ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸುಮಾರು 15 ದಿನ ಬಿಡುವು ನೀಡಿದ್ದ ವರುಣ ಬುಧವಾರದಿಂದ ಮತ್ತೆ ಅಬ್ಬರಿಸುತ್ತಿದ್ದು, ಬುಧವಾರ ರಾತ್ರಿಯ ವರ್ಷಧಾರೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಅಕ್ಷರಶ: ನಲುಗಿ ಹೋಗಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, 15 ದಿನಗಳ ಹಿಂದೆ ಸುರಿದ ಮಳೆಗೆ ಬೆಂಗಳೂರಿನಲ್ಲಿ ಉಂಟಾದ ಜಲಪ್ರಳಯವನ್ನು ನಗರದ ಜಲವೃಷ್ಟಿ ನೆನಪಿಸಿತು. ಈ ಮಧ್ಯೆ, ಗುರುವಾರ ಸಂಜೆಯಿಂದ ಮತ್ತೆ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿದೆ.
ಈ ಮಧ್ಯೆ, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೊರವಲಯದ ಲಂಡ್ಯಾನ ಹಳ್ಳದಲ್ಲಿ ಮೂವರು ಕುರಿಗಾಹಿಗಳು ಮತ್ತು 100 ಕುರಿಗಳು ಸಿಲುಕಿದ್ದು. ಅವರೆಲ್ಲರನ್ನೂ ರಕ್ಷಿಸಲಾಗಿದೆ. ಇದೇ ವೇಳೆ, ನವಲಗುಂದ ತಾಲೂಕಿನ ಯಮನೂರಲ್ಲಿ ತೋಟದ ಮನೆಯಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಬೆಣ್ಣೆ ಹಳ್ಳ, ತುಪ್ಪರಿ ಹಳ್ಳಗಳು ತುಂಬಿ ಹರಿದಿದ್ದರಿಂದ ಧಾರವಾಡ, ಗದಗ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಕೆಲ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಣ್ಣೆಹಳ್ಳಕ್ಕೆ ಹೊಂದಿಕೊಂಡಿರುವ ಯಾವಗಲ್ಲ ಗ್ರಾಮ ಸೇತುವೆ, ಮೆಣಸಗಿ, ಕುರ್ಲಗೇರಿ, ಸುರಕೋಡ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹಳ್ಳದ ಪಕ್ಕದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಜಮೀನುಗಳು ಪ್ರವಾಹದ ನೀರು ನುಗ್ಗಿದ್ದು, ಬೆಳೆ ಹಾನಿ ಸಂಭವಿಸಿದೆ.ಉಗ್ರಾವತಾರ ತಾಳಿದ ವರುಣ:
ದ್ವಿಚಕ್ರವಾಹನಗಳು ಮುಂದೆ ಹೋಗಲು ಸಾಧ್ಯವಾಗದೇ ನಡು ರಸ್ತೆಯಲ್ಲೇ ನಿಂತಿದ್ದವು. ಕೆಲವೆಡೆಯಂತೂ ದ್ವಿಚಕ್ರವಾಹನ ಸವಾರರು ನೀರಲ್ಲೇ ಬಿದ್ದು ಗಾಯಗೊಂಡಿದ್ದರೆ, ದ್ವಿಚಕ್ರವಾಹನಗಳು ಮಾಲೀಕರನ್ನು ಬಿಟ್ಟು ತೇಲಾಡುತ್ತಾ ಮುಂದೆ ಹೋಗುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು.