ಖೊಟ್ಟಿ ದಾಖಲೆ ಕೊಟ್ಟು ಆಸ್ತಿ ಮಾರಾಟ ಯತ್ನ!

KannadaprabhaNewsNetwork | Published : Jul 12, 2024 1:42 AM

ಸಾರಾಂಶ

ಯಾರದ್ದೋ ಆಸ್ತಿಯನ್ನು ಇನ್ಯಾರಿಗೋ ಖರೀದಿ ಹಾಕುವುದು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರ ಆಸ್ತಿಯನ್ನು ಪರರಿಗೆ ಮಾರಾಟ ಮಾಡುವುದು ಕೇಳಿದ್ದೇವೆ. ಅಂತಹದ್ದೆ ಇಲ್ಲೊಂದು ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರದ್ದೋ ಆಸ್ತಿಯನ್ನು ಇನ್ಯಾರಿಗೋ ಖರೀದಿ ಹಾಕುವುದು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರ ಆಸ್ತಿಯನ್ನು ಪರರಿಗೆ ಮಾರಾಟ ಮಾಡುವುದು ಕೇಳಿದ್ದೇವೆ. ಅಂತಹದ್ದೆ ಇಲ್ಲೊಂದು ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವ ಲಕ್ಷಾಂತರ ರುಪಾಯಿ ಬೆಲೆ ಬಾಳುವ ನಿವೇಶನವೊಂದನ್ನು (ಸೈಟ್) ಖೊಟ್ಟಿ ದಾಖಲೆ ಸೃಷ್ಟಿಸಿ ಮಾರಲು ಹೊಡೆಯಲು ಯತ್ನಿಸಿದ ತಂಡವೊಂದು ಸಿಕ್ಕಿಬಿದ್ದಿದೆ. ಇನ್ನೊಬ್ಬರ ಹೆಸರಿನಲ್ಲಿದ್ದ ನಿವೇಶನ ಮಾರುತ್ತಿದ್ದ ಈ ತಂಡವನ್ನು ಅಧಿಕಾರಿಗಳೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಮಹಿಳೆಯೊಬ್ಬಳು ವಿಜಯಪುರದ ಕಾಳಿಕಾ ನಗರದಲ್ಲಿರುವ 30/50 ಅಳತೆಯ 1453 ಚದರ ಅಡಿಯ ಮಹಾಲ ಬಾಗಾಯತ ರಿಸ, ನಂ. 727/ಕ ಪ್ಲಾಟ್‌ ನಂ.37ರ ದಾಖಲೆಗಳನ್ನು ನಕಲಿ ಮಾಡಿ ಮೋಸದಿಂದ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ವಿಷಯ ಹೊರಗೆ ಬಂದಿದೆ.ಜು.10ರಂದು ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವ್ಯವಹಾರಕ್ಕಾಗಿ ಬಂದಾಗ, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ವೇಳೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಆಸ್ತಿ ಮಾಲೀಕ ಮನೀಶ ಮಾಣಿಕಚಂದ ಪಾರೇಖ ಎಂಬುವವರು ಆರೋಪಿತರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಆದರ್ಶನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಘಟನೆ ಬೆಳಕಿಗೆ ಬಂದಿದ್ದು ಹೇಗೆ?:

ಆಸ್ತಿ ಮಾರಾಟ ಹಾಗೂ ಖರೀದಿ ಸೇರಿದಂತೆ ಯಾವುದೇ ವ್ಯವಹಾರಕ್ಕೆ ಸಬ್ ರಿಜಿಸ್ಟರ್ ಕಚೇರಿಗೆ ಬಂದರೆ ಅಲ್ಲಿನ ದಸ್ತು ಬರಹಗಾರರು ಹಾಗೂ ಕಚೇರಿ ಸಿಬ್ಬಂದಿ ಆಸ್ತಿ ದಾಖಲೆಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಹಾಗೆಯೇ ಆಸ್ತಿ ಮಾರಾಟಕ್ಕೆಂದು ಮಹಿಳೆಯೊಬ್ಬಳು ಮಹಾನಗರ ಪಾಲಿಕೆ ಕೊಡುವ ಪಹಣಿ (ನಮೂನೆ ನಂ. 02) ತಂದಿದ್ದಾಳೆ. ಆಕೆ ತಂದ ಪಹಣಿಯಲ್ಲಿ ಪಿಐಡಿಃ 110868 ಎಂದು ನಮೂದು ಇರುವುದರಿಂದ ಅದನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಹಾಕಿದಾಗ ಈ ಪ್ರಾಪರ್ಟಿ ಐಡಿ ನಂ.110868 ಮನೀಶ ಪಾರೇಖ ಎಂಬುವವರ ಹೆಸರು ತೋರಿಸಿದೆ. ಈ ವೇಳೆ ಇನ್ನಷ್ಟು ಕೂಲಂಕಷವಾಗಿ ಪರಿಶೀಲಿಸಿದಾಗ ಮನೀಶ ಅವರ ಹೆಸರಿನಲ್ಲಿರುವ ಆಸ್ತಿಯ ಖೊಟ್ಟಿ ದಾಖಲೆಯನ್ನು ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿರುವುದು ಗೊತ್ತಾಗಿದೆ.ಮೂವರ ಬಂಧನ:

