ಎಷ್ಟು ಹೆಣ ಬಿದ್ದಮೇಲೆ ನೀವು ಸರಿಯಾಗಿ ಕೆಲಸ ಮುಗಿಸುತ್ತೀರಿ

KannadaprabhaNewsNetwork |  
Published : May 27, 2026, 02:45 AM IST
ಫೋಟೋ : ೨೫ಕೆಎಂಟಿ_ಎಂಎವೈ_ಕೆಪಿ೧ : ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಭವನದಲ್ಲಿ ತ್ರೆೈಮಾಸಿಕ ಕೆ.ಡಿ.ಪಿ ನಡೆಯಿತು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ, ಇಒ ರಾಜೇಂದ್ರ ಭಟ್ ಇದ್ದರು.   | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ಮಾಂವ ಹಾಗೂ ಮಾನೀರದಲ್ಲಿ ಸೇತುವೆ ನಿರ್ಮಾಣಕ್ಕೆ ದುಡ್ಡು ಬಂದರೂ ಕೆಲಸ ಮಾಡುತ್ತಿಲ್ಲ. ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಹಲವೆಡೆ ಹಂಪ್ ಹಾಕಿದ್ದೀರಿ.

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಐಆರ್ ಬಿ, ರಾ.ಹೆ. ಪ್ರಾಧಿಕಾರದ ಕಾರ್ಯವೈಖರಿಗೆ ಆಕ್ಷೇಪ

ಕನ್ನಡಪ್ರಭ ವಾರ್ತೆ ಕುಮಟಾರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ಮಾಂವ ಹಾಗೂ ಮಾನೀರದಲ್ಲಿ ಸೇತುವೆ ನಿರ್ಮಾಣಕ್ಕೆ ದುಡ್ಡು ಬಂದರೂ ಕೆಲಸ ಮಾಡುತ್ತಿಲ್ಲ. ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಹಲವೆಡೆ ಹಂಪ್ ಹಾಕಿದ್ದೀರಿ. ಪ್ರತಿನಿತ್ಯ ಅಪಘಾತಗಳಾಗುತ್ತಿದೆ. ಹೆದ್ದಾರಿಯಲ್ಲಿ ಇನ್ನೂ ಎಷ್ಟು ಹೆಣ ಬಿದ್ದಮೇಲೆ ನೀವು ಸರಿಯಾಗಿ ಕೆಲಸ ಮುಗಿಸುತ್ತೀರಿ ಎಂದು ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಅವರು ರಾಷ್ಟ್ರೀಯ ಹೆದ್ದಾರಿ ಹಾಗೂ ಐಆರ್‌ಬಿ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿದರು.

ತಾಪಂ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಐಆರ್ ಬಿ ಹಾಗೂ ರಾ.ಹೆ.ಪ್ರಾಧಿಕಾರದ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕುಂದಾಪುರದಿಂದ ಹೆದ್ದಾರಿಯಲ್ಲಿ ಈ ಕಡೆಗೆ ಬಂದರೆ ಸಾಕು, ಉತ್ತರ ಕನ್ನಡ ಜಿಲ್ಲೆ ಬಂತೆಂದು ತಿಳಿಯುವಷ್ಟು ಕಾಮಗಾರಿಯಲ್ಲಿ ವ್ಯತ್ಯಾಸವಿದೆ ಎಂದರು. ಸರ್ವೀಸ್ ರಸ್ತೆ ಮಾಡದೇ ಪ್ರತಿನಿತ್ಯ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಿರ್ಜಾನದಲ್ಲಿ ಹೆದ್ದಾರಿ ಮೇಲೆ ನಿಲ್ಲುತ್ತಾರೆ. ಬಸ್ ನಿಲ್ದಾಣವನ್ನೂ ಕಟ್ಟಿಲ್ಲ ಎಂದು ಮಂಜುನಾಥ ಹರಿಕಂತ್ರ ಇನ್ನಿತರರು ಹೇಳಿದರು. ಖೈರೆಯಲ್ಲಿ ದೊಡ್ಡ ಬಂಡೆಗಳು, ದರೆ ಬೀಳುವ ಅಪಾಯವಿದೆ ಎಂದು ಗಣೇಶ ಅಂಬಿಗ ಹೇಳಿದರು. ಮೂರೂರು ಕ್ರಾಸ್‌ನಲ್ಲಿ ಏಕೆ ಸಿಡಿ ಮಾಡಿಲ್ಲ ಎಂದು ಧೀರು ಶಾನಭಾಗ ಪ್ರಶ್ನಿಸಿದರು. ರಾ.