ಹುಬ್ಬಳ್ಳಿ ಧಾರವಾಡ ಬಂದ್ ಕರೆ ಕಾಂಗ್ರೆಸ್‌ ಪ್ರಾಯೋಜಿತ: ಅರವಿಂದ ಬೆಲ್ಲದ

KannadaprabhaNewsNetwork |  
Published : Jan 08, 2025, 12:17 AM IST
ಅರವಿಂದ | Kannada Prabha

ಸಾರಾಂಶ

ದಲಿತ ಸಂಘಟನೆಗಳ ಹೆಸರಿನಲ್ಲಿ ಕಾಂಗ್ರೆಸ್ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ ಅವರೇ ಪ್ರಾಯೋಜಕತ್ವ ವಹಿಸಿದ್ದಾರೆ. ದಲಿತರನ್ನು ಮುಂದಿಟ್ಟುಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

ದಲಿತಪರ ಸಂಘಟನೆಗಳು ಜ. 9ರಂದು ನಡೆಸಲು ಉದ್ದೇಶಿಸಿರುವ ಹು-ಧಾ ಬಂದ್‌ ಕಾಂಗ್ರೆಸ್‌ ಪ್ರಾಯೋಜಿತವಾಗಿದೆ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ನಾವೂ ಕಾಂಗ್ರೆಸ್‌ ವಿರುದ್ಧ ಬಂದ್‌ಗೆ ಕರೆ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸಚಿವ ಅಮಿತ್‌ ಶಾ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವಿವಿಧ ದಲಿತಪರ ಸಂಘಟನೆಗಳು ಜ. 9ರಂದು ಹು-ಧಾ ಬಂದ್‌ಗೆ ಕರೆ ನೀಡಿರುವ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ದಲಿತ ಸಂಘಟನೆಗಳ ಹೆಸರಿನಲ್ಲಿ ಕಾಂಗ್ರೆಸ್ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ ಅವರೇ ಪ್ರಾಯೋಜಕತ್ವ ವಹಿಸಿದ್ದಾರೆ. ದಲಿತರನ್ನು ಮುಂದಿಟ್ಟುಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಯತ್ತ ಗಮನಹರಿಸಿ:

ಬಂದ್‌ನಿಂದ ನಿತ್ಯದ ದುಡಿಮೆ ಮೂಲಕ ಜೀವನ ಸಾಗಿಸುವ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತದೆ ಎಂದಿರುವ ಅವರು, ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಹಾಗೂ ಬಸ್ ಪ್ರಯಾಣ ದರ ಏರಿಕೆಯಿಂದ ಈಗಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಂದ್‌ಗೆ ಕರೆ ನೀಡಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ಕೂಡಲೇ ಬಂದ್ ಕರೆ ಹಿಂಪಡೆಯಬೇಕು. ಶಾಸಕ ಪ್ರಸಾದ ಅಬ್ಬಯ್ಯ ಅವರು ಅಂಬೇಡ್ಕ‌ರ್ ಅವರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಕಿವಿಮಾತು ಹೇಳಿದರು.

ಗೊಂದಲ ಸೃಷ್ಟಿ:

ಅಮಿತ್ ಶಾ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಜನರಲ್ಲಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ. ಅಂಬೇಡ್ಕ‌ರ್ ಅವರು ಜೀವಂತವಾಗಿದ್ದಾಗ ಇದೇ ಕಾಂಗ್ರೆಸ್ ನಾಯಕರು ಅವರನ್ನು ಹೀನಾಯವಾಗಿ ಕಂಡಿದ್ದರು. ಹೀಗಿದ್ದಾಗಲೂ ಕಾಂಗ್ರೆಸ್‌ ತಮ್ಮಿಂದಲೇ ಸಂವಿಧಾನ ರಚನೆಯಾಗಿದೆ ಎಂದು ದಲಿತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದರು.

ಸಿಎಂ ಕುಮ್ಮಕ್ಕು:

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, ಸಂಸತ್‌ನಲ್ಲಿ ಸಚಿವ ಅಮಿತ್ ಶಾ ಹೇಳಿರುವ ಹೇಳಿಕೆಯ

ವಿಡಿಯೋವನ್ನು ಎಡಿಟ್‌ ಮಾಡಿ ಅಂಬೇಡ್ಕರ್‌ ಅವರನ್ನು ಶಾ ಅವಮಾನಿಸಿದ್ದಾರೆಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಕುಮ್ಮಕ್ಕಿನಿಂದ ರಾಜ್ಯದ ವಿವಿಧೆಡೆ ದಲಿತ ಸಂಘಟನೆಗಳು ಹೋರಾಟ ನಡೆಸಿವೆ. ಇದೀಗ ಹು-ಧಾ ಬಂದ್ ಮಾಡಿಸಲು ಶಾಸಕ ಪ್ರಸಾದ ಅಬ್ಬಯ್ಯ ಅವರು ದಲಿತ ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.

ಪ್ರಕರಣ ದಾಖಲಿಸುತ್ತೇವೆ:

ಬಂದ್‌ಗೆ ನಮ್ಮದೇನೂ ಅಭ್ಯಂತರವಿಲ್ಲ. ಬಂದ್‌ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದಿರುವ ಕೌತಾಳ, ಬಂದ್‌ಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‌ ಸೂಚಿಸಿದ್ದರೂ ಮಹಾನಗರ ಪೊಲೀಸರು ಯಾವ ಆಧಾರದ ಮೇಲೆ ಬಂದ್‌ಗೆ ಅನುಮತಿ ನೀಡಿದ್ದಾರೆ?. ನಮ್ಮಲ್ಲೂ ದಲಿತ ಸಂಘಟನೆಗಳಿವೆ, ಹೋರಾಟದ ಮನೋಭಾವವೂ ಇದೆ ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.

ಆರ್‌ಎಸ್‌ಎಸ್‌ ಸಂವಿಧಾನ ಪ್ರತಿ ಸುಟ್ಟಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿಕೆ ನೀಡಿದ್ದು ಖಂಡನಾರ್ಹ. ಅವರ ಹೇಳಿಕೆ ವಿರುದ್ಧ ನಾವು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇವೆ. ಆರ್‌ಎಸ್‌ಎಸ್‌ನವರು ಸಂವಿಧಾನದ ಪ್ರತಿ ಎಲ್ಲಿ ಸುಟ್ಟಿದ್ದರು, ಯಾವಾಗ ಸುಟ್ಟಿದ್ದರು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್‌ ದುರ್ಗಮ್ಮ ಬಿಜವಾಡ, ಸಂತೋಷ ಅರಕೇರಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ ಸೇರಿದಂತೆ ಹಲವರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