ಹುಬ್ಬಳ್ಳಿ:
ನಗರ ಸೇರಿದಂತೆ ಎಲ್ಲೆಡೆ ಆಯುಧ ಪೂಜೆ ಮತ್ತು ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಮಂದಿಯೆಲ್ಲ ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ನಗರದ ಮಾರುಕಟ್ಟೆ ಕಳೆಗಟ್ಟಿದೆ.ಇಲ್ಲಿನ ದುರ್ಗದಬೈಲ್, ಜನತಾ ಬಜಾರ್, ಹಳೆ ದುರ್ಗದ ಬೈಲ್, ಕೇಶ್ವಾಪುರ ಮುಖ್ಯ ರಸ್ತೆ, ಶಿರೂರು ಪಾರ್ಕ್ ರಸ್ತೆಗಳಲ್ಲಿ ಹಬ್ಬದ ನಿಮಿತ್ತ ವಿಶೇಷವಾಗಿ ಹೂವು ಹಣ್ಣುಗಳ ಮಾರಾಟ ಜೋರಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. ಪೂಜೆಗೆ ಅಗತ್ಯವಾದ ಸಾಮಗ್ರಿ, ಹೊಸ ಬಟ್ಟೆ, ಸಿಹಿ ತಿಂಡಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬಟ್ಟೆ ಅಂಗಡಿಗಳೂ ಜನರಿಂದ ತುಂಬಿ ತುಳುಕುತ್ತಿದ್ದು, ಹಬ್ಬದ ನಿಮಿತ್ತ ವಿಶೇಷ ರಿಯಾಯಿತಿಯಿಂದ ಅಂಗಡಿಗಳು ಜನರನ್ನು ಸೆಳೆಯುತ್ತಿವೆ. ಆಭರಣ ಖರೀದಿಯೂ ಜೋರಾಗಿದೆ.
ಬೆಲೆ ಹೆಚ್ಚಳ ಬಿಸಿ:ಬೆಲೆ ಹೆಚ್ಚಳದ ನಡುವೆಯೂ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಸ್ತುಗಳ ಖರೀದಿ ಜೋರಾಗಿದ್ದು, ಹೂವು-ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ₹20ರಿಂದ ₹50ಹೆಚ್ಚಳವಾಗಿದೆ. ಸೇಬು ₹ 150, ಸೀತಾಫಲ ₹120, ಕಿತ್ತಳೆ ₹120, ಮೋಸಂಬಿ ₹100, ಆರೇಂಜ್ ₹250, ದಾಳಿಂಬೆ ₹ 100, ಬಾಳೆಹಣ್ಣು ₹ 50ಗೆ ಡಜನ್. ಏಲಕ್ಕಿ ಬಾಳೆ ಕೆಜಿಗೆ ₹100 ಇದೆ. ₹ 100ಗೆ ಐದು ತರಹದ ಒಂದೊಂದು ಹಣ್ಣು ಮಾರಾಟ ಮಾಡಲಾಗುತ್ತಿದೆ.
ಹೂವುಗಳ ಬೆಲೆ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಿದೆ. ಕಳೆದ ಕೆಲದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹೂವು ಹಾಳಾಗುತ್ತಿದೆ. ಹೀಗಾಗಿ, ಮಾರುಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಸೇವಂತಿ (ಮಾರು) ₹60-₹120, ಚೆಂಡು ಹೂವು ₹60, ಕಾಕಡಾ ₹80, ಮಲ್ಲಿಗೆ ₹100-₹120, ಡೇರೆ ಹೂವು 3ಕ್ಕೆ ₹50, ಗುಲಾಬಿ 1ಕ್ಕೆ ₹10, ಕಮಲ ಮತ್ತು ತಾವರೆ 1ಕ್ಕೆ ₹15 ಮಾರಾಟ ಮಾಡಲಾಗುತ್ತಿದೆ.ಮಾವಿನ ತಳಿರು ಜೋಡಿಗೆ ₹10, ಬಾಳೆಕಂಬ ಜೋಡಿಗೆ ₹80-₹100, ಕಬ್ಬು ಜೋಡಿಗೆ ₹80-₹100, ಕುಂಬಳ ಕಾಯಿ ₹60-80 ಜೋಳದದಂಟು, ಬಿಲ್ಪಪತ್ರೆ, ಬನ್ನಿ ₹20ಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಹೆಚ್ಚಿದ್ದರೂ ಪೂಜೆಗೆ ಬೇಕು ಎನ್ನುವ ಕಾರಣದಿಂದ ಜನ ಹೆಚ್ಚು ಚೌಕಾಸಿ ಮಾಡದೇ ಖರೀದಿಸುತ್ತಿದ್ದಾರೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಹೂವು-ಹಣ್ಣಿನ ಬೆಲೆ ಹೆಚ್ಚಾಗಿದೆ. ಆದರೂ ಪೂಜೆಗೆ ಬೇಕೇ ಬೇಕು ಎನ್ನುವ ಕಾರಣಕ್ಕೆ ಕೇಳಿದಷ್ಟು ಹಣ ನೀಡಿ ಖರೀದಿಸುವಂತಾಗಿದೆ. ಪ್ರತಿದಿನ ₹ 30ಗೆ ಮಾರು ಹೂವು ಸಿಗುತ್ತಿತ್ತು. ಆದರೆ, ಹಬ್ಬದ ನಿಮಿತ್ತ ₹80ರಿಂದ ₹100 ಮಾರುತ್ತಿದ್ದಾರೆ. ಹೀಗೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ.ವೀಣಾ ಗ್ರಾಹಕಿಹಬ್ಬದ ನಿಮಿತ್ತ ಎಪಿಎಂಸಿಯಲ್ಲೇ ಹೂವಿನ ಬೆಲೆ ಜಾಸ್ತಿ ಆಗಿದೆ. ಸಾಮಾನ್ಯ ದಿನಗಳಿಗಿಂತ ₹ 30ರಿಂದ ₹40 ಜಾಸ್ತಿ ಆಗಿದೆ. ಅಲ್ಲಿಂದ ತಂದು ನಾವು ಸ್ವಲ್ಪ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತೇವೆ. ಹಬ್ಬದ ಒಂದೆರಡು ದಿನ ಮಾತ್ರ ಈ ರೀತಿ ಬೆಲೆ ಇರುತ್ತದೆ. ಬಳಿಕ ಮತ್ತೆ ಯಥಾಸ್ಥಿತಿ ಇರುತ್ತದೆ.
ಯಲ್ಲವ್ವ ಬೆಳಗಾವಿ, ಹೂವು ವ್ಯಾಪಾರಸ್ಥೆ