ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಶ್ರದ್ಧಾ-ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆಗೆ ಮಹಾನಗರದ ಬಹುತೇಕ ಎಲ್ಲ ದೇವಸ್ಥಾನ ಹಾಗೂ ಮಠಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದು, ಶುಕ್ರವಾರ ವಿಶೇಷ ಪೂಜೆ ಹಾಗೂ ಶಿವರಾತ್ರಿ ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆಯಲಿವೆ.ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಮಾ. 3ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾ. 11ರ ವರೆಗೆ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಲಿವೆ. ಶ್ರೀಮಠದ ಕೈಲಾಸ ಮಂಟಪದಲ್ಲಿ ಮಾ. 11ರ ವರೆಗೆ ವಿವಿಧ ಮಠಗಳ ಮಠಾಧೀಶರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಮಾ. 8ರಂದು ಸಂಜೆ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಸಿದ್ದಾರೂಢರ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಆಹೋರಾತ್ರಿ ಜಾಗರಣೆ ನಡೆಯುವುದು. ಮಾ. 9ರಂದು ಪಲ್ಲಕ್ಕಿಯು ನಗರದಲ್ಲಿ ಸಂಚರಿಸಿದ ಬಳಿಕ ಸಂಜೆ 5.30ಕ್ಕೆ ಅದ್ಧೂರಿ ರಥೋತ್ಸವ ನಡೆಯಲಿದೆ.
ಇಲ್ಲಿನ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ, ಶಿವಪುರ ಕಾಲನಿಯ ಶಿವನ ಮೂರ್ತಿ ದೇಗುಲ, ಉಣಕಲ್ ಕ್ರಾಸ್‌ನ ರಾಮಲಿಂಗೇಶ್ವರ ದೇವಸ್ಥಾನ, ಸಿದ್ಧಾರೂಢ ಮಠ, ದಿವಟೆ ಗಲ್ಲಿಯ ಈಶ್ವರ ದೇವಸ್ಥಾನ ಸೇರಿದಂತೆ ನಗರದಲ್ಲಿ ಈಶ್ವರ ದೇವಸ್ಥಾನಗಳಲ್ಲಿ ಈಗಾಗಲೇ ನಿತ್ಯ ಬೆಳಗ್ಗೆ ಹಾಗೂ ಸಂಜೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಲವು ದೇವಸ್ಥಾನಗಳಲ್ಲಿ ಶುಕ್ರವಾರ ರಾತ್ರಿ ಜಾಗರಣೆ ಹಮ್ಮಿಕೊಳ್ಳಲಾಗಿದೆ.ಉಣಕಲ್ ಕ್ರಾಸ್‌ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವವು ಮಾ. 9ರಂದು ಸಂಭ್ರಮದಿಂದ ನಡೆಯಲಿದ್ದು, ಕಳೆದ ಮಾ. 3ರಿಂದ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಗೋಕುಲ ರಸ್ತೆಯ ಶಿವಪುರ ಕಾಲನಿಯಲ್ಲಿರುವ ಬೃಹದಾಕಾರದ ಶಿವನ ಮೂರ್ತಿಗೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಮಹಾನಗರದ ಜನರ ಆಕರ್ಷಣೆಯ ಕೇಂದ್ರವಾಗಿದೆ.
ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ದೇವಸ್ಥಾನ, ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಪೂಜೆ, ಹೋಮ ಹಾಗೂ ರುದ್ರಾಭಿಷೇಕ ನಡೆಯಲಿದೆ. ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಬಹುತೇಕ ಕಡೆಗಳಲ್ಲಿ ಮಹಿಳಾ ಮತ್ತು ಪುರುಷ ಮಂಡಳದಿಂದ ಶಿವರಾತ್ರಿ ಜಾಗರಣೆ ನಡೆಯಲಿದೆ.ಇಂದು ಸಾಮೂಹಿಕ ಶಿವಾಷ್ಟೋತ್ತರ ಪಠಣ:
ಹು-ಧಾ ಕುರುವಿನಶೆಟ್ಟಿ ಹಿತಾಭಿವೃದ್ಧಿ ಸಂಘ ಹಾಗೂ ಶ್ರೀಗುರು ನೀಕಂಠೇಶ್ವರ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ಸಹಯೋಗದಲ್ಲಿ ಮಾ. 8ರಂದು ಬೆಳಗ್ಗೆ 10ಗಂಟೆಗೆ ಇಲ್ಲಿನ ನೇಕಾರ ನಗರದ (ತಿಮ್ಮಸಾಗರ ಕ್ರಾಸ್) ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಉಚಿತ ಸಾಮೂಹಿಕ ಶಿವಾಷ್ಟೋತ್ತರ ಶತನಾಮಾವಳಿ ಪಠಣದೊಂದಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. 8ರಂದು ಬೆಳಗ್ಗೆ 10ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ.ಅಯೋಧ್ಯೆ ಮಂದಿರದ ದರ್ಶನ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಮೈದಾನದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಮಾದರಿಯಲ್ಲಿ ಶ್ರೀ ರಾಮೇಶ್ವರ ಶಿವಲಿಂಗದ ದಿವ್ಯ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಬೆಳಗ್ಗೆ ಪಂ. ರುದ್ರಮುನಿ ಶ್ರೀಗಳ ನೇತೃತ್ವದಲ್ಲಿ ಮಹಾಶಿವನ ಪೂಜಾ ಕಾರ್ಯಗಳು ಜರುಗಲಿವೆ. ಸಂಜೆ 6.30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಂಗೀತದೊಂದಿಗೆ ಶಿವನಾಮ ಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ನಾಡಿನ ಹೆಸರಾಂತ ವಿವಿಧ ಕಲಾವಿದರಿಂದ ಭಕ್ತಿ ಸಂಗೀತದ ರಸದೌತಣ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಯಿಂದ ಗಾಯಕ, ಯುವ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ತಂಡದಿಂದ ಶಿವ ಸಂಗೀತ ಹಾಗೂ ಹುಬ್ಬಳ್ಳಿಯ ಕಲಾಸುಜಯ ತಂಡದಿಂದ ಸಂಜೆ 7 ರಿಂದ 8ರ ವರೆಗೆ ಶಿವತಾಂಡವ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.