ಹುಬ್ಬಳ್ಳಿ-ಧಾರವಾಡದ ಮನೆ, ಮನೆ ತಲುಪದ ಪಿಎನ್‌ಜಿ ಯೋಜನೆ!

KannadaprabhaNewsNetwork |  
Published : Mar 25, 2026, 02:30 AM IST
ಹುಬ್ಬಳ್ಳಿಯ ಡಾಲರ್ಸ್‌ ಕಾಲನಿಯಲ್ಲಿ ಮನೆಯೊಂದಕ್ಕೆ ಅಳವಡಿಸಲಾಗಿರುವ ಪಿಎನ್‌ಜಿ ಪೈಪ್‌ಲೈನ್‌. | Kannada Prabha

ಸಾರಾಂಶ

ಅತ್ಯಂತ ಸುರಕ್ಷಿತ ಹಾಗೂ ಎಲ್‌ಪಿಜಿ‌ (ಗ್ಯಾಸ್‌)ಗಿಂತಲೂ ಕಡಿಮೆ ವೆಚ್ಚ ತಗಲುವ ಈ ಪಿಎನ್‌ಜಿ, ದೇಶದ ಮನೆಮನೆಗೆ ಪೈಪ್‌ಲೈನ್ ಮೂಲಕ ನ್ಯಾಚುರಲ್ ಗ್ಯಾಸ್ ಪೂರೈಸುವ ಉದ್ದೇಶದಿಂದ ಜಾರಿಗೊಂಡಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (PNGRB) ಯೋಜನೆಯ ಜಾರಿ ಹೊಣೆಯನ್ನು ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಕಂಪನಿಗೆ ವಹಿಸಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಕೊಲ್ಲಿ ಯುದ್ಧದಿಂದಾಗಿ ಎಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ಗಾಗಿ ತೀವ್ರ ಹಾಹಾಕಾರ ಉಂಟಾಗಿದೆ. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ 8 ವರ್ಷಗಳ ಹಿಂದೆಯೇ ಮನೆ-ಮನೆಗೆ ತಲುಪಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಪಿಎನ್‌ಜಿ (Piped Natural Gas) ಮಾಹಿತಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುವಲ್ಲಿ ವಿಫಲವಾಗಿದೆ.

ಅತ್ಯಂತ ಸುರಕ್ಷಿತ ಹಾಗೂ ಎಲ್‌ಪಿಜಿ‌ (ಗ್ಯಾಸ್‌)ಗಿಂತಲೂ ಕಡಿಮೆ ವೆಚ್ಚ ತಗಲುವ ಈ ಪಿಎನ್‌ಜಿ, ದೇಶದ ಮನೆಮನೆಗೆ ಪೈಪ್‌ಲೈನ್ ಮೂಲಕ ನ್ಯಾಚುರಲ್ ಗ್ಯಾಸ್ ಪೂರೈಸುವ ಉದ್ದೇಶದಿಂದ ಜಾರಿಗೊಂಡಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (PNGRB) ಯೋಜನೆಯ ಜಾರಿ ಹೊಣೆಯನ್ನು ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಕಂಪನಿಗೆ ವಹಿಸಿದೆ. ಧಾರವಾಡ ಜಿಲ್ಲೆಯಲ್ಲಿ ಪಿಎನ್‌ಜಿ(ಪೈಪ್ಡ್‌ ನ್ಯಾಚುರಲ್ ಗ್ಯಾಸ್) ಹಾಗೂ ಕಂಪ್ರೆಸ್ಸಡ್ ನ್ಯಾಚುರಲ್ ಗ್ಯಾಸ್ (CNG) ಸಂಪರ್ಕ ಕಲ್ಪಿಸುವ ಕುರಿತು 2015ರಲ್ಲಿ ಯೋಜನೆ ರೂಪಿಸಲಾಗಿತ್ತು. 2017ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. 2018 ಫೆಬ್ರವರಿ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಕಾರ್ಯಕ್ರಮದ‌ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು.

₹200 ಕೋಟಿ ಯೋಜನೆ:

ಹು-ಧಾ ಮಹಾನಗರದಲ್ಲಿ ₹200 ಕೋಟಿ ವೆಚ್ಚದಲ್ಲಿ ಸುಮಾರು 750 ಕಿಮೀ ವ್ಯಾಪ್ತಿಯಲ್ಲಿ ಪೈಪ್ ಲೈನ್ ಹಾಕಲಾಗಿದೆ. ನಗರದ ವಿವಿಧೆಡೆ 14 ಕಡೆಗಳಲ್ಲಿ ಸಿಎನ್‌ಜಿ ಸ್ಟೇಷನ್ ಆರಂಭಿಸಲಾಗಿದೆ. ಮಹಾನಗರದಲ್ಲಿ 4 ಲಕ್ಷಕ್ಕೂ ಅಧಿಕ ಮನೆಗಳಿವೆ. 5 ವರ್ಷಗಳಲ್ಲಿ ಕನಿಷ್ಠ 60 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿತ್ತು. ಆದರೆ, ಸಂಪರ್ಕ ಕಲ್ಪಿಸಿದ್ದು ಕೇವಲ 20 ಸಾವಿರ ಮನೆಗಳಿಗೆ. ಇದರೊಂದಿಗೆ 50 ಕಡೆಗಳಲ್ಲಿ ವಾಣಿಜ್ಯ, 14 ಇಂಡಸ್ಟ್ರೀಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮುಂಬೈ ಹಾಗೂ ಬೆಂಗಳೂರಿನಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ಇಲ್ಲೂ ಉತ್ತಮ ಸ್ಪಂದನೆ ದೊರೆಯಬಹುದು ಎಂಬ ಉದ್ದೇಶದಿಂದ ಯೋಜನೆ ಆರಂಭಿಸಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುವಲ್ಲಿ ಅಲ್ಪ ಹಿನ್ನೆಡೆ ಕಂಡಿದೆ.

