ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!

KannadaprabhaNewsNetwork |  
Published : Mar 31, 2026, 01:30 AM IST
೩೦ಕೆಎಂಎನ್‌ಡಿ-೨ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಗೃಹ ಬಳಕೆ ಅಡುಗೆ ಅನಿಲಕ್ಕೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳ ಪೂರೈಕೆಗೆ ನಿಯಂತ್ರಣ ವಿಧಿಸಿರುವುದರಿಂದ ಹೆಚ್ಚಿನ ದರ ಕೊಟ್ಟು ಗೃಹ ಬಳಕೆ ಸಿಲಿಂಡರ್‌ಗಳನ್ನು ಖರೀದಿಸಲು ಹೋಟೆಲ್, ಬೇಕರಿ, ಟೀ-ಕಾಫೀ ಅಂಗಡಿ ಮಾಲೀಕರು ಮುಗಿಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಗೃಹ ಬಳಕೆ ಅಡುಗೆ ಅನಿಲಕ್ಕೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳ ಪೂರೈಕೆಗೆ ನಿಯಂತ್ರಣ ವಿಧಿಸಿರುವುದರಿಂದ ಹೆಚ್ಚಿನ ದರ ಕೊಟ್ಟು ಗೃಹ ಬಳಕೆ ಸಿಲಿಂಡರ್‌ಗಳನ್ನು ಖರೀದಿಸಲು ಹೋಟೆಲ್, ಬೇಕರಿ, ಟೀ-ಕಾಫೀ ಅಂಗಡಿ ಮಾಲೀಕರು ಮುಗಿಬಿದ್ದಿದ್ದಾರೆ.

ಗೃಹ ಬಳಕೆ ಸಿಲಿಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆ:

ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್‌ಗಳನ್ನು ನೀಡುತ್ತಿದ್ದು ಈಗ ಹೊಸದೇನಲ್ಲ. ಅದು ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ೯೧೭ ರು.ನ ಅಡುಗೆ ಅನಿಲ ಸಿಲಿಂಡರ್‌ನ್ನು ಹೋಟೆಲ್, ಬೇಕರಿ ಅಥವಾ ಇನ್ನಿತರ ವಾಣಿಜ್ಯ ಉದ್ದೇಶದವರಿಗೆ ನೀಡಿ ಅವರಿಂದ ೧೨೦೦ ರಿಂದ ೧೩೦೦ ರು.ವರೆಗೆ ಹಣ ಪಡೆಯುತ್ತಿದ್ದರು. ಈಗ ಅದರ ಪ್ರಮಾಣ ಕಡಿಮೆಯಾಗಿದ್ದರೂ ಸಿಲಿಂಡರ್ ಬಳಕೆ ಕಡಿಮೆ ಇರುವ ಹಾಗೂ ಡಬಲ್ ಸಿಲಿಂಡರ್ ಹೊಂದಿರುವ ಗ್ರಾಹಕರು ಹೆಚ್ಚಿನ ದರಕ್ಕೆ ಒಂದು ಸಿಲಿಂಡರ್ ಕೊಟ್ಟು ಒಂದೇ ಒಂದು ಸಿಲಿಂಡರ್‌ನಲ್ಲಿ ಅಡುಗೆ ಮಾಡಿ ಲಾಭ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಗೃಹ ಬಳಕೆ ಸಿಲಿಂಡರ್‌ಗಳ ಬುಕ್ಕಿಂಗ್ ಅವಧಿಯನ್ನು ಗ್ರಾಮಾಂತರ ಪ್ರದೇಶಕ್ಕೆ ೪೫ ದಿನ ಹಾಗೂ ನಗರ ಪ್ರದೇಶಕ್ಕೆ ೨೫ ದಿನಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲೂ ಗೃಹ ಬಳಕೆಗೆ ಸಿಗುತ್ತಿರುವ ಅಡುಗೆ ಅನಿಲ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಬುಕ್ಕಿಂಗ್ ಮಾಡಿದವರ ಕಣ್ತಪ್ಪಿಸಿ ಮಾರಾಟ:

