ಗರ್ಭಕಂಠ ಕ್ಯಾನ್ಸರ್‌ ತಡೆಗೆ ಲಸಿಕಾ ಅಭಿಯಾನ ಆರಂಭ

KannadaprabhaNewsNetwork |  
Published : Mar 26, 2026, 04:00 AM IST
ಡಾ.ಎಚ್‌.ಆರ್‌. ತಿಮ್ಮಯ್ಯ | Kannada Prabha

ಸಾರಾಂಶ

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ರಾಷ್ಟ್ರ ಮಟ್ಟದಲ್ಲಿ ಫೆ.28ರಂದು ಎಚ್‌ಪಿವಿ (ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌) ಲಸಿಕಾ ಅಭಿಯಾನ ಆರಂಭಿಸಿದ್ದು, ದ.ಕ. ಜಿಲ್ಲೆಯಲ್ಲಿ ಇದುವರೆಗೆ 527 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.

ಮಂಗಳೂರು: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ರಾಷ್ಟ್ರ ಮಟ್ಟದಲ್ಲಿ ಫೆ.28ರಂದು ಎಚ್‌ಪಿವಿ (ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌) ಲಸಿಕಾ ಅಭಿಯಾನ ಆರಂಭಿಸಿದ್ದು, ದ.ಕ. ಜಿಲ್ಲೆಯಲ್ಲಿ ಇದುವರೆಗೆ 527 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷ ವಯಸ್ಸಿನ (14 ವರ್ಷ ಪೂರ್ಣಗೊಂಡು 15 ವರ್ಷ ಪೂರ್ಣವಾಗದ) ಹೆಣ್ಣುಮಕ್ಕಳಿಗೆ ಈ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದು 3 ತಿಂಗಳ ಅಭಿಯಾನವಾಗಿದ್ದು, ಮೇ ತಿಂಗಳವರೆಗೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಮಂದಿಗೆ ಅಂದರೆ 22,473 ಹೆಣ್ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿ: ರಾಜ್ಯಕ್ಕೆ 2.54 ಲಕ್ಷ ಡೋಸ್‌ ಎಚ್‌ಪಿವಿ ಲಸಿಕೆ ಉಚಿತವಾಗಿ ಸರಬರಾಜಾಗಿದ್ದು, ಎಲ್ಲ ಜಿಲ್ಲೆಗಳಿಗೆ ರವಾನಿಸಲಾಗಿದೆ. ಈ ಅಭಿಯಾನದಲ್ಲಿ ಶಾಲೆ, ಮನೆಗಳಿಗೆ ತೆರಳಿ ಲಸಿಕೆ ನೀಡಲಾಗುವುದಿಲ್ಲ. ಬದಲಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ/ ತಾಲೂಕು ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಒಂದು ಡೋಸ್ ಗಾರ್ಡಸಿಲ್- 4 ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಲಸಿಕೆ ಸ್ವಯಂಪ್ರೇರಿತವಾಗಿದ್ದು, ಪೋಷಕರು/ ಪಾಲಕರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ. ಜಿಲ್ಲೆಯ ಎಲ್ಲ ಅರ್ಹ ಹೆಣ್ಣುಮಕ್ಕಳಿಗೆ ಲಸಿಕೆ ದೊರಕುವಂತೆ ಸಿದ್ಧತೆ ನಡೆಸಲಾಗಿದೆ ಎಂದು ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದರು.2022ರಲ್ಲಿ ದೇಶದಲ್ಲಿ 79,103 ಗರ್ಭ ಕಂಠದ ಕ್ಯಾನ್ಸರ್‌ನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 34,805 ಸಾವು ಸಂಭವಿಸಿದೆ. ಆದರೆ ಲಸಿಕೆ ಮಾತ್ರದಿಂದ ತಡೆಗಟ್ಟಬಹುದಾದ ಏಕೈಕ ಕ್ಯಾನ್ಸರ್‌ ಕೂಡ ಇದಾಗಿದೆ. ಆದ್ದರಿಂದ ಎಲ್ಲ ಅರ್ಹ ಹೆಣ್ಮಕ್ಕಳು ಈ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ..

ಎಚ್‌ಪಿವಿ ಲಸಿಕೆಯ ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಋಣಾತ್ಮಕ ಪ್ರಚಾರ ನಡೆಸಲಾಗುತ್ತಿದೆ. ಆದರೆ ಅದು ಸುಳ್ಳು. ಇದನ್ನು ನಂಬಿ ಲಸಿಕೆ ಪಡೆಯುವುದರಿಂದ ತಪ್ಪಿಸಿಕೊಳ್ಳಬಾರದು ಎಂದು ಸಲಹೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ, ಈ ಲಸಿಕೆಗೆ ಖಾಸಗಿ ಮಾರುಕಟ್ಟೆಯಲ್ಲಿ 8 ಸಾವಿರ ರು.ನಷ್ಟು ದರ ಇದೆ. ಸರ್ಕಾರ ಉಚಿತವಾಗಿ ನೀಡುತ್ತಿರುವುದರಿಂದ ಪ್ರತಿ ಅರ್ಹ ಹೆಣ್ಮಕ್ಕಳಿಗೂ ಲಸಿಕೆ ಹಾಕಿಸಿ ಅವರನ್ನು ಈ ಕ್ಯಾನ್ಸರ್‌ನಿಂದ ಮುಕ್ತಗೊಳಿಸಿದರೆ ಅದೇ ಅವರಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದು ಹೇಳಿದರು.

ಬಿಸಿಲಾಘಾತ ತಪ್ಪಿಸಲು ಸಲಹೆ: ದ.ಕ. ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ಜನರು ಸೂಕ್ತ ಮುಂಜಾಗ್ರತೆ ವಹಿಸಬೇಕು. ಸಡಿಲವಾದ ಉಡುಪುಗಳನ್ನು ಧರಿಸುವುದು, ಮಧ್ಯಾಹ್ನ 12ರಿಂದ 3 ಗಂಟೆಯೊಳಗೆ ನೇರ ಬಿಸಿಲಿಗೆ ತೆರೆದುಕೊಳ್ಳುವುದರಿಂದ ತಪ್ಪಿಸುವುದು, ಹೊರ ಹೋಗುವಾಗ ಸಾಕಷ್ಟು ನೀರು ಕೊಂಡೊಯ್ಯುವುದು, ಕಾರ್ಬೊನೇಟೆಡ್‌ ಪಾನೀಯಗಳನ್ನು ತ್ಯಜಿಸಿ, ನೀರು, ಎಳನೀರು, ಮನೆಯಲ್ಲೇ ಪಾನೀಯಗಳನ್ನು ಮಾಡಿ ಕುಡಿಯಬಹುದು ಎಂದು ಡಾ.ಎಚ್‌.ಆರ್‌. ತಿಮ್ಮಯ್ಯ ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಕಲೆಗೆ ಇರುವಷ್ಟು ಶಕ್ತಿ ಇನ್ನು ಯಾವ ಕಲೆಗೂ ಇಲ್ಲ: ಡಾ.ಪ್ರಭಾಕರ ಜೋಶಿ
ಲೋಕಸಭೆಯಲ್ಲಿ ದ.ಕ. ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