ಈ ಪ್ರಕರಣದಲ್ಲಿ ವಿಜಯಪುರದ ರಾವುಸಾಹೇಬ್‌ ಜಾಧವ, ಖಾಜಾಅಮೀನ್ ಅತ್ತಾರ, ರೆಹಮತುಲ್ಲಾ ಸಾತಾರಕರ ಅವರನ್ನು ಬಂಧಿಸಲಾಗಿದೆ. ಆಸ್ತಿಪತ್ರ ತಂದಿದ್ದ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಅಷ್ಟೆ ಅಲ್ಲದೆ ಇವರ ಹಿಂದೆ ದೊಡ್ಡ ಜಾಲವೇ ಇರಬಹುದು ಎಂದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಇಂತಹ ಹಲವು ಪ್ರಕರಣಗಳು ಕಂಡುಬರುತ್ತಿರುವುದರಿಂದ ಯಾವುದೇ ಆಸ್ತಿ ನೋಂದಣಿ ಮಾಡುವ ಮೊದಲು ಕಡ್ಡಾಯವಾಗಿ ಪಾಲಿಕೆ ವೆಬ್‌ಸೈಟ್‌ನಲ್ಲಿ ಆಸ್ತಿ ಸಂಖ್ಯೆಗಳನ್ನು ಪರಿಶೀಲನೆ ನಡೆಸಲೇಬೇಕು ಎಂದು ಎಲ್ಲ ದಸ್ತು ಬರಹಗಾರರಿಗೆ ಸೂಚನೆ ಕೊಡಲಾಗಿದೆ. ಯಾರ ಮೇಲಾದರೂ ಸಂಶಯ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಸಿಬ್ಬಂದಿಗೆ ಎಚ್ಚರಿಸಲಾಗಿದೆ.

ಆಸ್ತಿ ವ್ಯವಹಾರದ ವೇಳೆ ನಮ್ಮ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿ, ಮಹಾನಗರ ಪಾಲಿಕೆ ಕೊಡುವ ಪಿಐಡಿ ಸಂಖ್ಯೆಯೊಂದರ ನಮೂನೆ ನಂ.02ರಲ್ಲಿ ಖೊಟ್ಟಿ ದಾಖಲಾತಿ ಸೃಷ್ಟಿಸಿರುವುದು ನಮ್ಮ ಗಮನಕ್ಕೆ ಬಂತು. ತಕ್ಷಣ ನಾವು ಆದರ್ಶನಗರ ಠಾಣೆ ಪೊಲೀಸರಿಗೆ ತಿಳಿಸಿದಾಗ ಅವರು ಬಂದು ವಿಚಾರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

-ಬಿ.ಎಸ್.ಬಿರಾದಾರ,

ಹಿರಿಯ ಉಪನೋಂದಣಿ ಅಧಿಕಾರಿ, ವಿಜಯಪುರ.--------------ನಮ್ಮ ಹೆಸರಿನಲ್ಲಿರುವ ಪಾಲಿಕೆ ಆಸ್ತಿ ಗುರುತಿನ ಸಂಖ್ಯೆಯನ್ನು ಬಳಸಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಂದು ಬೇರೆಯವರು ವಂಚಿಸುತ್ತಿರುವ ಕುರಿತು ಸಬ್‌ರಿಜಿಸ್ಟರ್ ಕಚೇರಿಯಿಂದ ನಮ್ಮ ಗಮನಕ್ಕೆ ಬಂತು. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆಯೊಬ್ಬರು ಭಾಗಿಯಾಗಿದ್ದರು. ಮಹಿಳೆ ಹಾಗೂ ಇನ್ನುಳಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ.

-ಮಹಾವೀರ ಪಾರೇಖ್‌,
ಆಸ್ತಿ ಮಾಲೀಕ ಮನೀಶನ ಚಿಕ್ಕಪ್ಪ.

Share this article