ಇದೀಗ ಅಡುಗೆ ಅನಿಲ ಬಿಕ್ಕಟ್ಟಿನ ಸಮಯದಲ್ಲೂ ವಾಮ ಮಾರ್ಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್‌ಗಳು ಮಾರಾಟವಾಗುತ್ತಿವೆ. ಒಂದು ಸಿಲಿಂಡರ್‌ಗೆ ೧೫೦೦ ರು.ವರೆಗೆ ನೀಡಿ ಹೋಟೆಲ್, ಬೇಕರಿ, ಆಟೋ ಮಾಲೀಕರು ಖರೀದಿಸುತ್ತಿದ್ದಾರೆ. ನಿತ್ಯ ನಾಲ್ಕೈದು ಸಿಲಿಂಡರ್‌ಗಳ ಅವಶ್ಯಕತೆ ಇರುವ ಹೋಟೆಲ್ ಮಾಲೀಕರು ಸದ್ಯಕ್ಕೆ ಸಿಗುತ್ತಿರುವ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶದತ್ತ ಸೆಳೆಯುವ ಪ್ರಯತ್ನ ನಡೆಸಿದ್ದು ಅದರಲ್ಲಿ ಸಫಲತೆಯನ್ನೂ ಕಂಡಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳು ಗ್ರಾಹಕರ ಹೆಸರಿನಲ್ಲಿ ವಾಣಿಜ್ಯೋದ್ಯಮಿಗಳ ಕೈಸೇರುತ್ತಿದೆ. ಇದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಸಿಲಿಂಡರ್ ಬುಕ್ ಮಾಡಿದ ಗ್ರಾಹಕರನ್ನೇ ಯಾಮಾರಿಸಿ ವಾಣಿಜ್ಯ ಉದ್ದೇಶಗಳಿಗೆ ನೀಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿವೆ.

ಗ್ರಾಮೀಣ ಭಾಗದ ಗ್ರಾಹಕರೊಬ್ಬರು ಮಾ.೧೭ರಂದು ಸಿಲಿಂಡರ್ ಬುಕ್ ಮಾಡಿದ್ದು, ಮಾ.೨೦ಕ್ಕೆ ಅಡುಗೆ ಅನಿಲ ಸರಬರಾಜಿನ ಸಂದೇಶ ಬರುತ್ತದೆ. ಡೆಲಿವೆರಿ ಕೋಡ್, ಒಟಿಪಿ ನೀಡದಿದ್ದರೂ ಸಹ ಅಡುಗೆ ಅನಿಲ ಸರಬರಾಜಾಗಿರುವ ಬಗ್ಗೆ ಮಾ.೨೧ಕ್ಕೆ ಅಡುಗೆ ಅನಿಲ ಬುಕ್ ಮಾಡಿದ ಗ್ರಾಹಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಹಾಗಾದರೆ ಓಟಿಪಿ, ಡೆಲಿವರಿ ಕೋಡ್‌ನ್ನು ಏಜೆನ್ಸಿಯವರಿಗೆ ನೀಡಿದವರು ಯಾರು. ಈ ಬಗ್ಗೆ ತಿಳಿಯಲು ಗ್ಯಾಸ್ ಏಜೆನ್ಸಿಯವರಿಗೆ ಕರೆ ಮಾಡಿದರೆ ನಮಗೆ ಗೊತ್ತಿಲ್ಲವೆಂಬ ಸಿದ್ಧ ಉತ್ತರ ನೀಡಿದ್ದಾರೆ.

