ಶ್ರೀರಾಮೋತ್ಸವಕ್ಕೆ ಸಜ್ಜಾದ ಹುಬ್ಬಳ್ಳಿಗರು

KannadaprabhaNewsNetwork |  
Published : Jan 22, 2024, 02:15 AM ISTUpdated : Jan 22, 2024, 02:16 AM IST
ಹುಬ್ಬಳ್ಳಿಯ ದಾಜಿಬಾನ್‌ ಪೇಟೆಯಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಿರುವುದು. | Kannada Prabha

ಸಾರಾಂಶ

ನಗರದ ತುಂಬೆಲ್ಲ ಕೇಸರಿ ಬಾವುಟ ರಾರಾಜಿಸುತ್ತಿವೆ. ಅರ್ಧ ಕಿಮೀ ಗಟ್ಟಲೆ ಕೇಸರಿ ಬಾವುಟ, ರಾಮನ ಬೃಹತ್‌ ಕಟೌಟ್‌, ಬಂಟಿಂಗ್ಸ್‌ ಬ್ಯಾನರ್‌ ಕಣ್ಣೀಗೆ ರಾಚುತ್ತವೆ. ಮಾರುತಿ, ಗಣೇಶ, ವೆಂಕಟೇಶ, ಶಿವಾಲಯಗಳು ಸಂಪೂರ್ಣ ಕೇಸರಿಮಯವಾಗಿವೆ.

ಹುಬ್ಬಳ್ಳಿ: ಸೋಮವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಕಣ್ತುಂಬಿಕೊಳ್ಳಲು ನಗರದಲ್ಲೂ ಸಿದ್ಧತೆ ಬಲು ಜೋರಾಗಿದೆ. ಹಲವೆಡೆ ನೇರ ವೀಕ್ಷಣೆಗೆ ವ್ಯವಸ್ಥೆ, ಮಠ, ಮಂದಿರಗಳಲ್ಲಿ ವಿಶೇಷ ಪೂಜೆ- ಪುನಸ್ಕಾರ, ಅನ್ನಸಂತರ್ಪಣೆ ನಡೆಯಲಿದೆ. ಇಡೀ ನಗರವೇ ಕೇಸರಮಯವಾಗಿದೆ.

500 ವರ್ಷಗಳ ಹೋರಾಟ, ಲಕ್ಷಾಂತರ ಕರಸೇವಕರ ಶ್ರಮ, ಪ್ರಾಣತ್ಯಾಗದ ಫಲವಾಗಿ ಈಗ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿದೆ. ಕಳೆದ 2-3 ದಿನಗಳಿಂದ ನಗರದಲ್ಲೂ ಸಿದ್ಧತೆ ನಡೆದಿದೆ.

ನಗರದ ತುಂಬೆಲ್ಲ ಕೇಸರಿ ಬಾವುಟ ರಾರಾಜಿಸುತ್ತಿವೆ. ಅರ್ಧ ಕಿಮೀ ಗಟ್ಟಲೆ ಕೇಸರಿ ಬಾವುಟ, ರಾಮನ ಬೃಹತ್‌ ಕಟೌಟ್‌, ಬಂಟಿಂಗ್ಸ್‌ ಬ್ಯಾನರ್‌ ಕಣ್ಣೀಗೆ ರಾಚುತ್ತವೆ. ಮಾರುತಿ, ಗಣೇಶ, ವೆಂಕಟೇಶ, ಶಿವಾಲಯಗಳು ಸಂಪೂರ್ಣ ಕೇಸರಿಮಯವಾಗಿವೆ. ದೇವಾಲಯಗಳಿಗೆ ಬಣ್ಣ ಹಚ್ಚಿ ಶೃಂಗರಿಸಲಾಗಿದೆ.

