ಈ ದೇಶದ ಪ್ರತಿಯೊಬ್ಬರೂ ಎಷ್ಟೇ ಶಿಕ್ಷಣವಂತರಾಗಿದ್ದಾಗ್ಯೂ ನಮ್ಮ ಸಂವಿಧಾನ ಓದಿದಾಗ ನಾವು ರೂಪುಗೊಳ್ಳುವುದೇ ಬೇರೆ. ಹೀಗಾಗಿ ಸಂವಿಧಾನದ ಓದು ಹಾಗೂ ಅರಿವು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಈ ದೇಶದ ಪ್ರತಿಯೊಬ್ಬರೂ ಎಷ್ಟೇ ಶಿಕ್ಷಣವಂತರಾಗಿದ್ದಾಗ್ಯೂ ನಮ್ಮ ಸಂವಿಧಾನ ಓದಿದಾಗ ನಾವು ರೂಪುಗೊಳ್ಳುವುದೇ ಬೇರೆ. ಹೀಗಾಗಿ ಸಂವಿಧಾನದ ಓದು ಹಾಗೂ ಅರಿವು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಹೇಳಿದರು.
ತಾಲೂಕಿನ ಕಟಗೇರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಅರಿವು ಜಾಥಾ ಕಾರ್ಯಕ್ರಮದ ನಂತರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿದ್ದು, ಅರ್ಥಪೂರ್ಣ ಆಚರಣೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಾಥಮಿಕ ಅರಿವು ಮೂಡಿಸಬೇಕೆನ್ನುವ ನಿಟ್ಟಿನಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ನಾನು ನಿಮ್ಮ ಮುಂದೆ ಬಂದು ಒಬ್ಬ ಡಿಸಿಯಾಗಿ ಮಾತನಾಡಲು, ಈ ಗ್ರಾಮದ ಒಬ್ಬ ಮಹಿಳೆ ಪಂಚಾಯತಿ ಅಧ್ಯಕ್ಷಳಾಗಿದ್ದಾಳೆಂದರೆ ಅದಕ್ಕೆ ಕಾರಣ ಸಂವಿಧಾನ. ನಾವು ಎಲ್ಲದರ ಬಗ್ಗೆ ತಿಳಿದುಕೊಳ್ಳುತ್ತೇವೆ. ಆದರೆ, ಇಡೀ ದೇಶವನ್ನು ಮುನ್ನಡೆಸುತ್ತಿರುವ ಗ್ರಂಥ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಈ ಮೊದಲು ಬ್ರಿಟಿಷರ ಅವಧಿಯಲ್ಲಿ ಶ್ರೀಮಂತರಿಗೆ ಮಾತ್ರ ಮತದಾನ ಹಕ್ಕಿತ್ತು. ಆದರೆ ನಮ್ಮ ಸಂವಿಧಾನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮತದಾನದ ಹಕ್ಕು, ಸಮಾನತೆ ನೀಡಿದೆ. ಭಾರತದಲ್ಲಿ ವಿವಿಧ ಭಾಷೆ, ಧರ್ಮ, ಸಂಸ್ಕೃತಿ ವೈವಿಧ್ಯತೆ, ಸಾಕಷ್ಟು ಭಿನ್ನತೆ ಇದ್ದರೂ ಎಲ್ಲರನ್ನು ಮುನ್ನಡೆಸಿಕೊಂಡು ಹೋಗಲು ಒಂದೇ ಸಂವಿಧಾನ ಇರುವುದು ವೈಶಿಷ್ಟ್ಯಪೂರ್ಣ. ಸಂವಿಧಾನದಲ್ಲಿ ನಮ್ಮ ಹಕ್ಕುಗಳ ಬಗ್ಗೆ, ಕರ್ತವ್ಯಗಳ ಬಗ್ಗೆ ಮಾಹಿತಿಯಿದೆ. ಸರ್ಕಾರದಿಂದ ನಮ್ಮ ನಿರೀಕ್ಷೆ, ಮೂಲಭೂತ ಹಕ್ಕು, ಕರ್ತವ್ಯ, ಜವಾಬ್ದಾರಿ ಏನು ಎನ್ನುವುದನ್ನು ವಿವರಿಸುತ್ತದೆ. ನಾವು ಎಷ್ಟೇ ಓದಿದರೂ ಸಂವಿಧಾನ ಓದುವುದು ಅಗತ್ಯವಾಗಿದೆ. ಸಂವಿಧಾನ ಓದುವುದರಿಂದ ನಮಗೆ ಶಕ್ತಿ ಬರುತ್ತದೆ. ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಚಲಾಯಿಸಲೂ ಸಂವಿಧಾನದ ಓದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗುಳೇದಗುಡ್ಡ ತಹಸೀಲ್ದಾರ್ ಮಂಗಳಾ ಎಂ. ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಪಿಡಿಒ ಮೇತ್ರಿ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ದ್ಯಾವಣ್ಣವರ್, ಗ್ರಾಪಂ ಸದಸ್ಯರು, ಮಹಿಳಾ ಮಂಡಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಸೇರಿದಂತೆ ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು.