ಹುಬ್ಬಳ್ಳಿ:
ಎಸ್‌ಎಸ್‌ಕೆ ಸಮಾಜ ಹಿಂದಿನಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಈ ಸಮಾವೇಶದಲ್ಲಿ ಮತ ಕೇಳಲು ಬಂದಿಲ್ಲ. ಬದಲಾಗಿ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ. 100ರಷ್ಟು ವೋಟಿಂಗ್ ದಾಖಲಿಸಬೇಕೆಂಬ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಬೆಂಬಲಿತ ಎಸ್‌ಎಸ್‌ಕೆ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.ಎಸ್‌ಎಸ್‌ಕೆ ಸಮಾಜ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ದೇಶ ರಕ್ಷಣೆ ನಮ್ಮ ಆದ್ಯತೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಮೋದಿ ಅವರಿಗೆ ಸಮನಾದ ನಾಯಕರು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ ಎಂದರು.
ಕಾಂಗ್ರೆಸ್ಸಿನ ಕೆಲವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳುವ ಮೂಲಕ ಮುಸ್ಲಿಮರ ತುಷ್ಟೀಕರಣಕ್ಕೆ ಇಳಿದಿದ್ದಾರೆ. ಮೋದಿ ಸರ್ಕಾರದ ಪ್ರತಿ ಹೆಜ್ಜೆಯಲ್ಲಿ ಹುಳುಕು ಹುಡುಕುತ್ತಿದ್ದಾರೆ. 370ನೇ ಕಲಂ ಕಾಶ್ಮೀರ ವಿಷಯವನ್ನು ಕರ್ನಾಟಕದಲ್ಲಿ ಏಕೆ ಪ್ರಸ್ತಾಪಿಸುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಳುತ್ತಾರೆ. ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಹಿಂದೆ ನಿಂತವರೆಲ್ಲ ಮುಸ್ಲಿಂ ಲೀಗ್ ಧ್ವಜ ಹಿಡಿದುಕೊಂಡಿದ್ದಾರೆ. ದೇಶ ಒಂದು ಎನ್ನುವ ಭಾವನೆ ಇವರಲ್ಲಿ ಬರುತ್ತಲೇ ಇಲ್ಲ. ಇವರ ಮನಸ್ಥಿತಿ ಯಾವ ಕಡೆ ಹೊರಟಿದೆ? ಎಂದು ಪ್ರಶ್ನಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಈ ವೇಳೆ ಎಸ್‌ಎಸ್‌ಕೆ ಸಮಾಜದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಸಹಸ್ರಾರ್ಜುನ ಮಂದಿರ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದರು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಸೆಂಟ್ರಲ್ ಕ್ಷೇತ್ರದಿಂದ ಜೋಶಿ ಅವರಿಗೆ ಸುಮಾರು 75 ಸಾವಿರ ಮತಗಳ ಲೀಡ್ ನೀಡಬೇಕು. ಇದಕ್ಕಾಗಿ ಎಲ್ಲರೂ ಶ್ರಮ ವಹಿಸೋಣ ಎಂದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಎಸ್‌ಎಸ್‌ಕೆ ಸಮಾಜವು ಧರ್ಮ, ಆಚರಣೆ ಮುಂತಾದ ವಿಷಯದಲ್ಲಿ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಜೀವನ ನಡೆಸುತ್ತಿದೆ. ಹಿಂದುತ್ವಕ್ಕಾಗಿ ಸತತ ಹೋರಾಟ ಮಾಡುತ್ತ ಬಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷರೂ ಆದ ಮಾಜಿ ಶಾಸಕ ಅಶೋಕ ಕಾಟವೆ, ಜೋಶಿ ಅವರನ್ನು ಬೆಂಬಲಿಸುತ್ತ ಬಂದಿರುವ ಸಮಾಜದ ಜನರು ಈ ಬಾರಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಪಣ ತೊಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಎಸ್‌ಎಸ್‌ಕೆ ಸಮಾಜದ ಮುಖಂಡರಾದ ನಾಗೇಶ ಕಲಬುರ್ಗಿ, ಭಾಸ್ಕರ ಜಿತೂರಿ. ಡಾ. ಶಶಿ ಮೆಹರವಾಡೆ, ಯಲ್ಲಪ್ಪ, ಲಕ್ಷ್ಮಣ ದಲಬಂಜನ, ನೀಲಕಂಠಸಾ ಜಡಿ, ಗೋಪಾಲ ಬದ್ದಿ, ರಾಜು ಜರತಾರಘರ, ವೆಂಕಟೇಶ ಕಾಟವೆ, ಸೀಮಾ ಲದ್ವಾ, ಪುಷ್ಪಾ ಪವಾರ, ಇತರರು ಪಾಲ್ಗೊಂಡಿದ್ದರು.ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ ಪ್ರಾಸ್ತಾವಿಕ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ರಂಗಾ ಬದ್ದಿ ಸ್ವಾಗತಿಸಿದರು.