ಕನ್ನಡಪ್ರಭ ವಾರ್ತೆ ಖಾನಾಪುರ
ನೈಋತ್ಯ ರೈಲ್ವೆ ವ್ಯಾಪ್ತಿಯ ಖಾನಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶಕ್ಕಾಗಿ ₹3 ಕೋಟಿ ವೆಚ್ಚದ ಕಾಮಗಾರಿಗೆ ಮತ್ತು ನಿಲ್ದಾಣದ ಪಕ್ಕದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ₹11 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಮುಂದಿನ ಜೂನ್ ಒಳಗಾಗಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಸ್ಥಳೀಯ ರೈಲು ನಿಲ್ದಾಣದಲ್ಲಿ ರೈಲ್ವೆ ಇಲಾಖೆಯಿಂದ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿ-ದಾಂಡೇಲಿ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಈ ಮಾರ್ಗದಲ್ಲಿ ರೈಲು ಸೇವೆ ಆರಂಭಗೊಳ್ಳಲಿದೆ. ಲೋಂಡಾ-ಮೀರಜ್ ಮಾರ್ಗದ 186 ಕಿಮೀ ವಿದ್ಯುದೀಕರಣ ಕಾರ್ಯವೂ ಮುಗಿದಿದೆ. ಈ ಭಾಗದ ಸಂಸದರು, ಶಾಸಕರು ಮತ್ತು ಸಾರ್ವಜನಿಕರ ಆಗ್ರಹದ ಮೇರೆಗೆ ವಾಸ್ಕೋ ನಿಜಾಮುದ್ದೀನ್ ಗೋವಾ ಎಕ್ಸಪ್ರೆಸ್, ಬೆಳಗಾವಿ-ಬೆಂಗಳೂರು ದೈನಂದಿನ ಎಕ್ಸಪ್ರೆಸ್ ರೈಲುಗಳಿಗೆ ಖಾನಾಪುರ ನಿಲ್ದಾಣದಲ್ಲಿ ನಿಲುಗಡೆ, ವಾಸ್ಕೋ ಪಂಢರಪುರ ಮಾರ್ಗದಲ್ಲಿ ರೈಲು ಸೇವೆ ಆರಂಭ ಮತ್ತು ನಿಲ್ದಾಣದ ಆವರಣದಲ್ಲಿರುವ ಆಂಜನೇಯ ದೇವಾಲಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದ್ದಾರೆ. ಇವುಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ರೈಲು ನಿಲ್ದಾಣಗಳು ಸಾಮಾನ್ಯ ಜನರ ಜೀವನಾಡಿಗಳಾಗಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿತ್ತು. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ರೈಲು ನಿಲ್ದಾಣಗಳು, ರೈಲ್ವೆ ಮಾರ್ಗಗಳು ಮತ್ತು ರೈಲುಗಳನ್ನು ಉನ್ನತೀರಣಗೊಳಿಸಿ ಆಧುನಿಕ ಸ್ಪರ್ಶ ನೀಡಲಾಗಿದೆ. ವಿಮಾನ ನಿಲ್ದಾಣಗಳನ್ನು ಮೀರಿಸುವ ಮಟ್ಟದಲ್ಲಿ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿವೆ. ಅಂದಾಜು ₹29 ಸಾವಿರ ಕೋಟಿ ಅನುದಾನದಲ್ಲಿ ರೈಲ್ವೆ ಇಲಾಖೆ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದೆ. ಬೆಳಗಾವಿ ಮತ್ತು ಖಾನಾಪುರ ನಿಲ್ದಾಣಗಳನ್ನು ಮಾದರಿ ನಿಲ್ದಾಣಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯರೋಜನೆ ರೂಪಿಸಲಾಗಿದೆ ಎಂದು