₹18.1 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದಿ ಎತ್ತು!

KannadaprabhaNewsNetwork | Published : Jul 3, 2024 12:16 AM

ಸಾರಾಂಶ

ಇಂದಿನ ಆಧುನಿಕ ಕಾಲದಲ್ಲಿ ಜಾನುವಾರುಗಳ ಮೌಲ್ಯ ಕುಸಿಯುತ್ತಿವೆ. ಅವುಗಳನ್ನು ಕೇಳುವವರು ಯಾರು ಇಲ್ಲ ಎಂಬ ಪರಿಸ್ಥಿತಿಯಲ್ಲಿ ಇಲ್ಲೊಂದು ಎತ್ತು ಬರೋಬ್ಬರಿ ₹18.1 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಮಾಡಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಇಂದಿನ ಆಧುನಿಕ ಕಾಲದಲ್ಲಿ ಜಾನುವಾರುಗಳ ಮೌಲ್ಯ ಕುಸಿಯುತ್ತಿವೆ. ಅವುಗಳನ್ನು ಕೇಳುವವರು ಯಾರು ಇಲ್ಲ ಎಂಬ ಪರಿಸ್ಥಿತಿಯಲ್ಲಿ ಇಲ್ಲೊಂದು ಎತ್ತು ಬರೋಬ್ಬರಿ ₹18.1 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಮಾಡಿದೆ.

ಹೌದು, ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಗ್ರಾಮದ ಗುರುಸಿದ್ದನಗೌಡ ಪಾಟೀಲ್‌ ಎಂಬುವರ 6 ವರ್ಷದ ಎತ್ತು ಬರೊಬ್ಬರಿ 18 ಲಕ್ಷ 1 ಸಾವಿರ ರುಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ರೈತ ಸದಾಶಿವ ಡಾಂಗೆ ₹18 ಲಕ್ಷಗೆ ಎತ್ತು ಖರೀದಿ ಮಾಡಿದ್ದಾರೆ. ಎತ್ತಿನ ಬಗ್ಗೆ ಮೊದಲೇ ತಿಳಿದಿದ್ದ ಸದಾಶಿವ ಡಾಂಗೆ ಹಠಕ್ಕೆ ಬಿದ್ದು 18 ಲಕ್ಷ 1 ಸಾವಿರ ರುಪಾಯಿಗೆ ಎತ್ತನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಬಬಲಾದಿ ಮಠಕ್ಕೆ ತಂದು ಸಿದ್ದು ಮುತ್ಯಾ ಅವರ ಕಡೆಯಿಂದ ಪೂಜೆ ಮಾಡಿಸಿ ಊರಿಗೆ ಕೊಂಡೊಯ್ದಿದ್ದಾರೆ.

ಲಕ್ಷಕ್ಕೆ ಸಿಕ್ಕಿತ್ತು ಎತ್ತು:

ಇದೀಗ ₹18 ಲಕ್ಷಕ್ಕೆ ದಾಖಲೆ ದರಕ್ಕೆ ಮಾರಾಟವಾಗಿರುವ ಎತ್ತಿಗೆ ಬಬಲಾದಿಯ ಸಿದ್ದನಗೌಡ ಪಾಟೀಲ್‌ ಪ್ರೀತಿಯಿಂದ ಹಿಂದೂಸ್ತಾನ್‌ ಹೆಚ್.ಪಿ ಎಂದು ಹೆಸರಿಟ್ಟಿದ್ದರು. ಅಲ್ಲದೇ ಮನೆ ಮಗನಂತೆ ಎತ್ತನ್ನು ಸಾಕಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಗುರುಸಿದ್ದನಗೌಡ 1 ಲಕ್ಷ 5 ಸಾವಿರ ರೂಪಾಯಿಗೆ ಜಿಲ್ಲೆಯ ಕೊರ್ತಿ ಕೊಲ್ಹಾರದಿಂದ ಖರೀದಿ ಮಾಡಿ ತಂದಿದ್ದರು. ಎತ್ತು ಖರೀದಿ ಮಾಡಿ ತಂದ ಮೂರೇ ವರ್ಷದಲ್ಲಿ ಎತ್ತು ₹18 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.

ಕಣ್ಮನ ಸೆಳೆಯುವ ಎತ್ತಿನ ಲಕ್ಷಣ:

ಶುಭ್ರ ಹಾಗೂ ಶ್ವೇತವರ್ಣವುಳ್ಳ ಈ ಎತ್ತು ಐದೂವರೆ ಅಡಿ ಎತ್ತರ ಹಾಗೂ ಆರು ಅಡಿ ಉದ್ದವಿದೆ. ಉದ್ದನೇ ಹಣೆ, ನೇರ ಕೋಡು, ಎಂಟು ಹಲ್ಲು ಕಟ್ಟಿದ್ದು, ಜಬರ್ದಸ್ತ್‌ ಮೈಕಟ್ಟಿನ ಈ ಎತ್ತು ಶಕ್ತಿಯಲ್ಲೂ ತನಗೆ ಸರಿಸಾಟಿಯೇ ಇಲ್ಲ ಎಂಬಂತೆ ಇದ್ದು, ಭಲೇ ಬಸವ ಎನಿಸಿಕೊಂಡಿದೆ.

ತೆರೆಬಂಡಿ ಸ್ಪರ್ಧೆಯ ಚಾಂಪಿಯನ್‌:

ಹಿಂದೂಸ್ತಾನ್‌ ಹೆಚ್‌ಪಿ ಎತ್ತು ಇಷ್ಟೊಂದು ಬೆಲೆಗೆ ಮಾರಾಟವಾಗಲು ಮುಖ್ಯ ಕಾರಣ ತೆರೆಬಂಡೆ ಸ್ಪರ್ಧೆಯಲ್ಲಿ ಭಾರೀ ಸಾಧನೆ ಮಾಡಿದ್ದು. ಮೂರು ವರ್ಷಗಳ ಹಿಂದೆ ಎತ್ತು ಖರೀದಿ ಮಾಡಿ ತಂದಿದ್ದ ಗುರುಸಿದ್ದನಗೌಡ 1 ತಿಂಗಳು ಟ್ರೈನಿಂಗ್‌ ಕೊಟ್ಟು ತೆರೆಬಂಡೆ ಸ್ಪರ್ಧೆಗಳಿಗೆ ಕೊಂಡೊಯ್ಯುತ್ತಿದ್ದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ನಡೆದಿದ್ದ ತೆರೆಬಂಡೆ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿ 2ನೇ ಸ್ಥಾನ ಪಡೆದು ₹20 ಸಾವಿರ ಬಹುಮಾನ ಪಡೆದಿತ್ತು. ಬಳಿಕ ನಡೆದ ಹಲವಾರು ತೆರೆಬಂಡಿ ಸ್ಪರ್ಧೆಗಳಲ್ಲಿ ಸಾಲು-ಸಾಲು ಬಹುಮಾನಗಳನ್ನು ಗೆದ್ದು ಎಲ್ಲಗ ಗಮನ ಸೆಳೆದಿದೆ.

---

ಬಾಕ್ಸ್‌

₹20 ಲಕ್ಷ ಬೆಲೆ ಬಹುಮಾನ ಗೆದ್ದಿರುವ ಎತ್ತು:

ರಾಜ್ಯ-ಹೊರ ರಾಜ್ಯಗಳಲ್ಲಿ ನಡೆದ ತೆರೆ ಬಂಡೆ ಸ್ಪರ್ಧೆಗಳಲ್ಲಿ ಎತ್ತು ತನ್ನದೆಯಾದ ಛಾಪು ಮೂಡಿಸಿದೆ. ರೇಸ್‌ನಲ್ಲಿ ಹಿಂದೂಸ್ತಾನ್‌ ಹೆಚ್.ಪಿ ಎತ್ತು ಬಂದಿದೆ ಎಂದರೆ ಉಳಿದ ಎತ್ತುಗಳ ಮಾಲೀಕರಲ್ಲಿ ಗಾಬರಿಯಾಗುವಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಿತ್ತು. ನೆರೆಯ ಬಾಗಲಕೋಟೆ, ಯಾದಗಿರಿ, ಬೆಳಗಾವಿ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ತೆರೆಬಂಡೆ ಸ್ಪರ್ಧೆಯಲ್ಲಿ ಈ ಎತ್ತು ಪಾಲ್ಗೊಂಡು ಬಹುಮಾನ ಗೆದ್ದಿದೆ. ಈವರೆಗೆ ಮೂರು ಬೈಕ್‌, 40 ಗ್ರಾಂ ಚಿನ್ನ, 2 ಬೆಳ್ಳಿ ಗಧೆ, 10 ಲಕ್ಷಕ್ಕೂ ಅಧಿಕ ಹಣವನ್ನು ಬಹುಮಾನದ ರೂಪದಲ್ಲಿ ಗೆದ್ದು ತಂದಿದೆ.

----

ಕೋಟ್

ಈ ಮೊದಲು ನಮ್ಮ ಮನೆಯಲ್ಲಿ ಎತ್ತುಗಳು ಇರಲಿಲ್ಲ. ಈ ಎತ್ತು ತಂದ ಮೇಲೆ ಇದರಂತಹ ಇನ್ನೂ 5 ಎತ್ತುಗಳು ಮನೆಯಲ್ಲಿ ಬೆಳೆದು ನಿಂತಿವೆ. ಅಪಾರ ಬಹುಮಾನ, ನಗದು, ಚಿನ್ನದ ಜೊತೆಗೆ ನಮಗೆ ಪ್ರೀತಿಯನ್ನೂ ಎತ್ತು ನಮಗೆ ನೀಡಿದೆ. ಈ ಎತ್ತಿನಿಂದ ಬೇರೆ ರೈತರಿಗೂ ಒಳ್ಳೆಯದಾಗಲಿ, ಬೇರೆಯವರೂ ಬೆಳೆಯಲಿ ಎನ್ನುವ ಕಾರಣಕ್ಕೆ ನಮ್ಮ ಪರಿಚಯಸ್ಥರಾದ ಡಾಂಗೆ ಅವರಿಗೆ ಸ್ವಇಚ್ಛೆಯಿಂದಲೇ ಪ್ರೀತಿಯ ಎತ್ತನ್ನು ಮಾರಾಟ ಮಾಡಿದ್ದೇನೆ.

-ಗುರುಸಿದ್ದನಗೌಡ ಪಾಟೀಲ್‌, ಎತ್ತು ಮಾರಾಟ ಮಾಡಿದವರು.

Share this article