ಬಾಗಿಲು ಮುಚ್ಚಿ ಗ್ಯಾಸ್ ಏಜೆನ್ಸಿಗಳ ಕೆಲಸ:

ಅಡುಗೆ ಅನಿಲ ಪೂರೈಕೆಯಲ್ಲಾಗಿರುವ ವ್ಯತ್ಯಯದಿಂದ ಗ್ರಾಹಕರಿಗೆ ಉತ್ತರಿಸಲಾಗದೆ ಗ್ಯಾಸ್ ಏಜೆನ್ಸಿಗಳ ಸಿಬ್ಬಂದಿ ಬಾಗಿಲು ಮುಚ್ಚಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ಯಾಸ್ ಬುಕ್ಕಿಂಗ್ ಮಾಡಿದವರಿಗೆ ನಿಗದಿತ ಅವಧಿ ಮುಗಿದರೂ ಅಡುಗೆ ಅನಿಲ ಪೂರೈಕೆಯಾಗದಿರುವ ಬಗ್ಗೆ ಕೇಳಲು ಬರುವ ಗ್ರಾಹಕರಿಂದ ತಪ್ಪಿಸಿಕೊಳ್ಳಲು ಏಜೆನ್ಸಿಗಳ ನೌಕರರು-ಸಿಬ್ಬಂದಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಹೊರಗಡೆ ಒಬ್ಬ ಸಿಬ್ಬಂದಿಯನ್ನು ನಿಲ್ಲಿಸಿ ಗ್ಯಾಸ್ ಸಮಸ್ಯೆ ಹೇಳಿಕೊಂಡು ಬರುವವರಿಗೆ ಅಂಗಡಿಯಲ್ಲಿ ಯಾರೂ ಇಲ್ಲವೆಂದು ಹೇಳಿ ಕಳುಹಿಸುತ್ತಿದರೆ, ಇತರೆ ಉದ್ದೇಶಗಳಿಗೆ ಬರುವವರನ್ನು ಮಾತ್ರ ಪ್ರವೇಶಾವಕಾಶ ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಟೋ ದರ, ಕಾಫೀ-ಟೀ, ತಿಂಡಿ ದರ ಏರಿಕೆ:

ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನಲೆಯಲ್ಲಿ ಎಲ್‌ಪಿಜಿ ಆಟೋ ದರ, ಕೆಲವು ಹೋಟೆಲ್‌ಗಳಲ್ಲಿ ಕಾಫೀ-ಟೀ, ತಿಂಡಿ, ಊಟದ ದರದಲ್ಲಿ ಕೊಂಚ ಏರಿಕೆ ಮಾಡಲಾಗಿದೆ. ಎಲ್‌ಪಿಜಿ ಆಟೋಗಳು ನಿಗದಿತ ದರಕ್ಕಿಂತ ೧೦ ರು. ಹೆಚ್ಚು ಪಡೆದರೆ, ಕಾಫೀ-ಟೀ ದರದಲ್ಲಿ ಕನಿಷ್ಠ ೫ ರು., ಊಟ-ತಿಂಡಿ ದರವನ್ನು ಹೆಚ್ಚಿಸಿದ್ದಾರೆ. ಕೆಲವು ಹೋಟೆಲ್‌ನವರು ದರ ಹೆಚ್ಚಿಸದಿದ್ದರೂ ಮೊದಲು ನೀಡುತ್ತಿದ್ದ ತಿಂಡಿ-ಊಟದ ಪ್ರಮಾಣವನ್ನು ಕಡಿಮೆ ಮಾಡಿರುವುದು ಕಂಡುಬರುತ್ತಿದೆ.

ಕೆಲವು ಹೋಟೆಲ್ ಹಾಗೂ ಬೇಕರಿ ಅಂಗಡಿ ಮಾಲೀಕರು ಅಡುಗೆ ಅನಿಲಕ್ಕೇ ಕಾಯದೆ ಕಟ್ಟಿಗೆ ಒಲೆಯಲ್ಲಿ ಅಡುಗೆ, ಬೇಕರಿ ತಿಂಡಿ-ತಿನಿಸುಗಳನ್ನು ತಯಾರಿಸಲು ಆರಂಭಿಸಿದ್ದಾರೆ. ಮರದ ಹೊಟ್ಟು, ಕಟ್ಟಿಗೆಯನ್ನು ಬಳಸಿ ಪರಿಸ್ಥಿತಿಯನ್ನು ಹತೋಟಿಯಲ್ಲಿಡುವ ಪ್ರಯತ್ನದಲ್ಲಿ ಮುಂದುವರೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