ಹುಬ್ಬಳ್ಳಿ ಏರ್‌ಪೋರ್ಟ್ ಮೇಲ್ದರ್ಜೆ ಕಾಮಗಾರಿ ವಿಳಂಬ

KannadaprabhaNewsNetwork |  
Published : May 06, 2026, 02:00 AM IST
ಮದಮದ | Kannada Prabha

ಸಾರಾಂಶ

ಹುಬ್ಬಳ್ಳಿ ವಿಮಾನ ನಿಲ್ದಾಣ ಉನ್ನತೀಕರಿಸಬೇಕು. ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸದಿದ್ದರೂ ಸೌಲಭ್ಯಗಳು ಅತ್ಯಾಧುನಿಕವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಉನ್ನತೀಕರಿಸುವ ಕಾಮಗಾರಿಗೆ 2024ರ ಮಾರ್ಚ್‌ನಲ್ಲಿ ಚಾಲನೆ ನೀಡಿ 2026ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯದೊಂದಿಗೆ ಇಲ್ಲಿನ ವಿಮಾನ ನಿಲ್ದಾಣ ಉನ್ನತೀಕರಿಸುವ ಕಾಮಗಾರಿ ವಿಳಂಬವಾಗಿದ್ದು, ಟೆಂಡರ್‌ ಅವಧಿ ವಿಸ್ತರಿಸಲಾಗಿದೆ. ಕಾಮಗಾರಿಯ ವಿಳಂಬ ನೋಡಿದರೆ ಮತ್ತೊಮ್ಮೆ ಕಾಲಮಿತಿ ವಿಸ್ತರಿಸುವ ಸಾಧ್ಯತೆ ದಟ್ಟವಾಗಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಉನ್ನತೀಕರಿಸಬೇಕು. ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸದಿದ್ದರೂ ಸೌಲಭ್ಯಗಳು ಅತ್ಯಾಧುನಿಕವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಉನ್ನತೀಕರಿಸುವ ಕಾಮಗಾರಿಗೆ 2024ರ ಮಾರ್ಚ್‌ನಲ್ಲಿ ಚಾಲನೆ ನೀಡಿ 2026ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು.

ಆದರೆ, ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆ ಜೂನ್‌ 30ರ ವರೆಗೆ ವಿಸ್ತರಿಸಲಾಗಿದೆ. ಸದ್ಯ ಶೇ.70ರಷ್ಟು ಕಾಮಗಾರಿ ಮುಗಿಗಿದ್ದು, ಉಳಿದ ಕಾಮಗಾರಿ ಜೂನ್‌ ಅಂತ್ಯದೊಳಗೆ ಮುಗಿಯುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೆ, ಅಧಿಕಾರಿಗಳು ಮಾತ್ರ ಕಾಮಗಾರಿ ಮುಗಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

₹ 320 ಕೋಟಿ ವೆಚ್ಚ:

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಈ ಕಾಮಗಾರಿ ₹ 320 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರದ ನಾಸಿಕ್ ಮೂಲದ ಹರ್ಷ ಕನ್ಸ್ಟ್ರಕ್ಷನ್ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದಿದ್ದು ಲಾಜಿಸ್ಟಿಕ್ ಮತ್ತು ಕಾರ್ಯಗತಗೊಳಿಸುವ ಸವಾಲು ಸೇರಿದಂತೆ ಅನೇಕ ಅಂಶಗಳಿಂದಾಗಿ ಕೆಲಸ ಕೊಂಚ ವಿಳಂಬವಾಗಿದೆ. ಈಗ ಒಂದು ಹಂತಕ್ಕೆ ಬಂದಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಟರ್ಮಿನಲ್ ಪೂರ್ಣಗೊಂಡ ನಂತರ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಮೂಲಸೌಕರ್ಯ ಹೆಚ್ಚಾಗುತ್ತದೆ. ಹೊಸ ಟರ್ಮಿನಲ್ ಕಟ್ಟಡವು 4 ಹೊಸ ಏರೋಬ್ರಿಡ್ಜ್‌, ಒಂದು ಸಿಐಪಿ ಲಾಂಜ್ (commercially important person), ಒಂದು ಎಕ್ಸಿಕ್ಯೂಟಿವ್ ಲಾಂಜ್, 8 ಎಸ್ಕ್‌ಲೇಟರ್‌ಗಳು (ಅವುಗಳಲ್ಲಿ ನಾಲ್ಕು ಭದ್ರತಾ ಹಿಡುವಳಿ ಪ್ರದೇಶಗಳು) ಮತ್ತು ಎರಡು ವಿಐಪಿ ಲಾಂಜ್‌ಗಳನ್ನು ಹೊಸ ಟರ್ಮಿನಲ್‌ ಹೊಂದಲಿದೆ.

