ರತಿ-ಮನ್ಮಥರ ಪ್ರತಿಷ್ಠಾಪನೆಗೆ ಹು-ಧಾ ಮಹಾನಗರ ಸಜ್ಜು

KannadaprabhaNewsNetwork |  
Published : Mar 14, 2025, 01:34 AM IST
ಹುಬ್ಬಳ್ಳಿಯ ಹೊಸ ಮೇದಾರ ಓಣಿಯಲ್ಲಿ ಬಿದಿರಿನಿಂದ ಬೃಹತ್‌ ಕಾಮಣ್ಣನನ್ನು ಸಿದ್ಧಗೊಳಿಸುತ್ತಿರುವುದು. | Kannada Prabha

ಸಾರಾಂಶ

ಹೋಳಿ ಹುಣ್ಣಿಮೆಯು ಕೇವಲ ಬಣ್ಣದಾಟಕ್ಕೆ ಸೀಮಿತವಾಗಿಲ್ಲ. ಇಲ್ಲಿನ ಹಳೇ ಮೇದಾರ ಓಣಿ ಕಾಮಣ್ಣ ಹೆಚ್ಚು ಪ್ರಸಿದ್ದಿ ಹೊಂದಿದೆ. ಇಲ್ಲಿ ಹಲವು ವರ್ಷಗಳಿಂದ ಸಂಪೂರ್ಣ ಬಿದಿರಿನಿಂದ 21 ಅಡಿ ಎತ್ತರ ಹಾಗೂ 18 ಅಡಿ ಅಗಲದ ಕಾಮಣ್ಣನನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಹೋಳಿ ಹಬ್ಬದ ಆಚರಣೆಗೆ ವಾಣಿಜ್ಯನಗರಿ ಸಿದ್ಧಗೊಂಡಿದೆ. ಶುಕ್ರವಾರದಂದು ಹು-ಧಾ ಮಹಾನಗರದಲ್ಲಿ 480ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ರತಿ- ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಧಾರವಾಡದಲ್ಲಿ ಒಂದು ದಿನ, ಹುಬ್ಬಳ್ಳಿಯಲ್ಲಿ ಐದು ದಿನಗಳ ವರೆಗೆ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಎಲ್ಲೆಡೆ ಸಿದ್ಧತೆ ಭರದಿಂದ ಸಾಗಿದೆ. ನಗರದ ಕಮರಿಪೇಟೆ, ದಾಜಿಬಾನಪೇಟೆ, ಮೇದಾರ ಓಣಿ, ಹೊಸ ಮೇದಾರ ಓಣಿ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ದುರ್ಗದ ಬೈಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಉಳಿದಂತೆ ಗ್ರಾಮೀಣ ಮತ್ತು ಶಹರ ಪ್ರದೇಶ ನಿವಾಸಿಗಳು ತಮ್ಮ ಓಣಿಯಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ದಹನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿದಿರಿನ ಕಾಮಣ್ಣ: ಹೋಳಿ ಹುಣ್ಣಿಮೆಯು ಕೇವಲ ಬಣ್ಣದಾಟಕ್ಕೆ ಸೀಮಿತವಾಗಿಲ್ಲ. ಇಲ್ಲಿನ ಹಳೇ ಮೇದಾರ ಓಣಿ ಕಾಮಣ್ಣ ಹೆಚ್ಚು ಪ್ರಸಿದ್ದಿ ಹೊಂದಿದೆ. ಇಲ್ಲಿ ಹಲವು ವರ್ಷಗಳಿಂದ ಸಂಪೂರ್ಣ ಬಿದಿರಿನಿಂದ 21 ಅಡಿ ಎತ್ತರ ಹಾಗೂ 18 ಅಡಿ ಅಗಲದ ಕಾಮಣ್ಣನನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹೊಸ ಮೇದಾರ ಓಣಿಯಲ್ಲಿಯೂ ಬೃಹತ್ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.

100 ವರ್ಷದ ಹಳೆಯ ಮೂರ್ತಿಗಳು: ನಗರದ ತಾಡಪತ್ರಿ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಮೂರ್ತಿಗಳು 100 ವರ್ಷಕ್ಕೂ ಹಳೆಯ ಮೂರ್ತಿಗಳಾಗಿವೆ. ಇಲ್ಲಿ ನಿತ್ಯ ಕಾಮಣ್ಣನಿಗೆ ವಿಶೇಷ ಪೂಜೆ ನೆರವೇರುತ್ತದೆ. ಅದೇ ರೀತಿ ಹಳೆ ಚನ್ನಪೇಟ, ದುರ್ಗದಬೈಲ್, ತಿಮ್ಮಸಾಗರ ಓಣಿ, ಅಂಗಡಿ ಗಲ್ಲಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಜಗ್ಗಲಗಿ ಬಾರಿಸುವುದು ಕಂಡು ಬಂದರೆ, ಹೆಗ್ಗೇರಿ, ಉಣಕಲ್, ವಿದ್ಯಾನಗರ, ಆಸಾರ ಓಣಿ, ಆನಂದನಗರ, ನವನಗರ ಸೇರಿದಂತೆ ನಗರಾದ್ಯಂತ ರತಿ- ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಚರ್ಮದ ವಾದ್ಯಗಳು ಕಣ್ಮರೆಯಾಗುತ್ತಿದ್ದು, ಫೈಬರ್‌ ನಿರ್ಮಿತ ತಮಟೆಗಳ ಅಬ್ಬರ ಜೋರಾಗಿದೆ. ಮಕ್ಕಳ ಕೈಯಿಂದ ಫೈಬರ್‌ ನಿರ್ಮಿತ ಹಲಗೆಯ ಸದ್ದು ಎಲ್ಲೆಂದರಲ್ಲಿ ಕೇಳಿಬರುತ್ತಿದೆ.

