ಎಚ್ಚೆಸ್ಸಾರ್ಪಿ ನಂಬರ್‌ಪ್ಲೇಟ್‌: ಜೂ.12ವರೆಗೂ ದಂಡವಿಲ್ಲ

KannadaprabhaNewsNetwork |  
Published : May 22, 2024, 12:54 AM IST
ಎಚ್ಚೆಸ್ಸಾರ್ಪಿ ನಂಬರ್‌ಪ್ಲೇಟ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಹೈ ಸೆಕ್ಯೂರೆಟಿ ರಿಜಿಸ್ಟ್ರೇಷನ್ ನಂಬರ್‌ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸದ ವಾಹನ ಸವಾರರ ವಿರುದ್ಧ ಜೂನ್ 12ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಹೈ ಸೆಕ್ಯೂರೆಟಿ ರಿಜಿಸ್ಟ್ರೇಷನ್ ನಂಬರ್‌ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸದ ವಾಹನ ಸವಾರರ ವಿರುದ್ಧ ಜೂನ್ 12ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಮೇ 31ರವರೆಗೆ ವಿಧಿಸಲಾಗಿರುವ ಗಡವನ್ನು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಚ್‌ಎಸ್‌ಆರ್‌ಪಿ ತಯಾರಿಕಾ ಕಂಪನಿಯಾದ ಬಿಎನ್ ಡಿ ಎನರ್ಜಿ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರ ನ್ಯಾಯಪೀಠಕ್ಕೆ ಸರ್ಕಾರ ಈ ಭರವಸೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೂಬೆನ್‌ ಜೇಕಬ್, ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾವೆ ಬರುವ ಜೂ.11ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಾಗಿ, ಈ ಮಧ್ಯಂತರ ಅರ್ಜಿ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೂ.11ರವರೆಗೂ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಕಾಲಾವಕಾಶ ನೀಡಬಹುದೇ ಎಂದು ಪ್ರಶ್ನಿಸಿತು. ಇದಕ್ಕೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ಜೂ.12ರವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿ 2019ರ ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ‘ಮೂಲ ಉಪಕರಣ ತಯಾರಕ’ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ 2023ರ ಆ.17ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಅರ್ಜಿದಾರ ಸಂಸ್ಥೆಯಯನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಕೆಲವು ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ, ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಆಕ್ಷೇಪಿಸಿ ‘ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿ ಅವಕಾಶ ವಂಚಿತ ಕೆಲ ಸಂಸ್ಥೇಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.

ಆದರೆ, ಎಚ್ಎಸ್‌ಆರ್‌ಪಿ ಅಳವಡಿಕೆಗೆ ಅನುಮತಿ ನೀಡಿ ಹೈಕೋರ್ಟ್‌ ಮಧ್ಯಂತರ ಮಾಡಿ ವಿಚಾರಣೆ ಮುಂದೂಡಿತ್ತು. ಈ ಮಧ್ಯೆ ಸರ್ಕಾರ ಸಹ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಮೇ 31ರವರೆಗೆ ಗಡುವು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಬಿಎನ್ ಡಿ ಎನರ್ಜಿ ಲಿಮಿಟೆಡ್‌, ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಧಿಸಿರುವ ಗಡುವು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!