ಗಂಗಾವತಿ: ಇಂದಿನ ಯುವ ಪೀಳಿಗೆ, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವುದು ಅವಶ್ಯ ಎಂದು ಸಾಹಿತಿ ಡಾ. ಸಿ.ಮಹಾಲಕ್ಷ್ಮಿ ತಿಳಿಸಿದರು.

ನಗರದ ಜಯನಗರ ಕಾಲನಿಯ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಿಳಾ ಸಮಿತಿ ಏರ್ಪಡಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಮಕ್ಕಳಿಗೆ ಹಬ್ಬ ಹರಿದಿನ ಬಗ್ಗೆ ಮಾಹಿತಿ, ಭಾರತ ಸಂಸ್ಕೃತಿ, ಆಚಾರ ವಿಚಾರ, ಹಬ್ಬದ ಹಿನ್ನೆಲೆ, ಅದರ ಉಪಯೋಗ, ನಮ್ಮ ಹಿರಿಯರು ಹಬ್ಬಗಳ ಬಗ್ಗೆ ಹೊಂದಿದ್ದ ನಂಬಿಕೆ, ವೈಜ್ಞಾನಿಕ ಹಿನ್ನೆಲೆ ಕುರಿತಂತೆ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾಹಿತಿ ನೀಡುವುದು ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ.ಜಿ. ಮಠದ ಮಾತನಾಡಿ, ಮಹಿಳೆಯರು ಇಂತಹ ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಎಲ್ಲ ರಂಗಗಳಲ್ಲಿಯೂ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಿತಾ ಗುರುಮೂರ್ತಿ ಮಾತನಾಡಿ, ಯುಗಾದಿ ಎಂದರೆ ಕಷ್ಟ ಸುಖ ನೋವು ನಲಿವುಗಳನ್ನು ಸಮಾನವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.


ಭಜನಾ ಮಂಡಳಿಯ ಅಧ್ಯಕ್ಷ ದೊಡ್ಡಬಸಮ್ಮ ಗುರುವಿನ ಮಠ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ಸಹಜ ಶಿವಯೋಗ ಏರ್ಪಡಿಸುವುದರ ಜತೆಗೆ ಇನ್ನು ಅನೇಕ ಇತರ ಧಾರ್ಮಿಕ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಮಹಿಳೆಯರು ಹೆಚ್ಚಿನ ಸಹಕಾರ ನೀಡಬೇಕೆಂದು ತಿಳಿಸಿದರು.

ಗೀತಾ ಪಾಟೀಲ್, ದೇವಿಕಾ, ಶಾರದಾ ಕಾಡಗೋಡಿ, ಲಕ್ಷ್ಮೀ ಸೇರಿದಂತೆ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.