ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಬಿಕ್ಕೋಡು ಹೋಬಳಿಯ ಬಕ್ರವಳ್ಳಿ, ಮೊಗಸಾವರ ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದ ಬೀಡು ಬಿಟ್ಟು ಕೃಷಿಕರ ಮತ್ತು ಕಾಫಿ ಬೆಳೆಗಾರರ ಬೆಳೆಗಳನ್ನು ಹಾನಿ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಬಕ್ರವಳ್ಳಿ ಗ್ರಾಮದ ನಂದೀಶ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಪೃಥ್ವಿ ಅವರ ತೋಟಗಳಿಗೆ ಭುವನೇಶ್ವರಿ ಹೆಸರಿನ ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ, ಮೆಣಸು ಹಾಗೂ ಗೇಟ್, ಪೈಪ್‌ಲೈನ್‌ಗಳನ್ನು ತುಳಿದು ಸಂಪೂರ್ಣ ಹಾನಿ ಮಾಡಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಬೆಳೆಗಾರರಾದ ನಂದೀಶ್, ಒಂದು ವಾರದಿಂದ ನಮ್ಮ ಭಾಗದಲ್ಲಿ ಸುಮಾರು 8 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಸಂಪೂರ್ಣವಾಗಿ ಬೆಳೆಯನ್ನು ನಾಶ ಮಾಡುತ್ತಿವೆ. ಕಾರ್ಮಿಕರು ಸಹ ತೋಟಕ್ಕೆ ಬರಲು ಹೆದರುತ್ತಿದ್ದು, ತೋಟದ ಕೆಲಸ ಮಾಡಿಸಲಾಗುತ್ತಿಲ್ಲ. ಇನ್ನು ಪ್ರತಿನಿತ್ಯ ಮಳೆ ಸುರಿಯುತ್ತಿರುವುದರಿಂದ ಕಾಫಿ ಬೆಳೆ ಕೊಳೆರೋಗ ಬಂದು ಕರಗುತ್ತಿದ್ದು ಅದಕ್ಕೆ ಔಷಧಿ ಸಿಂಪರಣೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದರು.ಬಕ್ರವಳ್ಳಿ ಗ್ರಾಮದ ನಂದೀಶ್ ಪೃಥ್ವಿ ಮಂಜೇಗೌಡ ಚೇತನ್, ಲೋಕೇಶ್, ಸುಜಿತ್, ದೇವರಾಜ್ ಶೆಟ್ಟಿ, ಪ್ರಕಾಶ್ ಹಾಗೂ ಸುತ್ತಮುತ್ತಲಿನ ಕೃಷಿಕರು ಮಾತನಾಡಿ, ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾನಿ ಮಾಡುತ್ತಿದ್ದು , ಅರಣ್ಯ ಇಲಾಖೆಯವರು ಒಂದು ತೋಟದಿಂದ ಬೇರೆ ತೋಟಕ್ಕೆ, ಒಂದು ಊರಿನಿಂದ ಇನ್ನೊಂದು ಊರಿಗೆ ಕಾಡಾನೆಗಳನ್ನು ಓಡಿಸುವುದನ್ನೇ ರೂಢಿ ಮಾಡಿ ಕೊಂಡಿದ್ದಾರೆ. ಅರಣ್ಯ ಇಲಾಖೆಯು ಕೃಷಿಕರ ಪಾಲಿಗೆ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ.
ಹಲವಾರು ಕೃಷಿಕರಿಗೆ ತಾನು ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಗಳಿಂದ ನಾಶವಾಗುತ್ತಿದ್ದರೂ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಕಾಡಾನೆಗಳ ದಾಂಧಲೆಗೆ ನಾಶವಾಗಿರುವ ಬೆಳೆಗೆ ವರ್ಷ ಕಳೆದರೂ ಪರಿಹಾರದ ಸುಳಿವೆ ಇಲ್ಲ. ಇದೇ ರೀತಿ ಮುಂದುವರಿದರೆ ಕೃಷಿಕರ ಭವಿಷ್ಯವೇನು.ಇನ್ನೆಷ್ಟು ಬೆಳೆ ಹಾನಿಯಾಗಬೇಕು? ಕೇವಲ ನಮ್ಮ ಕಣ್ಣೊರೆಸುವ ತಂತ್ರವನ್ನು ಮಾಡದೆ ನಮಗೆ ಶಾಶ್ವತವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.* ಹೇಳಿಕೆ-1
ನಮ್ಮ ಬಿಕ್ಕೋಡು ಹೋಬಳಿ ಭಾಗದಲ್ಲಿ ಒಂದು ವಾರದಿಂದ ಸುಮಾರು 38 ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ದಿನನಿತ್ಯ ಬೆಳೆಗಳನ್ನು ಹಾಳು ಮಾಡುತ್ತಿವೆ. ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದೇವೆ.-ಅದ್ಧೂರಿ ಕುಮಾರ್, ಕಾಫಿ ಬೆಳೆಗಾರರ ಸಂಘದ ತಾ.ಅಧ್ಯಕ್ಷ
* ಹೇಳಿಕೆ- 2ಅರಣ್ಯ ಇಲಾಖೆಯವರು ಕಾಡಾನೆಗಳನ್ನು ನೀವು ಓಡಿಸಬೇಡಿ ಅವುಗಳು ತಾವಾಗಿಯೇ ವಾಪಸ್ ಹೋಗುತ್ತವೆ ಎಂದು ನಮಗೆ ಹೇಳುತ್ತಿರುವುದರಿಂದ ನಾವು ಪಟಾಕಿ ಹೊಡೆಯುವುದಾಗಲಿ ಏನನ್ನೂ ಮಾಡುತ್ತಿಲ್ಲ. ಆದರೂ ಸಹ ಸ್ಥಳದಲ್ಲಿ ಬೀಡು ಬಿಟ್ಟು ಬೆಳೆಯನ್ನು ಹಾಳು ಮಾಡುತ್ತಿವೆ. ದಯಮಾಡಿ ಅರಣ್ಯ ಇಲಾಖೆಯವರು ಇಲ್ಲಿರುವಂತಹ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು.ನಂದೀಶ್, ಬೆಳೆಗಾರ