ಭ್ರಷ್ಟ ಬಿಬಿಎಂಪಿ ಅಧಿಕಾರಿ ಬಳಿ ಭಾರಿ ಕ್ಯಾಸಿನೋ ನಾಣ್ಯ, ಮಾರಕಾಸ್ತ್ರಗಳು, ಹುಲಿ ಉಗುರು ಪತ್ತೆ!

KannadaprabhaNewsNetwork | Updated : Jul 12 2024, 07:33 AM IST

ಸಾರಾಂಶ

ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನಿದ್ದೆಗೆಡಿಸಿರುವ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 10 ಜಿಲ್ಲೆಯಲ್ಲಿ 11 ಅಧಿಕಾರಿಗಳಿಗೆ ಸೇರಿದ 56 ಸ್ಥಳಗಳ ಮೇಲೆ ದಾಳಿ  

 ಬೆಂಗಳೂರು :  ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನಿದ್ದೆಗೆಡಿಸಿರುವ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 10 ಜಿಲ್ಲೆಯಲ್ಲಿ 11 ಅಧಿಕಾರಿಗಳಿಗೆ ಸೇರಿದ 56 ಸ್ಥಳಗಳ ಮೇಲೆ ದಾಳಿ ನಡೆಸಿ 45.63 ಲಕ್ಷ ರು. ನಗದು ಸೇರಿದಂತೆ 45.14 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಚಿತ್ರದುರ್ಗ, ಮಂಡ್ಯ, ಹಾಸನ, ಕಲಬುರಗಿ ಸೇರಿದಂತೆ 10 ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದೆ. 11 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 56 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಕ್ಯಾಸಿನೋ ನಾಣ್ಯ, ಹುಲಿ ಉಗುರು ಪತ್ತೆ:

ದಾಳಿಗೊಳಗಾದ ಅಧಿಕಾರಿಗಳ ಪೈಕಿ ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರ ಕಲಬುರಗಿ ನಿವಾಸದಲ್ಲಿ ನಗ-ನಾಣ್ಯದ ಜತೆಗೆ 2 ಸೂಟ್‌ಕೇಸ್‌ನಲ್ಲಿ ತುಂಬಿದ್ದ 583 ಕ್ಯಾಸಿನೋ ನಾಣ್ಯ, ಮಾರಕಾಸ್ತ್ರ ಹಾಗೂ ಹುಲಿ ಉಗುರು ಸಹ ಪತ್ತೆಯಾಗಿವೆ.

ಹುಲಿ ಉಗುರು ಇಟ್ಟುಕೊಳ್ಳುವುದು ಅಕ್ರಮ ಎಂದು ಕಾನೂನು ಹೇಳಿದರೂ ಬಸವರಾಜ ಮಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಲೋಕಾಯಕ್ತ ಪೊಲೀಸರು ಹುಲಿ ಉಗುರು ಪತ್ತೆಯಾದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಹುಲಿ ಉಗುರು ಪತ್ತೆ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಿದ್ದಾರೆ. ಇಷ್ಟೇ ಅಲ್ಲದೇ, ಮಾರಕಾಸ್ತ್ರಗಳು ಸಹ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಅಲ್ಲದೇ, 583 ಕ್ಯಾಸಿನೋ ಕಾಯಿನ್ಸ್‌ ಸಹ ಪತ್ತೆಯಾಗಿದೆ. ಎರಡು 2 ಸೂಟ್‌ಕೇಸ್‌ಗಳಲ್ಲಿ ಸಿಕ್ಕಿರುವ ಕ್ಯಾಸಿನೋ ಕಾಯಿನ್‌ಗಳ ಬೆಲೆ 13 ಲಕ್ಷ ರು.ಗಿಂತಲೂ ಅಧಿಕ ಎಂದು ಹೇಳಲಾಗಿದೆ. ಮನೆಯಲ್ಲಿ ಕ್ಯಾಸಿನೋ ಸದಸ್ಯತ್ವ ಕಾರ್ಡ್‌ ಸಹ ಪತ್ತೆಯಾಗಿದೆ. ಆರೋಪಿಯ 11 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, 15 ನಿವೇಶನಗಳು ಪತ್ತೆಯಾಗಿದೆ. ಒಟ್ಟು 3.31 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತರ ಅಧಿಕಾರಿಗಳ ಬಳಿ ಏನು ಪತ್ತೆ?:

ಇನ್ನುಳಿದಂತೆ, ಬೆಳಗಾವಿಯ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಶೇಖರ್‌ ಗೌಡ ಹನುಮಗೌಡ ಕುರಡಗಿ ಬಳಿ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟು 7.88 ಕೋಟಿ ರು. ಮೌಲ್ಯದ ಆಸ್ತಿ ಸಿಕ್ಕಿದೆ. ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಎಂ.ರವೀಂದ್ರ ಅವರ ಬಳಿ ಒಟ್ಟು 5.75 ಕೋಟಿ ರು. ಮೌಲ್ಯದ ಆಸ್ತಿ ಸಿಕ್ಕಿದೆ. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಕೆ.ಜಿ.ಜಗದೀಶ್‌ ಬಳಿ 5.26 ಕೋಟಿ ರು. ಮೌಲ್ಯದ ಆಸ್ತಿ ಲಭ್ಯವಾಗಿದೆ ಎಂದಿದ್ದಾರೆ.

ಇವರನ್ನು ಹೊರತುಪಡಿಸಿದರೆ, ಬೆಳಗಾವಿಯ ಪಂಚಾಯತ್‌ ರಾಜ್‌ ಸಹಾಯಕ ಕಾರ್ಯಪಾಲಕ ಡಿ.ಮಹೇವ್‌ ಐನ್ನೂರ್‌, ಚಿಕ್ಕಮಗಳೂರಿನ ಕೆಪಿಟಿಸಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ಡಿ.ಎಚ್‌.ಉಮೇಶ್‌, ಬೆಸ್ಕಾಂ ವಿಜಿಲೆನ್ಸ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ಎಸ್‌.ಪ್ರಭಾಕರ್‌, ಮಂಡ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶಿವರಾಜು, ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ವಿಜಯಣ್ಣ, ಮೈಸೂರಿನ ಕಬಿನಿ ಮತ್ತು ವರುಣ ನಾಲಾ ವೃತ್ತ ಅಧೀಕ್ಷಕ ಎಂಜಿನಿಯರ್‌ ಮಹೇಶ್‌, ಬೆಂಗಳೂರಿನ ದಾಸನಪುರ ಗ್ರಾಮಪಂಚಾಯಿತಿ ಕಾರ್ಯದರ್ಶಿ ಎನ್‌.ಎಂ.ಜಗದೀಶ್‌ ಅವರಿಗೆ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.

ಆರೋಪಿತರಿಗೆ ಸೇರಿದ ಸ್ಥಳಗಳ ಮೇಲೆ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಪತ್ತೆಯಾದ ಅಕ್ರಮದ ಆಸ್ತಿ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Share this article