ಗದಗ: ಹುಬ್ಬಳ್ಳಿಯಲ್ಲಿ ನಡೆದ ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು.
ಸಮಾವೇಶಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿ ಪ್ರಚಾರ ಮಾಡಿದ್ದರೂ, ಏಳರಿಂದ ಎಂಟು ಸಾವಿರ ಜನರು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರ ಸ್ಪಂದನೆ ಇರಲಿಲ್ಲ. ವೇದಿಕೆಯ ಮೇಲಿದ್ದವರು ಕೆಲವು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಯಾರೂ ಪ್ರಮುಖರು ಇರಲಿಲ್ಲ ಎಂದರು.
ಯಾವುದೇ ಸ್ಪಷ್ಟ ಸಂದೇಶವಿಲ್ಲ: ಹುಬ್ಬಳ್ಳಿ ಸಮಾವೇಶದಲ್ಲಿ ಯಾವುದೇ ಸ್ಪಷ್ಟ ಸಂದೇಶ ಅಥವಾ ಗುರಿ ಇರಲಿಲ್ಲ. ಯಾವ ಉದ್ದೇಶಕ್ಕಾಗಿ ಈ ಸಮಾವೇಶ ನಡೆಸಲಾಯಿತು ಎಂಬುದು ಜನರಿಗೆ ಅರ್ಥವಾಗಲಿಲ್ಲ. ಈ ಕಾರಣದಿಂದಲೇ ಇದು ಸಂಪೂರ್ಣವಾಗಿ ವಿಫಲವಾಗಿದೆ. ಇದು ಕೇವಲ ಪ್ರಾಥಮಿಕ ಹಂತ, ಮುಂದೆ ಇದಕ್ಕಿಂತ ದೊಡ್ಡದಾಗಿ ನಡೆಸುವುದಾಗಿ ಹೇಳುತ್ತಿದ್ದಾರೆ. ಅದು ಯಾವ ಉದ್ದೇಶಕ್ಕಾಗಿ ಎನ್ನುವುದು ಸ್ಪಷ್ಟತೆ ಇಲ್ಲ ಎಂದು ಶ್ರೀಗಳು ವಿಶ್ಲೇಷಿಸಿದರು.ಭಕ್ತರಿಗೆ ಧನ್ಯವಾದ: ನಾನು ಮತ್ತು ಕೂಡಲಸಂಗಮ ಸ್ವಾಮೀಜಿ ಹುಬ್ಬಳ್ಳಿ ಸಮಾವೇಶಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಿದ್ದೆವು. ನಮ್ಮ ಸೂಚನೆಯನ್ನು ಪಾಲಿಸಿದ ನಮ್ಮ ಭಕ್ತರಿಗೆ ಧನ್ಯವಾದಗಳು. ಈ ಮೂಲಕ, ಸಮಾವೇಶದ ವೈಫಲ್ಯಕ್ಕೆ ಜನಸ್ಪಂದನೆಯ ಕೊರತೆಯೇ ಮುಖ್ಯ ಕಾರಣ ಎಂದು ಶ್ರೀಗಳು ಪುನರುಚ್ಚರಿಸಿದರು.