ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷೆ ಬೇಡದೇ ಬದುಕು ದೂಡುವುದು ಹೇಗೆ?

KannadaprabhaNewsNetwork |  
Published : Feb 06, 2025, 11:45 PM IST
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಸ್ಥೆಯ ಪದಾಧಿಕಾರಿಗಳು ಲಿಂಗತ್ವ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದರು.  | Kannada Prabha

ಸಾರಾಂಶ

ಲಿಂಗತ್ವ ಅಲ್ಪಸಂಖ್ಯಾತರು ಕಂಪ್ಲಿ ಸೇರಿದಂತೆ ಕೆಲವೆಡೆ ಭಿಕ್ಷಾಟನೆ ವೇಳೆ ಪೊಲೀಸ್ ತಡೆಯುತ್ತಿದ್ದಾರೆ.

ಬಳ್ಳಾರಿ: ಲಿಂಗತ್ವ ಅಲ್ಪಸಂಖ್ಯಾತರು ಕಂಪ್ಲಿ ಸೇರಿದಂತೆ ಕೆಲವೆಡೆ ಭಿಕ್ಷಾಟನೆ ವೇಳೆ ಪೊಲೀಸ್ ತಡೆಯುತ್ತಿದ್ದಾರೆ. ಹೀಗಾದರೆ ನಾವು ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸಂಘಟನೆಯ ರಾಜ್ಯ ಸಹ ಅಧ್ಯಕ್ಷೆ ವೈಶಾಲಿ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾರೂ ಉದ್ಯೋಗ ನೀಡುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಭಿಕ್ಷಾಟನೆಯೇ ಜೀವನೋಪಾಯವಾಗಿದೆ. ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೆ. ಅಂತೆಯೇ ಕಂಪ್ಲಿಗೂ ಭೇಟಿ ನೀಡಿದ ವೇಳೆ ಕಂಪ್ಲಿ ತಾಲೂಕಿನ 25ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಪೊಲೀಸ್ ಭಯದಲ್ಲಿ ಬದುಕುತ್ತಿರುವುದು ತಿಳಿದು ಬಂತು.

ಈ ಹಿನ್ನೆಲೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರನ್ನು ಭೇಟಿ ಮಾಡಿ ನಮ್ಮ ಅಳಲು ತೋಡಿಕೊಂಡಿದ್ದೇವೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುವೆ ಎಂದು ಹೇಳಿದ್ದಾರೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರ ಬದುಕು ತೀವ್ರ ಕಷ್ಟಕರವಾಗಿದೆ. ಯಾರೂ ಮನೆ ಬಾಡಿಗೆ ನೀಡುವುದಿಲ್ಲ. ಕೆಲಸ ಕೊಡುವುದಿಲ್ಲ. ಜೀವನ ನಿರ್ವಹಣೆಗೆ ಭಿಕ್ಷಾಟನೆ ಮಾಡದ ಹೊರತು ನಮಗೆ ಬದುಕಿಲ್ಲ. ಭಿಕ್ಷಾಟನೆಗೆ ಅಡ್ಡಿಪಡಿಸಲಾಗುತ್ತಿದೆ. ಇಲ್ಲಿ ನಿಲ್ಲಬೇಡಿ. ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ಊರುಬಿಟ್ಟು ಹೊರಡಿ ಎಂದು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ನಾವು ಕೂಡ ಸಮಾಜದ ಒಂದು ಭಾಗವಾಗಿದ್ದೇವೆ. ನಾವು ಸಹ ಮನುಷ್ಯರು. ನಮ್ಮನ್ನು ಬದುಕಲು ಬಿಡಿ ಎಂದು ಅಳಲು ತೋಡಿಕೊಂಡರು.

ಕಂಪ್ಲಿಯ ರಾಜಮ್ಮ ಮಾತನಾಡಿ, ನಾನು ಅನೇಕರನ್ನು ಲಿಂಗತ್ವ ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿದ್ದೇನೆ. ಸೀರೆ ಉಡುವಂತೆ ಒತ್ತಾಯಿಸುತ್ತಿದ್ದೇನೆ ಎಂದು ಕೆಲವರು ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾನು ಯಾರಿಗೂ ಲಿಂಗತ್ವ ಅಲ್ಪಸಂಖ್ಯಾತೆ ಆಗುವಂತೆ ಒತ್ತಾಯ ಮಾಡಿಲ್ಲ. ಸೀರೆ ಉಡುವಂತೆಯೂ ಒತ್ತಾಯಿಸಿಲ್ಲ. ಆದಾಗ್ಯೂ ಕಂಪ್ಲಿ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಪಾಲಿಕೆ ಸದಸ್ಯೆ ಪರ್ವಿನ್ ಬಾನು, ಲಿಂಗತ್ವ ಅಲ್ಪಸಂಖ್ಯಾತರಾದ ಶ್ವೇತಾ, ರೇಷ್ಮಾ, ಅಮೃತಾ, ಅಶ್ವಿನಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು