ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ನೇರಳೆ ಹಣ್ಣುಗಳಿಗೆ ಉತ್ತಮ ಬೇಡಿಕೆ ಪರಿಣಾಮ ಬೆಲೆ ಹೆಚ್ಚಳವಾಗಿದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಗೆ ಮುಂದಾಗಿದ್ದಾರೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ನೇರಳೆ ಹಣ್ಣುಗಳಿಗೆ ಉತ್ತಮ ಬೇಡಿಕೆ ಪರಿಣಾಮ ಬೆಲೆ ಹೆಚ್ಚಳವಾಗಿದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಗೆ ಮುಂದಾಗಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮನಾಳ, ಹನುಮಸಾಗರ, ತಾವರಗೇರಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೇರಳೆ ಹಣ್ಣು ವ್ಯಾಪಾರ ಜೋರಾಗಿ ನಡೆದಿದ್ದು, ಕಾಡಿನಲ್ಲೆ ಬೆಳೆಯುವ ನೇರಳೆ ಅಚ್ಚುಮೆಚ್ಚಿನ ಹಣ್ಣಾಗಿದೆ. ಈ ನೇರಳೆ ಹಣ್ಣು ಔಷಧ ಗುಣ ಹೊಂದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ:ನೇರಳೆ ಹಣ್ಣಿನಿಂದ ಹೃದಯ ಕಾಯಿಲೆ, ರೋಗ ನಿರೋಧಕ ಶಕ್ತಿ, ನಿರಂತರ ಭೇದಿ ನಿಯಂತ್ರಣಕ್ಕೆ ಬರುತ್ತದೆ. ಕ್ಯಾನ್ಸರ್ ರೋಗಾಣು ನಾಶಪಡಿಸುವ ಶಕ್ತಿ ಹೊಂದಿದೆ. ಯಕೃತ್ತು ಸ್ವಚ್ಛಗೊಳ್ಳುತ್ತದೆ. ಗಾಯ, ಅಸ್ತಮಾ ಕಾಯಿಲೆಗೆ ರಾಮಬಾಣವಾಗಿದೆ. ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಂ ಇರುತ್ತದೆ. ಅಜೀರ್ಣ, ಚಂಚಲತೆ, ಕಿಡ್ನಿ ಸಮಸ್ಯೆ ನಿವಾರಣೆಗೂ ನೇರಳೆ ಹಣ್ಣು ದಿವ್ಯ ಔಷಧವಾಗಿದೆ.
ಔಷಧೀಯ ಗುಣ
ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಜೀರ್ಣಶಕ್ತಿ ವೃದ್ಧಿಸುವ ನೇರಳೆ ಯಥೇಚ್ಛವಾಗಿ ಔಷಧೀಯ ಗುಣ ಹೊಂದಿದೆ. ಈ ಹಣ್ಣು ಸಿಗುವುದೇ ಅಪರೂಪ. ಇದು ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿ ಅಂಶವುಳ್ಳದ್ದಾಗಿದ್ದು, ನೇರಳೆ ಹಣ್ಣಿನ ಬೀಜದ ಪುಡಿ ಸೇವನೆಯಿಂದ ಮೂತ್ರ ತೊಂದರೆ ನಿವಾರಣೆಯಾಗುತ್ತದೆ. ಮೂಲವ್ಯಾದಿ, ಪಿತ್ತಜನಕಾಂಗ ತೊಂದರೆಗೂ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂಬುದು ವೈದ್ಯರ ಸಲಹೆ.
ಹಣ್ಣಿನ ವಿಧಗಳು
ನೇರಳೆ ಹಣ್ಣಿನಲ್ಲಿ ಜಂಬು ನೇರಳೆ ಹಾಗೂ ಜವಾರಿ ನೇರಳೆ, ನಾಯಿ ನೇರಳೆ ಇದ್ದು ಇದರಲ್ಲಿ ಜಂಬು ನೇರಳೆ ಹಣ್ಣು ರುಚಿಯಾಗಿರುತ್ತವೆ. ಜಂಬು ನೇರಳೆ ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಜಂಬು ನೇರಳೆ ಹೆಚ್ಚಾಗಿ ಮಾರಾಟಕ್ಕಿರುತ್ತದೆ. ಈ ಹಣ್ಣು ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನಾಯಿ ನೇರಳೆ ಹಣ್ಣುಗಳ ಮರಗಳು ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬೆಳೆದಿದ್ದು, ಇದು ಅಷ್ಟೊಂದು ರುಚಿಕರವಾಗಿಲ್ಲದ ಕಾರಣ ಅಷ್ಟೊಂದು ಜನಪ್ರಿಯವಾಗಿಲ್ಲ. ರೈತರು ವ್ಯಾಪಾರಿಗಳು ಜಂಬು ನೇರಳೆ ಗಿಡಗಳನ್ನೇ ಹೆಚ್ಚಾಗಿ ಬೆಳೆಸುತ್ತಾರೆ.100-150ಗೆ 1ಕೆಜಿ
ಒಂದು ಕೆಜಿ ನೇರಳೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ₹100 ರಿಂದ ₹150 ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ. ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚಳವಾಗಿದೆ ಎನ್ನಬಹುದು.ನೇರಳೆ ಹಣ್ಣು ಬೆಳೆಯಲು ರೈತರಿಗೆ ನರೇಗಾ ಯೋಜನೆಯಡಿ ಅವಕಾಶವಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ. ನಮ್ಮ ಕುಷ್ಟಗಿ ತಾಲೂಕಿನಲ್ಲಿ 25 ಎಕರೆಯಷ್ಟು ಮಾತ್ರ ಬೆಳೆದಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಪ್ಪ ತಿಳಿಸಿದ್ದಾರೆ.
ನೇರಳೆ ಹಣ್ಣು ಬೆಳೆದ ರೈತರಿಂದ ಖರೀದಿ ಮಾಡಿಕೊಂಡು ಸ್ವಲ್ಪ ಲಾಭದ ಮೇಲೆ ತಳ್ಳುಗಾಡಿಯಲ್ಲಿಟ್ಟುಕೊಂಡು ವ್ಯಾಪಾರ ಮಾಡಲಾಗುತ್ತೇವೆ. ಬಹಳಷ್ಟು ವ್ಯಾಪಾರಿಗಳು ಇರುವ ಕಾರಣ ದರ ಹೆಚ್ಚಿದ್ದರೂ ಲಾಭ ಕಡಿಮೆಯಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಲಕ್ಷ್ಮಮ್ಮ ಭಜಂತ್ರಿ.
ನೇರಳೆ ಹಣ್ಣು ಕೆಲವು ವರ್ಷಗಳ ಹಿಂದೆ ಯಾರು ಕೇಳುತ್ತಿದ್ದಿಲ್ಲ. ಆದರೆ, ಈಗ ಅದರಲ್ಲಿರುವ ಔಷಧ ಗುಣಗಳಿಂದ ತನ್ನ ಬೆಲೆ ಹೆಚ್ಚಿಸಿಕೊಂಡಿದೆ. ನೇರಳೆ ಹಣ್ಣಿನ ಬೇಡಿಕೆ ಹೆಚ್ಚುತ್ತಿದ್ದು, ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಗ್ರಾಹಕರು ಹೆಚ್ಚಿನ ಬೆಲೆ ನೀಡಲು ಮುಂದಾಗುತ್ತಿದ್ದಾರೆ. ರೈತರು ಮತ್ತು ವ್ಯಾಪಾರಿಗಳಿಗೆ ಉತ್ತಮ ಆದಾಯ ದೊರೆಯುತ್ತಿದೆ ಎಂದು ತಿಳಿಸಿದರು ಗ್ರಾಹಕರಾದ ಶಾರದಾ ಶೆಟ್ಟರ, ಸಂಜನಾ ಪಾಟೀಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.