ಅಮಾಯಕ ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಮಾಡುತ್ತಿರುವುದು ದೊಡ್ಡ ಅಪರಾಧವಾಗಿದೆ. ಹಿಂದೂಗಳ ಆಸ್ತಿ ರಾತ್ರೋರಾತ್ರಿ ವಕ್ಫ್ ಆಸ್ತಿ ಮಾಡಿ, ಹಿಂದುಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ವಿನಂತಿಸುತ್ತೇನೆ, ಈಗ ನೀವು ಅಧಿಕಾರದ ಆಸೆಗಾಗಿ ಇದನ್ನು ಒಪ್ಪಿಕೊಳ್ಳಬಹುದು, ಆದರೆ ಮುಂದೆ ನಿಮ್ಮ ಮಕ್ಕಳು, ಮೊಮ್ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಾರೆ ಎಂದು ಸಿ.ಸಿ. ಪಾಟೀಲ ಹೇಳಿದರು.ಭಯದಲ್ಲಿ ಅಧಿಕಾರಿಗಳು: ಜಮೀರ್ ಅಹಮದ್ ಖಾನ್ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ರಾತ್ರೋರಾತ್ರಿ ವಕ್ಫ್ ಆಸ್ತಿ ಎಂದು ಬದಲಾಯಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳು ತೀವ್ರ ಒತ್ತಡದಲ್ಲಿದ್ದಾರೆ. ಸಿಂಧಗಿಮಠ 13ನೇ ಶತಮಾನದ ಮಠವಾಗಿದೆ. ಆದರೆ, ರಾಜ್ಯದಲ್ಲಿ ವಕ್ಫ್ ಬೋರ್ಡ್ ಬಂದಿದ್ದು 1995, ಈಗ ಮಠದ ಆಸ್ತಿ ವಕ್ಫ್ ಆಸ್ತಿಯಾಗಿದೆ ಎಂದರೆ ಇದು ಅಕ್ಷರಶಃ ತುಘಲಕ್ ಸರ್ಕಾರವಲ್ಲದೇ ಮತ್ತೇನು? ಎಂದು ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮುಸ್ಲಿಂ ಸಮುದಾಯದ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸಿದ ಸಾಚಾರ ವರದಿ ಅನುಷ್ಠಾನ, ವಕ್ಫ್ ಕುರಿತು ಕೇಂದ್ರ ಸರ್ಕಾರ ಚಳಿಗಾಲ ಅಧಿವೇಶನದಲ್ಲಿ ತರುತ್ತಿರುವ ಕಾಯ್ದೆಯನ್ನು ಕಾಂಗ್ರೆಸ್ ನಾಯಕರು ಬೆಂಬಲಿಸಬೇಕು, ಜಮೀರ್ ಅಹಮದ್ ಖಾನ್ ಮೊದಲು ಇದರ ಬಗ್ಗೆ ಮಾತನಾಡಲಿ ಎಂದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಎಂ.ಎಸ್. ಕರಿಗೌಡ್ರ, ಎಸ್.ವಿ. ಸಂಕನೂರ, ರಾಜು ಕುರುಡಗಿ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ, ಅನಿಲ ಅಬ್ಬಿಗೇರಿ ಹಾಜರಿದ್ದರು.