ಗ್ರಾಮೀಣ ಭಾಗದಲ್ಲೂ ರಂಗು:ಹೋಳಿ ಹುಣ್ಣಿಮೆ ಅಂಗವಾಗಿ ಗ್ರಾಮೀಣ ಪ್ರದೇಶದ ಹುಡುಗರು ಕುಳ್ಳು (ದನದ ಸೆಗಣಿಯಿಂದ ಮಾಡಿದ್ದು) ಹಾಗೂ ಕಟ್ಟಿಗೆ ಕದ್ದು ತಂದು ಕಾಮಣ್ಣ ಸುಡುವ ಜಾಗದಲ್ಲಿ ಸಂಗ್ರಹಿಸುತ್ತಾರೆ. ಸಂಜೆ ಆಗುತ್ತಿದ್ದಂತೆ ಒಂದೆಡೆ ಜಮಾವಣೆಗೊಂಡು ಭರ್ಜರಿ ಹಲಗೆ ಬಾರಿಸಿ ಸಂಭ್ರಮಿಸುತ್ತಾರೆ. ಯುವಕ- ಯುವತಿಯರಿಗಾಗಿ ಜಾನಪದ ಹಾಡು, ಕುಣಿತ, ಸಾಹಸ ಕ್ರೀಡೆ ಏರ್ಪಡಿಸಲಾಗಿರುತ್ತದೆ. ಕೊನೆಯ ದಿನ ಸಾವಿರಾರು ಜನರ ಸಮ್ಮುಖದಲ್ಲಿ ರಾತ್ರಿ ಕಾಮದಹನ ಕಾರ್ಯಕ್ರಮ ನಡೆಯುತ್ತದೆ.

ಭರ್ಜರಿ ಭೋಜನ:ಕಾಮದಹನ ಮಾಡಿದ ನಂತರ ಬೆಂಕಿಯನ್ನು ಮನೆಗೆ ತಂದು ಮನೆಯ ಮುಂದೆ ಆ ಬೆಂಕಿಯಲ್ಲಿ ಕಡಲೆ ಸುಟ್ಟುಕೊಂಡು ಎಲ್ಲರೂ ತಿನ್ನುವುದು ಹಬ್ಬದ ಮತ್ತೊಂದು ವಿಶೇಷ. ಹೊಯ್ಕಂಡ್ ಬಾಯಿಗೆ ಹೋಳಿಗೆ ಎಂಬಂತೆ ಹೋಳಿ ಹಬ್ಬಕ್ಕಾಗಿಯೇ ಹೆಂಗಳೆಯರು ಹೋಳಿಗೆ, ತುಪ್ಪ, ಪಾಯಸ, ಗೋದಿ ಹುಗ್ಗಿ, ಮೊಸರನ್ನ, ಮಜ್ಜಿಗೆ, ಚಪಾತಿ, ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ಭಕ್ಷ್ಯ ಭೋಜನ ಸಿದ್ದಪಡಿಸುತ್ತಾರೆ. ಬಣ್ಣದಾಟದ ಬಳಿಕ ಸ್ನಾನ ಮಾಡಿ ಮನೆಯ ಸದಸ್ಯರು ಸೇರಿ ಸಿಹಿ ಊಟ ಮಾಡುವುದು ಹೋಳಿಹಬ್ಬದ ಮತ್ತೊಂದು ವಿಶೇಷ.

ಬಣ್ಣದ ಸಿದ್ಧತೆ:ಹೋಳಿ ಹುಣ್ಣಿಮೆಗೆ ಪ್ರಮುಖವಾದ ವಸ್ತುವೇ ಈ ಬಣ್ಣ. ಬಗೆಬಗೆಯ ಬಣ್ಣಗಳು ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಕ್ಕೆ ಇರಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಹೋಳಿ ಹುಣ್ಣಿಮೆಯ ಮೊದಲ ದಿನವಾದ ಗುರುವಾರವೇ ಖರೀದಿಸಿಕೊಂಡು ಹೋಗುತ್ತಾರೆ. ಹಾಗಾಗಿ ಹುಣ್ಣಿಮೆಯ ಪೂರ್ವದಲ್ಲಿಯೇ ಬಣ್ಣದ ಮಾರಾಟ ಭರ್ಜರಿಯಾಗಿಯೇ ನಡೆಯುತ್ತದೆ. ₹10 ರಿಂದ ಹಿಡಿದು ₹400-500ರ ವರೆಗೂ ಬಣ್ಣದ ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!