ದೀಪಾಲಂಕಾರಕ್ಕೆ ಸಿದ್ಧತೆ: ನಗರದ ಜನತೆ ಮನೆ ಮನೆಯ ಮುಂದೆಯೂ ಬಣ್ಣಬಣ್ಣದ ರಂಗೋಲಿ ಹಾಕುವ ಮೂಲಕ ಶ್ರೀರಾಮನ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಂಡ ಬಳಿಕ ಸಂಜೆ ದೀಪ ಬೆಳಗಿಸುವುದು, ಆಕಾಶಬುಟ್ಟಿ ಹಾರಿಬಿಡಲು ಜನತೆ ಸಿದ್ಧತೆ ನಡೆಸಿದ್ದಾರೆ.

ವಿದ್ಯುತ್‌ ದೀಪಗಳ ಅಲಂಕಾರ: ನಗರದ ಪ್ರಮುಖ ಜನನಿಬಿಡ ಪ್ರದೇಶವಾಗಿರುವ ದುರ್ಗದಬೈಲ್‌, ಕೊಪ್ಪಿಕರ ರಸ್ತೆ, ಬ್ರಾಡ್‌ವೇ, ಮೇದಾರ ಓಣಿ, ದೇಸಾಯಿ ವೃತ್ತ, ಮರಾಠಗಲ್ಲಿ, ಗಣೇಶಪೇಟೆ, ದಾಜಿಬಾನ ಪೇಟೆ, ತುಳಜಾಭವಾನಿ ವೃತ್ತ, ಕೇಶ್ವಾಪುರ, ಗೋಪನಕೊಪ್ಪ ವೃತ್ತ, ದೇವಾಂಗಪೇಟೆ ಸೇರಿದಂತೆ ನಗರದ ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಣಿಜ್ಯ ಮಳಿಗೆಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ರಾಮೋತ್ಸವ ಹಿನ್ನೆಲೆಯಲ್ಲಿ ಕೇಸರಿ ಬಣ್ಣದ ದ್ವಜಗಳ ಮಾರಾಟವೂ ಭರ್ಜರಿಯಾಗಿ ನಡೆದಿದೆ.

ಬಿಗಿ ಬಂದೋಬಸ್ತ್‌: ಶ್ರೀರಾಮಮಂದಿರ ರಾಮನ ಮೂರ್ತಿ ಪ್ರತಿಷ್ಠಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಕಮಿಷನರೇಟ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. 2ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಜೊತೆ 5 ಕೆಎಸ್‌ಆರ್‌ಪಿ ತುಕಡಿ ಹಾಗೂ 200 ಮಂದಿ ಗೃಹರಕ್ಷಕ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಪೋಸ್ಟ್‌ ಬಗ್ಗೆ ನಿಗಾ ಇಡಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದರು.

ಅತಿಸೂಕ್ಷ್ಮ ಪ್ರದೇಶಗಳಾದ ಬೆಂಡಿಗೇರಿ, ಕಸಬಾಪೇಟೆ, ಹಳೇಹುಬ್ಬಳ್ಳಿ, ಘಂಟಿಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಲ್ಲ ಧಾರ್ಮಿಕ ಕೇಂದ್ರದ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ದಿನದ 24 ಗಂಟೆಗಳ ಕಾಲ ಕರ್ತವ್ಯದಲ್ಲಿ ಇರುವಂತೆ ಪೊಲೀಸ್‌ ಕಮಿಷನರ್‌ ಸೂಚಿಸಿದ್ದಾರೆ. ಧಾರ್ಮಿಕ ಕೇಂದ್ರದ ಸುತ್ತಮುತ್ತ ಹಾಗೂ ವೃತ್ತದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರ ಚಲನ–ವಲನದ ಮೇಲೆ ಗಮನ ಇಡಲಾಗಿದೆ.

ರಾಮೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ, ಭಜರಂಗದಳ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಮೆರವಣಿಗೆ, ಶೋಭಾಯಾತ್ರೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿಸಿಕೊಂಡು ಸಂಸ್ಕೃತಿ ಬೆಳೆಸುವುದು ಅವಶ್ಯ: ಎ.ಸಿ. ವಾಲಿ ಗುರೂಜಿ
ಅಡಕೆ, ಮಾವು ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