ಸಚಿವರು ವಿವರಿಸಿದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಚಿವ ಸೋಮಣ್ಣ ಖಾನಾಪುರ ರೈಲು ನಿಲ್ದಾಣದ 2ನೇ ಪ್ಲಾಟಫಾರ್ಮ್‌ನಲ್ಲಿ 450 ಮೀಟರ್ ಶೆಲ್ಟರ್ ನಿರ್ಮಾಣ, ವೇಟಿಂಗ್ ರೂಂಗಳ ನಿರ್ಮಾಣ, ನಿಲ್ದಾಣದಲ್ಲಿ ರೈಲುಗಳ ಆಗಮನ-ನಿರ್ಗಮನದ ಮಾಹಿತಿ ನೀಡುವ ಡಿಸಪ್ಲೇ ಬೋರ್ಡ್ ಅಳವಡಿಕೆ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಜೊತೆಗೆ ಹುಬ್ಬಳ್ಳಿ ದಾದರ್ ಎಕ್ಸಪ್ರೆಸ್ ರೈಲು ಖಾನಾಪುರ ರೈಲು ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೆ ಅವರು ಹಸಿರು ನಿಶಾನೆ ನೀಡಿದ್ದಾರೆ ಎಂದು ವಿವರಿಸಿದರು.ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಸೇವೆಗಳನ್ನು ಒದಗಿಸಲು ಸಚಿವರಿಗೆ ಮನವಿ ಮಾಡಿದರು. ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ನೈಋತ್ಯ ರೈಲ್ವೆ ಡಿಆರ್‌ಎಂ ಮೀನಾ, ಹಿರಿಯ ಅಧಿಕಾರಿಗಳಾದ ಅಜಯ ಶರ್ಮಾ, ಎಸ್.ಪಿ ಶಾಸ್ತ್ರಿ, ಮುರಳಿಕೃಷ್ಣ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ವತಿಯಿಂದ ಮತ್ತು ನಾಗರಿಕರ ವತಿಯಿಂದ ಇಲ್ಲಿಂದ ಪಂಢರಪುರಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ವಾಸ್ಕೋ-ಪಂಡರಪುರ ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಬೇಕು ಮತ್ತು ಈ ಮಾರ್ಗದ ಮೂಲಕ ನಿತ್ಯ ಸಂಚರಿಸುವ ಬೆಳಗಾವಿ-ಬೆಂಗಳೂರು, ವಾಸ್ಕೋ-ನಿಜಾಮುದ್ದೂನ ಎಕ್ಸಪ್ರೆಸ್ ರೈಲುಗಳಿಗೆ ಖಾನಾಪುರದಲ್ಲಿ ನಿಲುಗಡೆ ಸೌಲಭ್ಯ ನೀಡಬೇಕು ಎಂಬ ಮನವಿ ಸಲ್ಲಿಸಲಾಯಿತು.ಹುಬ್ಬಳ್ಳಿ-ದಾದರ್ ರೈಲಿಗೆ ಹಸಿರು ನಿಶಾನೆ
ಹುಬ್ಬಳ್ಳಿ-ದಾದರ್ ನಡುವೆ ನಿತ್ಯ ಸಂಚರಿಸುವ ಹುಬ್ಬಳ್ಳಿ-ದಾದರ್ ರೈಲು (ರೈಲು ಸಂಖ್ಯೆ 17317) ಖಾನಾಪುರ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಗೊಳ್ಳಲು ಸಚಿವ ಸೋಮಣ್ಣ ಹಾಗೂ ಗಣ್ಯರು ಸೋಮವಾರ ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಸೆ.15ರಿಂದ ಈ ರೈಲು ನಿತ್ಯ ಸಂಜೆ 5.55ಕ್ಕೆ ಖಾನಾಪುರ ರೈಲು ನಿಲ್ದಾಣಕ್ಕೆ ಆಗಮಿಸಿ 5.56ಕ್ಕೆ ಬೆಳಗಾವಿಯತ್ತ ಹೊರಡಲಿದೆ. ಅದೇ ರೀತಿ (ರೈಲು ಸಂಖ್ಯೆ 17318) ದಾದರ್-ಹುಬ್ಬಳ್ಳಿ ರೈಲು ಬೆಳಗ್ಗೆ 8.40ಕ್ಕೆ ಆಗಮಿಸಿ 8.41ಕ್ಕೆ ಹುಬ್ಬಳ್ಳಿಯತ್ತ ಹೊರಡಲಿದೆ.