ಸದ್ಯ ವಿಮಾನ ನಿಲ್ದಾಣದ ಟರ್ಮಿನಲ್ 3600 ಚದರ ಮೀಟರ್ ಆಗಿದ್ದು, 500 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಹೊಸ ಟರ್ಮಿನಲ್ 19,400 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ಏಕಕಾಲದಲ್ಲಿ 2400 ಪ್ರಯಾಣಿಕರ ಆಗಮನ ಮತ್ತು ನಿರ್ಗಮನ ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ಪ್ರಸ್ತುತ 3 ಏರ್‌ಬಸ್ ವಿಮಾನ ಮತ್ತು 4 ಎಟಿಆರ್ ವಿಮಾನ ಒಂದೇ ಸಮಯದಲ್ಲಿ ಲ್ಯಾಂಡಿಗ್‌ ಆಗಬಹುದು. ಹೊಸ ಟರ್ಮಿನಲ್‌ನಲ್ಲಿ ಏಕಕಾಲಕ್ಕೆ 10 ಏರ್‌ಬಸ್ ಮತ್ತು 4 ಎಟಿಆರ್ ಸೇರಿ 14 ವಿಮಾನಗಳ ಸಾಮರ್ಥ್ಯದ ನಿರ್ಮಾಣ ಹಂತದಲ್ಲಿದೆ.

ಬೆಂಗಳೂರು ಮತ್ತು ಮಂಗಳೂರು ನಂತರ ಹೊಸ ಟರ್ಮಿನಲ್‌ನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗುತ್ತಿದೆ. ಹೊಸ ಟರ್ಮಿನಲ್‌ನಲ್ಲಿ ಪ್ರಯಾಣಿಕರು ಏರೋ ಬ್ರಿಡ್ಜ್ ಎಸ್ಕ್‌ಲೇಟರ್, ಲಿಫ್ಟ್‌ನಂತಹ ಹೊಸ ಸೌಲಭ್ಯ ಪಡೆಯಲಿದ್ದಾರೆ. ಹೊಸ ಟರ್ಮಿನಲ್ ಕಟ್ಟಡದ ವಿಸ್ತರಣೆ ಜತೆಗೆ ವಾಹನಗಳ ಪಾರ್ಕಿಂಗ್ಗೂ ವ್ಯವಸ್ಥೆ ಮಾಡಲಾಗುತ್ತಿದೆ. 500 ಕಾರು, 10 ಬಸ್, 100 ಟ್ಯಾಕ್ಸಿ, ಬೈಕ್ ಹಾಗೂ ಸಿಬ್ಬಂದಿಗಳ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ. ಈ ನಿಲ್ದಾಣ ಪರಿಸರ ಸ್ನೇಹಿ ನಿಲ್ದಾಣವಾಗಿ ಹೊರಹೊಮ್ಮಲಿದೆ.

ಸದ್ಯ ಜೂನ್‌ವರೆಗೂ ಕಾಮಗಾರಿಯ ಅವಧಿಯನ್ನು ವಿಸ್ತರಿಸಲಾಗಿದೆ. ಜೂನ್‌ನೊಳಗೆ ಪೂರ್ಣಗೊಳಿಸಿ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಅಷ್ಟರೊಳಗೆ ಆಗುತ್ತದೆಯೋ ಅಥವಾ ಮತ್ತೆ ಅವಧಿ ವಿಸ್ತರಿಸಬೇಕಾಗುತ್ತದೆಯೋ ಕಾಯ್ದು ನೋಡಬೇಕಷ್ಟೇ. ಆದಷ್ಟು ಬೇಗನೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ ಜನರದ್ದು.ಚಂದ್ರಮೌಳೇಶ್ವರ ದೇವಸ್ಥಾನದ ಹೊರನೋಟ

ವಿಮಾನ ನಿಲ್ದಾಣದ ಹೊರನೋಟವು ಐತಿಹಾಸಿಕತೆ ಪ್ರತಿಬಿಂಬಿಸಲಿದೆ. ಹುಬ್ಬಳ್ಳಿಯಲ್ಲಿನ ಇತಿಹಾಸ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಿಂದ ಸ್ಫೂರ್ತಿ ಪಡೆದು ಹೊರನೋಟ ನಿರ್ಮಿಸಲಾಗುತ್ತಿದೆ.

ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಕಾಮಗಾರಿ ಶೇ. 80ರಷ್ಟಾಗಿದೆ. ಜನವರಿಗೆ ಮುಗಿಯಬೇಕಿದ್ದ ಕಾಮಗಾರಿ ಕಾರಣಾಂತರಗಳಿಂದ ಜೂನ್‌ ಅಂತ್ಯದ ವರೆಗೂ ವಿಸ್ತರಿಸಲಾಗಿದೆ. ಅಷ್ಟರೊಳಗೆ ಪೂರ್ಣವಾಗುವ ಸಾಧ್ಯತೆ ಇದೆ.

ರೂಪೇಶಕುಮಾರ, ನಿರ್ದೇಶಕರು, ವಿಮಾನ ನಿಲ್ದಾಣ, ಹುಬ್ಬಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹುಬ್ಬಳ್ಳಿಯಿಂದ ಸಾವಿರಾರು ಜನ