ಹೆ.ಪ್ರಾಧಿಕಾರದ ಕನ್ಸಲ್ಟಂಟ್ ದಯಾನಂದ ಹಾಗೂ ಐಆರ್‌ಬಿ ಅಧಿಕಾರಿ ಮೆಹತಾಬ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ದಿನಕರ ಶೆಟ್ಟಿ, ನಿಮ್ಮ ಕೆಲಸ ವರ್ಣಿಸಲು ಶಬ್ದಗಳಿಲ್ಲ. ಮಾನಮರ್ಯಾದೆ ಎಲ್ಲ ಬಿಟ್ಟಿದ್ದೀರಿ. ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಶೇ. ೨೦ರಷ್ಟೂ ಕೆಲಸ ಮಾಡಿಲ್ಲ. ಗಟಾರಗಳು ಅರೆಬರೆಯಾಗಿದೆ. ಮಳೆಗಾಲ ಎದುರಿಗಿದೆ. ನಿಮ್ಮ ಬಳಿ ಮಾತನಾಡಿ ಪ್ರಯೋಜನವೇ ಇಲ್ಲದಂತಾಗಿದೆ. ಇದೇ ರೀತಿಯಾದರೆ ಜನರೇ ನಿಮಗೆ ಹೊಡೆಯುತ್ತಾರೆ. ನಿಮ್ಮ ಈವರೆಗಿನ ಕಾಮಗಾರಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಮರ್ಪಕವಾಗಿಲ್ಲ ಎಂದರು. ತಾಲೂಕಾಸ್ಪತ್ರೆಯಲ್ಲಿ ಗೈನಕಾಲಜಿಸ್ಟ್‌ ಡಾ.ಶಿವಾನಂದ ಕುಡ್ತಲಕರ ಕರ್ತವ್ಯ ನಿರ್ವಹಣೆ ಸಮರ್ಪಕವಾಗಿಲ್ಲ. ನಿಗದಿತ ಕರ್ತವ್ಯ ಸಮಯದಲ್ಲೂ ಆಸ್ಪತ್ರೆಯಲ್ಲಿ ಇರುವುದಿಲ್ಲ. ಹೆರಿಗೆಗಳೂ ತೀರಾ ಕಡಿಮೆ ಆಗಿದೆ. ಅವರಿಗೆ ಇಲ್ಲಿ ಕೆಲಸ ಮಾಡಲು ಮನಸಿಲ್ಲದಂತಿದೆ. ಆದ್ದರಿಂದ ಡಾ. ಶಿವಾನಂದ ಕುಡ್ತಲಕರ ವಿರುದ್ಧ ಠರಾವು ಮಾಡುವಂತೆ ಶಾಸಕರು ಸೂಚಿಸಿದರು. ಟ್ರಾಮಾ ಸೆಂಟರ್ ಉದ್ಘಾಟನೆಗೆ ಆರೋಗ್ಯ ಸಚಿವರಿಗೆ ಪತ್ರ ನೀಡಿದ್ದೇನೆ. ಅವರು ಬಾರದಿದ್ದರೆ ಉಸ್ತುವಾರಿ ಸಚಿವರಿಂದ ಉದ್ಘಾಟನೆ ನಡೆಸಿ ಶೀಘ್ರ ಜನರಿಗೆ ಸೇವೆ ಸಿಗುವಂತೆ ಮಾಡಬೇಕಿದೆ ಎಂದರು. ಪಟ್ಟಣದಲ್ಲಿ ಟ್ರಾಫಿಕ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಗಣೆಯಾಗದ ಬಗ್ಗೆ ಚರ್ಚೆ ನಡೆಯಿತು. ಸ್ಥಳೀಯ ರೋಟರಿ ಕ್ಲಬ್‌ನವರು ಸಭೆಯಲ್ಲಿ ಶಾಸಕರಿಗೆ ಮನವಿ ಸಲ್ಲಿಸಿ ಗಿಬ್‌ಸರ್ಕಲ್‌ನಲ್ಲಿ ಬಸ್ ನಿಲ್ದಾಣ ನಿರ್ಮಿಸುವುದಕ್ಕೆ ಜಾಗ ಗುರುತಿಸಿಕೊಡಬೇಕು ಹಾಗೂ ಮಣಕಿ ಮೈದಾನ ಹಿಂಭಾಗದ ಸ್ಮಶಾನದ ಅಭಿವೃದ್ಧಿ ಮಾಡಿಕೊಡುತ್ತೇವೆ. ಸಂಬಂಧಪಟ್ಟ ಇಲಾಖೆಗಳ ಸಹಕಾರ ಬೇಕು ಎಂದರು.ಜೆಜೆಎಂ ಯೋಜನೆಯ ಗೇಟ್ ವಾಲ್ವಗಳು ಈಗಲೇ ಎಲ್ಲೆಡೆ ಹಾಳಾಗುತ್ತಿದೆ. ಯೋಜನೆ ಗ್ರಾಪಂಗೆ ಹಸ್ತಾಂತರವಾದ ಮೇಲೆ ಅವರಿಗೆ ನಿರ್ವಹಣೆ ದೊಡ್ಡ ಹೊರೆಯಾಗಲಿದೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಕೂಡಲೇ ಸರಿಪಡಿಸುವಂತೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ, ಮುಂದಿನ ಒಂದೂವರೆ ವರ್ಷದಲ್ಲಿ ವಿವಿಧ ಯೋಜನೆಗಳಡಿ ಎಲ್ಲೆಡೆ ಸಮರ್ಪಕ ನೀರು ಸರಬರಾಜು ಸಾಧ್ಯವಾಗಲಿದೆ ಎಂದರು. ಎ.ಆರ್.ಟಿ.ಓ ರವೀಂದ್ರ ಮಾಹಿತಿ ನೀಡಿ, ವಾರ್ಷಿಕ ₹೬೦ ಕೋಟಿ ಆದಾಯ ಸಂಗ್ರಹಣೆ ಗುರಿ ಇದ್ದು ಶೇ. ೮೨ ಆಗಿದೆ ಎಂದರು. ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ ಬಳಿ ಬಾರ್ ಮತ್ತು ವೈನ್‌ಶಾಪ್‌ಗಳಲ್ಲಿ ಎಂ.ಆರ್.ಪಿ ಮೇಲೆ ಸರ್ವೀಸ್ ಚಾರ್ಜ ಎಂದು ಹೆಚ್ಚಿನ ಬೆಲೆ ಆಕರಿಸುತ್ತಿರುವ ಕುರಿತು ಹರೀಶ ನಾಯ್ಕ ಗಮನಸೆಳೆದರು.ಮೂರೂರಿನಲ್ಲಿ ಖಾಸಗಿ ಜಮೀನಿಗೆ ಕಂಪೌಂಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವುದು, ಸರ್ವೆ ನಂ. ೧೯೧ರಲ್ಲಿ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಛಾವಣಿವರೆಗೆ ನಿರ್ಮಿಸಿದ ಆಶ್ರಯ ಮನೆಯೊಂದನ್ನು ಕೆಡವಿದ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಡಿ.ಎಫ್.ಒ ಸಮಕ್ಷಮ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಬಗೆಹರಿಸೋಣ ಎಂದು ಶಾಸಕ ಶೆಟ್ಟಿ ಭರವಸೆ ಹೇಳಿದರುನಾಗೂರಿನ ಹುಳಸೆಯಲ್ಲಿ ಹೊಸ ಟಿಸಿ ಹಾಕಿಸಿ ಕೊಡುವ ಬಗ್ಗೆ ಸ್ಥಳೀಯರು ಬೇಡಿಕೆ ಇಟ್ಟರು. ಮುಂದಿನ ೮-೧೦ ದಿನದಲ್ಲಿ ಟಿಸಿ ಹಾಕಿಸಿಕೊಡುವಂತೆ ಹೆಸ್ಕಾಂ ಎಇಇ ರಾಜೇಶ ಮಡಿವಾಳರಿಗೆ ಶಾಸಕರು ಸೂಚಿಸಿದರು. ನೆಹರೂ ನಗರದಲ್ಲಿ ಸ್ಮಶಾನ ಇಲ್ಲದ ಬಗ್ಗೆ ಪುರಸಭೆ ಮಾಜಿ ಸದಸ್ಯ ತುಳಸುಗೌಡ ತಿಳಿಸಿದರು. ಸಭೆಯಲ್ಲಿ ತಾಪಂ ಹಾಗೂ ಜಿಪಂ ಅನಿರ್ಬಂಧಿತ ಅನುದಾನದಲ್ಲಿ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ೧೩ ಫಲಾನುಭವಿಗಳಿಗೆ ತಲಾ ₹೫೪೦೦ ಮೌಲ್ಯದ ಕಿಟ್ ವಿತರಿಸಲಾಯಿತು. ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ್, ಇಒ ರಾಜೇಂದ್ರ ಭಟ್, ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಆಗುವುದಿಲ್ಲ
ಪ್ರಯತ್ನವಿಲ್ಲದೇ ಯಾವುದೇ ಸಾಧನೆ ಅಸಾಧ್ಯ: ಡಾ. ಕಲ್ಲನಗೌಡರ