ಎಲ್ಲಲ್ಲಿ ಅಳವಡಿಕೆ?:

ಹುಬ್ಬಳ್ಳಿಯ ಕೇಶ್ವಾಪುರ, ನವನಗರ, ಗೋಕುಲ ರಸ್ತೆ, ಬಾದಾಮಿ ನಗರ, ರೇಣುಕಾ ನಗರ, ಮಂಜುನಾಥ ನಗರ, ಶಿರೂರ ಪಾರ್ಕ್, ಎಸ್‌ಬಿಐ ಕಾಲನಿ, ಡಾಲರ್ಸ್‌ ಕಾಲನಿ, ಅರಿಹಂತ ನಗರ, ಧಾರವಾಡದ ರಾಯಪುರ, ಗಾಂಧಿನಗರ ಹಾಗೂ ಬೇಲೂರು, ಲಕಮನಹಳ್ಳಿ, ರಾಯಪುರ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವೆಡೆ ಈಗಾಗಲೇ ಪೈಪ್‌ಲೈನ್‌ ಅಳವಡಿಸಲಾಗಿದೆ.

ಬಾಕ್ಸ್‌...

ಯುದ್ಧದಿಂದ ಪಿಎನ್‌ಜಿಗೆ ಹೆಚ್ಚಿದ ಬೇಡಿಕೆ:

ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಕೊರತೆ ಹೆಚ್ಚಿದೆ. ಹಾಗಾಗಿ ಕೇಂದ್ರ ಸರ್ಕಾರ ಪಿಎನ್‌ಜಿ (ಗ್ಯಾಸ್) ಬಳಕೆ ಮಾಡುವಂತೆ ಸೂಚನೆ ನೀಡುತ್ತಿದೆ. ಜತೆಗೆ ಈ ಕುರಿತು ಸುತ್ತೋಲೆ ಸಹ ಹೊರಡಿಸಿದೆ. ಈ ಯುದ್ಧದ ಬಿಸಿ ಪಿಎನ್‌ಜಿ ಮೇಲೆ ಬಿದ್ದಿಲ್ಲ. ಸಾರ್ವಜನಿಕರು ಸಹ ಎಲ್‌ಪಿಜಿ ಸಮಸ್ಯೆ ಅನುಭವಿಸಿದ ಬಳಿಕ ಕಳೆದೊಂದು ವಾರದಿಂದ ನೂರಾರು ಜನರು ಪಿಎನ್‌ಜಿ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಗೃಹ ಬಳಕೆ ಗ್ರಾಹಕರು ಸೆಕ್ಯುರಿಟಿ ಡಿಪಾಸಿಟ್ ₹6000, ಪೇಮೆಂಟ್ ಸೆಕ್ಯುರಿಟಿ ₹1000 ತೆಗೆದುಕೊಳ್ಳಲಾಗುತ್ತದೆ. ಪ್ರತಿ 2 ತಿಂಗಳಿಗೊಮ್ಮೆ ಬಿಲ್ ಪಾವತಿ ಮಾಡಬೇಕಾಗುತ್ತದೆ. 4 ಯುನಿಟ್ ವರೆಗೆ ₹200 ಚಾರ್ಜ್ ಮಾಡಲಾಗುತ್ತದೆ. ವಿದ್ಯುತ್ ಮೀಟರ್‌ನಂತೆ ಇಲ್ಲೂ ಕೂಡ ಮೀಟರ್ ರೀಡಿಂಗ್ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಎಲ್‌ಪಿಜಿಗಿಂತಲೂ ಕಡಿಮೆ ವೆಚ್ಚದ ಪಿಎನ್‌ಜಿ ಅಳವಡಿಕೆ ಕುರಿತು ಗ್ರಾಹಕರಲ್ಲಿ ಅರಿವು ಮೂಡುತ್ತಿದೆ. ದಿನದಿಂದ ದಿನಕ್ಕೆ ಇದರ ಬೇಡಿಕೆ ಹೆಚ್ಚಾಗಿದೆ. ಕೊಲ್ಲಿ ಯುದ್ಧದಿಂದಾಗಿಯೂ ಅಲ್ಪ ಪ್ರಮಾಣದ ಬೇಡಿಕೆ ಹೆಚ್ಚಾಗಿದೆ.

- ವಿನೋದ್‌ ಪಾಪಲ್, ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಕಂಪನಿ ಮುಖ್ಯ ವ್ಯವಸ್ಥಾಪಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಪ್ರಶಿಕ್ಷಣ ಮಹಾಭಿಯಾನ ಪೂರಕ: ರೂಪಾಲಿ ನಾಯ್ಕ
ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